ಕಲ್ಮಡ್ಕ: ಸಾರ್ವಜನಿಕ ಶ್ರೀ ಶಾರದೋತ್ಸವ, ಸನ್ಮಾನ

0

ವೈದೇಹಿ ಯುವತಿ ಮಂಡಲ ಕಲ್ಮಡ್ಕ ಮತ್ತು ಶ್ರೀ ಶಾರದೋತ್ಸವ ಸಮಿತಿ ಕಲ್ಮಡ್ಕ ಇದರ ಆಶ್ರಯದಲ್ಲಿ 8ನೇ ವರ್ಷದ ಶ್ರೀ ಶಾರದೋತ್ಸವ ಅ. 22ರಂದು ಕಲ್ಮಡ್ಕದ ಶ್ರೀರಾಮ ಮಂದಿರದಲ್ಲಿ ನಡೆಯಿತು.


ಬೆಳಿಗ್ಗೆ ಶ್ರೀ ಶಾರದಾ ದೇವಿಯ ಪ್ರತಿಷ್ಠೆ, ಗಣಪತಿ ಹೋಮ, ಭಜನೆ ನಡೆಯಿತು. ಬಳಿಕ ಶ್ರೀರಾಮ ಸೇವಾ ಟ್ರಸ್ಟ್ ಕಲ್ಮಡ್ಕ ಇದರ ಅಧ್ಯಕ್ಷ ಗೋವಿಂದಯ್ಯ ಜೆ ಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಮೈಸೂರಿನ ವಿಶ್ರಾಂತ ಉಪನ್ಯಾಸಕಿ ಶ್ರೀಮತಿ ಶಶಿಕಲಾ ದೇವ, ವಿಶ್ರಾಂತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕಮಲ ಜೆ ನಡ್ಕ, ಕಲ್ಮಡ್ಕ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಮೋಹಿನಿ ಲತೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಹಿಳಾ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಶ್ರೀಮತಿ ಸುನಿತಾ ಬಿ, ಸುಳ್ಯ ಸರ್ಕಲ್ ಆಫೀಸ್ ಹೆಡ್ ಕಾನ್ಸ್‌ಟೇಬಲ್ ಶ್ರೀಮತಿ ಪದ್ಮಾವತಿ ಕಲ್ಮಡ್ಕರಿಗೆ ಈ ಸಂದರ್ಭದಲ್ಲಿ ಸನ್ಮಾನ ನಡೆಯಿತು.

ಶ್ರೀಮತಿ ಮಂಜುಳಾ ನಂಗಾರು, ನಳಿನಿ ರೈ ಮತ್ತು ತಾರಾವತಿ ಸನ್ಮಾನ ಪತ್ರ ವಾಚಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸಮಿತಿಯ ಅಧ್ಯಕ್ಷೆ ಶ್ರೀಮತಿ ರೂಪಾ ಸಾಯಿನಾರಾಯಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕು.‌ ಅಶ್ವಿನಿ ಬೊಮ್ಮೆಟ್ಟಿ ಸ್ವಾಗತಿಸಿ, ಮಮತಾ ಪೂವಪ್ಪ ವಂದಿಸಿದರು. ಕು. ಕಲ್ಪನಾ, ಕು. ಗ್ರೀಷ್ಮ ಮತ್ತು ಕು. ತ್ರಿಶಾ ಪ್ರಾರ್ಥಿಸಿದರು. ಶ್ರೀನಿವಾಸ ಜೋಗಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು. ಮಧ್ಯಾಹ್ನ ಮಂಗಳಾರತಿ ಬಳಿಕ ಪ್ರಸಾದ ಭೋಜನ ನಡೆದು, ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಜೆ ನಾಸಿಕ್ ಬ್ಯಾಂಡ್ ನ ವಿಶೇಷ ಆಕರ್ಷಣೆಯೊಂದಿಗೆ ವಿಜೃಂಭಣೆಯ ಶ್ರೀ ಶಾರದಾ ದೇವಿಯ ಶೋಭಾಯಾತ್ರೆ ನಡೆಯಿತು.