ಕಂಡಕ್ಟರ್‌ಗಳ ಕೊರತೆಯಿಂದ ವ್ಯತ್ಯಯಗೊಂಡಿರುವ ಸುಳ್ಯ ಡಿಪೋದ ಬಸ್ ಸಂಚಾರ ವ್ಯವಸ್ಥೆ ನಾಳೆಯಿಂದ ಮತ್ತಷ್ಟು ಹದಗೆಡುವ ಸಾಧ್ಯತೆ ಕಂಡು ಬಂದಿದೆ. ಕೆ.ಎಸ್.ಆರ್.ಟಿ.ಸಿ. ಸುಳ್ಯ ಡಿಪೊದಲ್ಲಿ ಗುತ್ತಿಗೆ ಆಧಾರದಲ್ಲಿ ಬಸ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು ೩೦ ರಷ್ಟು ಚಾಲಕರ ಗುತ್ತಿಗೆ ಅವಧಿ ಇಂದಿಗೆ ಮುಗಿಯುತ್ತಿದ್ದು, ನಾಳೆಯಿಂದ ಅವರಿಗೆ ಕೆಲಸ ಕೊಡ ಬಾರದೆಂಬ ಆದೇಶ ಬಂದಿರುವುದರಿಂದ ಕಂಡಕ್ಟರ್‌ಗಳ ಜತೆಗೆ ಚಾಲಕರ ಕೊರತೆಯೂ ಬಾಧಿಸಿ ಹಲವು ರೂಟ್‌ಗಳ ಬಸ್ ಸಂಚಾರ ವ್ಯತ್ಯಯಗೊಳ್ಳಲಿದೆ.
ಸುಳ್ಯ ಡಿಪೋದಲ್ಲಿ ಪನ್ನಗ ಸಂಸ್ಥೆಯ ಮೂಲಕ ಕೆಲಸ ಪಡೆದುಕೊಂಡಿರುವ ೨೯ ಮಂದಿ ಚಾಲಕರು ಹಾಗೂ ಪೂಜ್ಯಾಯ ಸಂಸ್ಥೆಯ ಮೂಲಕ ಕೆಲಸ ಪಡೆದುಕೊಂಡಿರುವ ೯ ಮಂದಿ ಚಾಲಕರಿದ್ದಾರೆ. ಇವರಲ್ಲಿ ಪನ್ನಗ ಸಂಸ್ಥೆಯ ಮೂಲಕ ಬಂದಿರುವ ೨೯ ಮಂದಿಯ ಗುತ್ತಿಗೆ ಅವಧಿ ಇಂದಿಗೆ ಮುಗಿದಿದೆ. ಆ ೨೯ಮಂದಿಗೆ ನಾಳೆಯಿಂದ ಡ್ಯೂಟಿ ಕೊಡಬಾರದೆಂದು ಮೇಲಧಿಕಾರಿಗಳಿಂದ ಆದೇಶ ಬಂದಿರುವುದರಿಂದ ನಾಳೆಯಿಂದ ೨೯ ಚಾಲಕರ ಕೊರತೆ ಬೀಳಲಿದೆ. ಅದಕ್ಕಾಗಿ ರಜೆಯಲ್ಲಿರುವ ಪರ್ಮನೆಂಟ್ ಬಸ್ ಚಾಲಕರನ್ನು ಕರ್ತವ್ಯಕ್ಕೆ ಮರಳುವಂತೆ ಸೂಚಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ರಜೆಯಲ್ಲಿರುವವರು ಬಂದರೂ ಎಂಟು – ಹತ್ತು ಮಂದಿ ಚಾಲಕರ ಕೊರತೆ ಎದುರಾಗಲಿದ್ದು, ದ.೧೬ ಸೋಮವಾರದಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚು ಸಮಸ್ಯೆ ಅನುಭವಿಸುವ ಎಲ್ಲ ಸಾಧ್ಯತೆ ಕಂಡು ಬರುತ್ತಿದೆ.