ಸುಳ್ಯದಲ್ಲಿ ವಿನಯ ಕುಮಾರ್ ಸೊರಕೆ ಹೇಳಿಕೆ
ಕರ್ನಾಟಕ ರಾಜ್ಯ ಮಟ್ಟದ ಕಾಂಗ್ರೆಸ್ ಪದಾಧಿಕಾರಿಗಳ ಹಾಗೂ ಈ ಭಾಗದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಒಂದು ಜ.21 ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ಮಾಜಿ ಸಂಸದ , ಕಾಂಗ್ರೆಸ್ ನಾಯಕ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಸುಳ್ಯದಲ್ಲಿ ಈ ಕುರಿತು ನಡೆದ ಪೂರ್ವಭಾವಿ ಸಭೆಯ ಬಳಿಕ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರತಿ ರಾಜ್ಯದಲ್ಲಿ ಇಂತಹ ಸಮಾವೇಶ ನಡೆಸಬೇಕೆಂದು ಎ. ಐ. ಸಿ. ಸಿ. ಅಧ್ಯಕ್ಷರ ತೀರ್ಮಾನವಾಗಿತ್ತು. ಕರ್ನಾಟಕ ರಾಜ್ಯದ ಸಭೆಯು ಮಂಗಳೂರಿನಲ್ಲಿ ನಡೆಯುತ್ತಿದೆ. ಎ ಐ ಸಿ ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮೊದಲಾದ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈ ಭಾಗದಲ್ಲಿ ಪಕ್ಷಕ್ಕೆ ಸೋಲಾಗಿರುವ ಹಿನ್ನಲೆಯಲ್ಲಿ ಈ ಭಾಗದಿಂದಲೇ ಇಂತಹ ಸಮಾವೇಶ ಆರಂಭವಾಗಿದೆ. ಈ ಭಾಗದ ಜಿಲ್ಲೆಗಳಿಂದ ಪ್ರತಿ ಬೂತ್ ನಿಂದ ೧೦ ಜನ ಕಾರ್ಯಕರ್ತರಂತೆ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿರಿಸಿ ಪಕ್ಷದ ಕಾರ್ಯಕರ್ತರಲ್ಲಿ ಆತ್ಮ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕ ಭರತ್ ಮುಂಡೋಡಿ ಹೇಳಿದರು.
ಪಕ್ಷದ ನಾಯಕರಾದ ಪಿ.ಸಿ. ಜಯರಾಂ , ಎಂ. ವೆಂಕಪ್ಪ ಗೌಡ , ಪಿ.ಎಸ್. ಗಂಗಾಧರ್, ಸರಸ್ವತಿ ಕಾಮತ್, ರಾಜೀವಿ ಆರ್. ರೈ, ಅಶೋಕ್ ಚೂಂತಾರು, ಸುಜಯ ಕೃಷ್ಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.