ಆಲೆಟ್ಟಿ ಗ್ರಾಮ ಸಭೆ

0

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್ ನಡೆಯ ಬಗ್ಗೆ ಗ್ರಾಮಸ್ಥರ ಆಕ್ರೋಶ

ಪೋಲಿಸ್ ದೂರು ನೀಡಿ ಮೂವರ ಮೇಲೆ ಕೇಸು ದಾಖಲುಮಾಡಿರುವುದನ್ನು ಆಕ್ಷೇಪಿಸಿದ ನಾಗರಿಕರು

ಆಲೆಟ್ಟಿ ಗ್ರಾಮ ಪಂಚಾಯತ್ ಇದರ ದ್ವಿತೀಯ ಹಂತದ ಗ್ರಾಮ ಸಭೆಯು ಅ.31 ರಂದು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾವಸಂತ ಆಲೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

2022-23 ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯು ಸೆ.25 ರಂದು ನಡೆದಿದ್ದು ಹಾಸ್ಟೆಲ್ ವಾರ್ಡನ್ ಹಾಗೂ ಶಿಕ್ಷಣಾಧಿಕಾರಿಯವರು ಬಾರದಿದ್ದರೆ ಸಭೆ ಮುಂದೂಡಿಕೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ ಮೇರೆಗೆ ಸಭೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ಮುಂದೂಡಿಕೆ ಮಾಡಲಾಗಿತ್ತು.

ಅದರಂತೆ ಮುಂದೂಡಲ್ಪಟ್ಟ ಗ್ರಾಮ ಸಭೆಯನ್ನು ಇಂದು ಮುಂದುವರಿಸಲಾಯಿತು.
ನೊಡೆಲ್ ಅಧಿಕಾರಿಯಾಗಿ ಸಹಾಯಕ ತೋಟಗಾರಿಕಾ ಅಧಿಕಾರಿ ಯವರು ಸಭೆಯ ಕಲಾಪವನ್ನು ಪ್ರಾರಂಭಿಸಿದರು.

ಕಳೆದ ಗ್ರಾಮಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ವಾಲ್ಮಿಕಿ ಆಶ್ರಮ ಶಾಲೆಯ ಹಾಸ್ಟೆಲ್ ವಾರ್ಡನ್ ಹಾಗೂ ಶಿಕ್ಷಣಾಧಿಕಾರಿಯವರು ಬರಬೇಕೆಂದು ಪಟ್ಟು ಹಿಡಿದಿದ್ದರು.ಅವರು ಬಾರದಿರುವ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಿಕೆಯಾಗಿತ್ತು. ಈ ಕುರಿತು
ವರದಿ ಪತ್ರಿಕೆಗಳಲ್ಲಿ ಪ್ರಕಟವಾದ ಬೆನ್ನಲ್ಲೇ
ಶಿಕ್ಷಣಾಧಿಕಾರಿಯವರು ಮರುದಿನ ಆಲೆಟ್ಟಿ ಪ್ರೌಢಶಾಲೆಗೆ ಭೇಟಿ ನೀಡಿ ಶಿಕ್ಷಕರ ಸಮಸ್ಯೆ ಬಗ್ಗೆ ಅವಲೋಕನ ನಡೆಸಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸ್ಪಂದಿಸಿದ್ದರು. ಆದರೆ ಹಾಸ್ಟೆಲ್ ವಾರ್ಡನ್ ರವರು ಆಲೆಟ್ಟಿ ವಾಲ್ಮಿಕಿ‌ ಆಶ್ರಮ ಶಾಲೆಯಲ್ಲಿ ನಡೆಯುತ್ತಿರುವ ಸಮಸ್ಯೆ ಬಗ್ಗೆ ಗ್ರಾಮ ಸಭೆಯಲ್ಲಿ ಪ್ರಶ್ನಿಸಿದ ಮೂರು ಮಂದಿ ಗ್ರಾಮಸ್ಥರ ವಿರುದ್ಧ ಪೋಲಿಸ್ ದೂರು ನೀಡಿ ಕೇಸು ದಾಖಲಿಸಿದ್ದರು. ಈ ಕುರಿತು ಪೋಲಿಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು.
ಈ ವಿಚಾರದ ಕುರಿತು ಎರಡನೇ ಹಂತದ ಗ್ರಾಮಸಭೆಯಲ್ಲಿ ತೀವ್ರ ತರದ ಆಕ್ರೋಶಕ್ಕೆ ಕಾರಣವಾಯಿತು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಾಹಿತಿ ನೀಡುವ ಸಂದರ್ಭದಲ್ಲಿ ಆಕ್ಷೇಪಿಸಿದ ಗ್ರಾಮಸ್ಥರು ಕಳೆದ ಗ್ರಾಮಸಭೆಯಲ್ಲಿ ನಿಮ್ಮ ಇಲಾಖೆಯಿಂದ ಆಶ್ರಮ ಶಾಲೆಯಲ್ಲಿ ಪೋಷಕರ ಹಾಗೂ ವಾರ್ಡನ್ ರವರ ಮಧ್ಯೆ ನಡೆದ ವಿಷಯದ ಬಗ್ಗೆ ಪ್ರಸ್ತಾಪಿಸಿರುವುದನ್ನು ಆರೋಪಿಸಿ ವಾರ್ಡನ್ ರವರು ಪ.ಪಂಗಡಕ್ಕೆ ಸೇರಿದ ಮೂವರ ಮೇಲೆ ಪೋಲಿಸ್ ದೂರು ನೀಡಿ ಕೇಸು ದಾಖಲಿಸಿದ್ದಾರೆ.
ಸಮಸ್ಯೆಯ ಕುರಿತು ಗ್ರಾಮ ಸಭೆಯಲ್ಲಿ ಮಾತನಾಡುವುದು ತಪ್ಪೆ ? ಅಧಿಕಾರಿಗಳು ಬಾರದಿರುವುದು ತಪ್ಪಲ್ಲವೇ? ಸಭೆಯಲ್ಲಿ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಿಲ್ಲ. ಬೆದರಿಕೆ ಅವಾಚ್ಯ ಶಬ್ಧಗಳನ್ನು ಬಳಸಲಿಲ್ಲ. ಶಾಲೆಯಲ್ಲಿ ಅವರು ನಡೆದುಕೊಂಡ ರೀತಿ ಸರಿಯಲ್ಲ ಎಂದು ಹೇಳಿದ್ದು ಅಪರಾಧವಾಗುವುದೇ ಎಂದು ಸುದರ್ಶನ ಪಾತಿಕಲ್ಲು ಆಕ್ರೋಶ ಭರಿತರಾಗಿ ಪ್ರಶ್ನಿಸಿದರು.
ಸಮಾಜ ಕಲ್ಯಾಣ ಇಲಾಖೆ ಪ.ಪಂಗಡಕ್ಕೆ ಸೇರಿದವರನ್ನು ಮೇಲೆತ್ತುವ ಕಾರ್ಯ ಮಾಡಬೇಕು ಹೊರತು ಇಲಾಖೆಯಲ್ಲಿರುವ ಅಧಿಕಾರಿಗಳು ಅದೇ ಪಂಗಡದವರ ಮೇಲೆ ಸುಳ್ಳು ಪೋಲಿಸ್ ಕೇಸು ದಾಖಲಿಸಿ ತುಳಿಯುವ ಕೆಲಸ ಮಾಡಲು ಮುಂದಾಗಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದರಿಂದಾಗಿ ನಮ್ಮ ಮಕ್ಕಳನ್ನು ಶಾಲೆಗೆ ನಾವು ಹೇಗೆ ಕಳುಹಿಸಬಹುದು. ನಮಗೆ ಇದಕ್ಕೆ ಪಂಚಾಯತ್ ನವರು ವ್ಯವಸ್ಥೆ ಕಲ್ಪಿಸಿಕೊಡಬೇಕು.
ನಮಗೆ ಸಂಬಂಧಿಸಿದ ಇಲಾಖೆಯಿಂದ ಅಧಿಕಾರಿ ವರ್ಗದವರ ಈ ರೀತಿಯ ವರ್ತನೆಯಿಂದ ನಾವು ಹೇಗೆ ಬದುಕಲು ಸಾಧ್ಯ ? ಎಂದು ಶ್ರೀಧರ ಮಾಣಿಮರ್ದು ಅಳಲನ್ನು ತೋಡಿಕೊಂಡರು.
ಗ್ರಾಮ ಸಭೆಯಲ್ಲಿ ಅಹವಾಲು ಸಲ್ಲಿಸುವ ಹಕ್ಕು ಗ್ರಾಮಸ್ಥರದ್ದು. ಇಲಾಖೆಯವರು ಅವರ ಮೇಲೆ ಕೇಸು ದಾಖಲಿಸಲು ಮುಂದಾಗಿರುವುದು ಸರಿಯಲ್ಲ. ನಿಮ್ಮ ಇಲಾಖೆಯ ಮಾಹಿತಿ ಸರಿಯಾಗಿ ನೀಡುತ್ತಿಲ್ಲ ಎಂದು ಸತ್ಯ ಕುಮಾರ್ ಆಡಿಂಜ ಆರೋಪಿಸಿದರು.
ಗ್ರಾಮದ ಅಭಿವೃದ್ಧಿ ಪರ ವಿಚಾರ ಹಾಗೂ ಸಮಸ್ಯೆಗಳ ಬಗ್ಗೆ ಮಾತನಾಡಲು ಗ್ರಾಮಸ್ಥರಿಗೆ ಮುಕ್ತ ಅವಕಾಶ ಗ್ರಾಮ ಸಭೆಯಲ್ಲಿ ನೀಡಲಾಗುವುದು. ಇಲಾಖೆಯು ಜನರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಬೇಕು ಹೊರತು ಅವರ ಮೇಲೆ ಪೋಲಿಸ್ ದೂರು ನೀಡಿ ಕಾನೂನು ಕೈಗೆತ್ತಿಕೊಳ್ಳುವ ಕಾರ್ಯ ಮಾಡುವುದು ಸರಿಯಲ್ಲ ಎಂದು ರಾಧಾಕೃಷ್ಣ ಪರಿವಾರಕಾನ ಅಭಿಪ್ರಾಯ ವ್ಯಕ್ತಪಡಿಸಿದರು.

ಆಲೆಟ್ಟಿ ವಾಲ್ಮಿಕಿ ಆಶ್ರಮ ಶಾಲೆಯಲ್ಲಿ ಹಿಂದಿನಿಂದಲೂ ಹೆಸರಿಗೆ ತಕ್ಕಂತೆ ಹಿಂದೂ ಧರ್ಮದ ಆಚಾರ ಪದ್ಧತಿಯಂತೆ ಮಕ್ಕಳಿಗೆ ಶಿಕ್ಷಣದ ಜತೆಗೆ ಧಾರ್ಮಿಕ ವಿಚಾರದ ವಿಷಯಗಳನ್ನು ಅಳವಡಿಸಿಕೊಂಡು ಬರಲಾಗುತ್ತಿದೆ. ಇದ್ದಕ್ಕಿದ್ದಂತೆ ಬದಲಾವಣೆ ತರುವ ಅವಶ್ಯಕತೆ ಏನಿದೆ. ವಾರ್ಡನ್ ರವರು ಪುಟ್ಟ ಮಕ್ಕಳ ಮೇಲೆ ಒತ್ತಡ ಹೇರಲು ಮುಂದಾಗಿರುವುದು ಯಾಕೆ ? ಪೋಷಕರ ಮೇಲೆ ಪೋಲಿಸ್ ದೂರು ನೀಡಲು ಮುಂದಾಗಿರುವುದು ಖಂಡನಾರ್ಹ ಎಂದು ಲತೀಶ್ ಗುಂಡ್ಯ ಆರೋಪಿಸಿದರು.

ಪಶು ಸಂಗೋಪನಾ ಇಲಾಖೆ, ಅರಣ್ಯ ಇಲಾಖೆ,
ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಅಭಿವೃದ್ಧಿ ಇಲಾಖೆ,
ಸಮಾಜ ಕಲ್ಯಾಣ ಇಲಾಖೆ,ಶಿಕ್ಷಣ ಇಲಾಖೆಯಿಂದ ದೊರಕುವ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಆನೆಗಳ ಹಾಗೂ ಮಂಗಗಳ ಹಾವಳಿ ಹೆಚ್ಚಾಗಿದ್ದು ಕೃಷಿ ಬೆಳೆಗೆ ಹಾನಿಯುಂಟು ಮಾಡುತ್ತಿದೆ. ಇವುಗಳ ನಿಯಂತ್ರಣ ಮಾಡಲು ಇಲಾಖೆ ಏನು ಕ್ರಮ ಕೈಗೊಳ್ಳಲು ಸಾಧ್ಯವಿದೆ. ಕಾಡು ಪ್ರಾಣಿಗಳ
ಹತೋಟಿಗೆ ಅರಣ್ಯ ಇಲಾಖೆಯ ವತಿಯಿಂದ ಅವುಗಳನ್ನು ಹಿಡಿದು ದಟ್ಟಾರಣ್ಯಕ್ಕೆ ಸಾಗಿಸುವ ವ್ಯವಸ್ಥೆ ಮಾಡಲು ಸಾಧ್ಯವಿದೆಯಾ ? ಎಂದು ಸುಬ್ಬಣ್ಣ ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸರಕಾರದ ಮಟ್ಟದಲ್ಲಿ ಕೃಷಿಕರ ಸಮಸ್ಯೆಗೆ ಪರಿಹಾರ ಒದಗಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಿ ಅರ್ಜಿ ಸಲ್ಲಿಸಲಾಯಿತು.

ಕೋಲ್ಚಾರು ನಾರ್ಕೋಡು ಲೋಕೋಪಯೋಗಿ ರಸ್ತೆ ಬದಿಯ ಮರ ತೆರವು ಮಾಡಲು ಆದೇಶವಾಗಿದೆ. ಕಟಾವು ಯಾಕೆ ಮಾಡಲಿಲ್ಲ ಎಂದು ಕರುಣಾಕರ ಹಾಸ್ಪಾರೆ ಪ್ರಶ್ನಿಸಿದರು.
ಸಂಬಂಧ ಪಟ್ಟ ಇಲಾಖೆ ಪಾವತಿಸಬೇಕಾದ ಮೊಬಲಗನ್ನು ಪಾವತಿ ಮಾಡದೆ ಇರುವುದರಿಂದ ಕಟಾವು ಮಾಡಿಲ್ಲ ಎಂದು ಅಧಿಕಾರಿ ಯವರು
ಉತ್ತರಿಸಿದರು.

ಜೆ.ಜೆ.ಎಂ. ಗುತ್ತಿಗೆದಾರರು ಅಸರ್ಮಕವಾಗಿ ಪೈಪು ಲೈನ್ ಮಾಡಿದ್ದಾರೆ. ಸರಕಾರದ ಕೋಟಿ ಅನುದಾನವಿದ್ದರೂ ಸಮರ್ಪಕ ವ್ಯವಸ್ಥೆ ನಿರ್ವಹಣೆ ಮಾಡುತ್ತಿಲ್ಲ ಎಂದು ರಾಧಾಕೃಷ್ಣ ಪರಿವಾರಕಾನ ಅಸಮಾಧಾನ ವ್ಯಕ್ತಪಡಿಸಿದರು.

ಜೆ.ಜೆ.ಎಂ.ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಬೇಕು ಎಂದು ಸುದರ್ಶನ ಪಾತಿಕಲ್ಲು ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ರಾಮಕ್ಕೆ ಒಟ್ಟು 4.99 ಕೋಟಿ ಅನುದಾನವಿದೆ. ಪಂಚಾಯತ್ ಸದಸ್ಯರ ಗಮನಕ್ಕೆ ತಂದು ವಾರ್ಡುವಾರು ಅವಶ್ಯಕತೆ ಮೇರೆಗೆ ನೀರಿನ ಟ್ಯಾಂಕ್ ಪೈಪು ಲೈನ್ ಮಾಡಲಾಗುತ್ತಿದೆ. ಕೂಳಿಯಡ್ಕದಲ್ಲಿರುವ ಹಳೆ ಟ್ಯಾಂಕ್ ದುರಸ್ತಿ ಪಡಿಸಿ ಪೈಪು ಲೈನ್ ವ್ಯವಸ್ಥೆಮಾಡಲಾಗುವುದುಎಂದು ಇಂಜಿನಿಯರ್ ಉತ್ತರಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಶ್ರೀಮತಿ ಕಮಲ ನಾಗಪಟ್ಟಣ, ಪಿ.ಡಿ.ಒ ಸೃಜನ್ ಎ.ಜಿ,
ಸದಸ್ಯರಾದ ಸತ್ಯಕುಮಾರ್ ಆಡಿಂಜ,ಧರ್ಮಪಾಲ ಕೊಯಿಂಗಾಜೆ, ದಿನೇಶ್ ಕಣಕ್ಕೂರು, ಶಿವಾನಂದ ರಂಗತ್ತಮಲೆ,
ಸತ್ಯಪ್ರಸಾದ್ ಗಬ್ಬಲ್ಕಜೆ,
ಸುದೇಶ್ ಅರಂಬೂರು, ರತೀಶನ್ ಅರಂಬೂರು, ಪುಷ್ಪಾವತಿ ಕುಡೆಕಲ್ಲು, ಗೀತಾ ಕೋಲ್ಚಾರು, ಶಶಿಕಲಾ ದೋಣಿಮೂಲೆ, ಮೀನಾಕ್ಷಿ ಕುಡೆಕಲ್ಲು, ವೇದಾವತಿ ನೆಡ್ಚಿಲು, ಅನಿತಾ ಎಸ್,
ಕುಸುಮಾವತಿ ಬಿಲ್ಲರಮಜಲು, ಎಂ.ಜಿ.ಭಾಗೀರಥಿ ಪತ್ತುಕುಂಜ ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿ ಸಹಕರಿಸಿದರು.