ಜಾಲ್ಸೂರು: ಅಸೌಖ್ಯದಿಂದಾಗಿ ಆಸ್ಪತ್ರೆಗೆ ದಾಖಲಾದ ಯುವಕ ಮೃತ್ಯು

0

ಅಸೌಖ್ಯದಿಂದಾಗಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಯುವಕನೋರ್ವ ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಮೃತಪಟ್ಟ ಘಟನೆ ಅ.16ರಂದು ಸಂಜೆ ಸಂಭವಿಸಿದೆ.

ಜಾಲ್ಸೂರು ಗ್ರಾಮದ ಕದಿಕಡ್ಕದ ದಿ. ಬಾಬು ಅವರ ಪುತ್ರ ಕಾರ್ತಿಕ್ ಎಂಬ ಯುವಕನಿಗೆ ಜ್ವರ ಹಾಗೂ ಕಫದ ಸಮಸ್ಯೆ ಇದ್ದ ಕಾರಣದಿಂದಾಗಿ ಮನೆಯವರು ಅ.13ರಂದು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರೆನ್ನಲಾಗಿದೆ.

ಆಸ್ಪತ್ರೆಗೆ ದಾಖಲಿಸಿ, ಸಂಜೆಯ ವೇಳೆಗೆ ಉಸಿರುಗಟ್ಟುವ ಸಮಸ್ಯೆ ಉಲ್ಬಣಗೊಂಡ ಕಾರಣ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು.
ಅ‌16ರಂದು ಮಧ್ಯಾಹ್ನ ಮತ್ತೆ ಉಸಿರಾಟದ ಸಮಸ್ಯೆ ಹೆಚ್ಚಾದಾಗ ವೈದ್ಯರ ಸಲಹೆಯ ಮೇರೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡುತ್ತಿದ್ದಂತೆ ಸಂಜೆ ವೇಳೆಗೆ ಕಾರ್ತಿಕ್ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

ಮೃತ ಯುವಕ ಕಾರ್ತಿಕ್ ಅಂಗವಿಕಲರಾಗಿದ್ದು, ಅವರಿಗೆ 22 ವರ್ಷ ವಯಸ್ಸಾಗಿತ್ತು. ಮೃತರು ತಾಯಿ ಬೇಬಿ, ಸಹೋದರರಾದ ಕೇಶವ, ಧನುಷ್, ಸಹೋದರಿ ಶರ್ಮಿಳ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.