ಗಿರಿಗದ್ದೆ ಮಹಾಲಿಂಗ ಭಟ್ ನಿಧನ

0


ಕುಮಾರಪರ್ವತ ಚಾರಣದ ವೇಳೆ ಪರ್ವತಾರೋಹಿಗಳಿಗೆ ಅನ್ನ ಮತ್ತು ನೀರಿನ ವ್ಯವಸ್ಥೆ ಮಾಡುತ್ತಿದ್ದ ಗಿರಿಗದ್ದೆ ಮಹಾಲಿಂಗ ಭಟ್ಟರು ಇಂದು ಮುಂಜಾನೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಸುಮಾರು 65 ವರ್ಷ ವಯಸ್ಸಾಗಿತ್ತು. ಸುಬ್ರಹ್ಮಣ್ಯದ ನೂಚಿಲದಲ್ಲಿರುವ ಅವರ ಮನೆಯಲ್ಲಿ ಅಂತ್ಯಸಂಸ್ಕಾರದ ವಿಧಿವಿಧಾನ ನೆರವೇರಿತು.


ಕುಕ್ಕೆ ಸುಬ್ರಹ್ಮಣ್ಯದಿಂದ 4 ಕಿ.ಮೀ.ದೂರದ ಗಿರಿಗದ್ದೆಯಲ್ಲಿ ನೆಲೆಸಿ ಕೃಷಿ ಮತ್ತು ಹೈನುಗಾರಿಕೆ ನಡೆಸುತ್ತಿದ್ದ ಮಹಾಲಿಂಗೇಶ್ವರ ಭಟ್ಟರು ಚಾರಣಿಗರ ಪಾಲಿಗೆ ಅನ್ನದಾತರಾಗಿದ್ದರು. ಗಿರಿಗದ್ದೆ ಭಟ್ಟರೆಂದೇ ಹೆಸರುವಾಸಿಯಾಗಿದ್ದ ಇವರು ಪ್ರತಿದಿನ ಗಿರಿಗದ್ದೆಯಿಂದ ಸುಬ್ರಹ್ಮಣ್ಯಕ್ಕೆ ಬಂದು ಹೋಗುತ್ತಿದ್ದರು. ತಮಗೆ ದಿನನಿತ್ಯಕ್ಕೆ ಬೇಕಾದ ಅಕ್ಕಿ ಬೇಳೆ ಇತ್ಯಾದಿಗಳನ್ನು ಬೆಟ್ಟ ಏರುವ ಕಾಲ್ನಡಿಗೆ ಹಾದಿಯಲ್ಲೇ ತಲೆಹೊರೆಯಲ್ಲಿ ಕೊಂಡೊಯ್ಯುತ್ತಿದ್ದರು. ಕುಮಾರಪರ್ವತಕ್ಕೆ ಹೋಗುವ ಬರುವ ಚಾರಣಿಗರು ಭಟ್ಟರ ಮನೆಯಲ್ಲಿ ಊಟ ಮಾಡಿಯೇ ಮುಂದೆ ಸಾಗುತ್ತಿದ್ದರು. ಕೆಲ ಚಾರಣಿಗರು ಗಿರಿಗದ್ದೆ ಮನೆಯಲ್ಲಿಯೇ ವಾಸ್ತವ್ಯ ಹೂಡಿ ಮರುದಿನ ಬೆಳಿಗ್ಗೆ ಹೊರಡುತ್ತಿದ್ದರು.


೧೯೭೪ರಲ್ಲಿ ಇವರ ತಂದೆ ಪರಮೇಶ್ವರ ಭಟ್ಟರು ಗಿರಿಗದ್ದೆಗೆ ಬಂದು ನೆಲೆಸಿದ್ದರು. ಅವರ ಕಾಲಾನಂತರ ಮಕ್ಕಳಾದ ವೆಂಕಟ್ರಮಣ ಜೋಯಿಸ, ಮಹಾಲಿಂಗ ಭಟ್ ಮತ್ತು ಸಹೋದರರು ಗಿರಿಗದ್ದೆಯಲ್ಲಿ ಕೃಷಿ ಮತ್ತು ಹೈನುಗಾರಿಕೆ ನೋಡಿಕೊಳ್ಳುತ್ತಿದ್ದರು. ಚಾರಣಿಗರಿಗೆ ನೆರಳು ಮತ್ತು ಆಹಾರ ನೀಡುವ ಸಂಪ್ರದಾಯವನ್ನು ಇವರು ಮುಂದುವರಿಸಿದ್ದರು. ಅಣ್ಣ ವೆಂಕಟ್ರಮಣ ಜೋಯಿಸರು ಇತ್ತೀಚೆಗೆ ನಿಧನರಾಗಿದ್ದರು. ಮಹಾಲಿಂಗ ಭಟ್ಟರು ನೂಚಿಲದಲ್ಲಿ ನೆಲೆಸಿ ಗಿರಿಗದ್ದೆಗೆ ಹೋಗಿ ಬರುತ್ತಿದ್ದರು. ಸಹೋದರರಾದ ಸುಬ್ರಹ್ಮಣ್ಯದಲ್ಲಿರುವ ಗೋವಿಂದ ಭಟ್, ಗಿರಿಗದ್ದೆಯಲ್ಲಿ ನೆಲೆಸಿರುವ ನಾರಾಯಣ ಭಟ್ ಮತ್ತು ಮಂಗಳೂರಿನಲ್ಲಿರುವ ಗಣೇಶ್ ಭಟ್, ಮಕ್ಕಳಾದ ಪ್ರಸಾದ್, ಸವಿತಾ, ಕವಿತಾ, ವಾಣಿಯವರನ್ನು ಅಗಲಿದ್ದಾರೆ.