ಪೆರಾಜೆ ಕುಂಬಳಚೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಅಮೃತಮಹೋತ್ಸವ

0

ದೇಶಕ್ಕೆ ಸರ್ಕಾರಿ ಶಾಲೆಗಳ ಕೊಡುಗೆ ಅಪಾರ – ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆಲೋಚನಾ ಶಕ್ತಿ ಬೆಳೆಸಬೇಕು: ಶಾಸಕ ಎ.ಎಸ್. ಪೊನ್ನಣ್ಣ

ಪೆರಾಜೆ ಗ್ರಾಮದ ಕುಂಬಳಚೇರಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತಮಹೋತ್ಸವ ಜ.27ರಂದು ಶಾಲಾ ರಂಗಮಂದಿರದಲ್ಲಿ ನಡೆಯಿತು.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಶಾಲಾ ಕೊಠಡಿ ಹಾಗೂ ಬಿ.ಎಸ್.ಎನ್.ಎಲ್. ಇಂಟರ್ ನೆಟ್ ಸೌಲಭ್ಯ ಹಾಗೂ ಸ್ಮಾರ್ಟ್ ಕ್ಲಾಸ್ ಕೊಠಡಿಯನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮವನ್ನು ದೀಪಬೆಳಗಿಸಿ, ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ” ಸರ್ಕಾರಿ ಶಾಲೆಗಳಿಗೆ ತನ್ನದೇ ಇತಿಹಾಸವಿದೆ. ಸರ್ಕಾರಿ ಶಾಲೆಗಳು ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಜನೆ ಮಾಡಿದ ವಿದ್ಯಾರ್ಥಿಗಳು ಇಂದು ತಮ್ಮದೇ ಆದಂತಹ ಸಾಧನೆ ಮಾಡಿರುತ್ತಾರೆ. ಈ ಶಾಲೆಯನ್ನು ನಮ್ಮ ಹಿರಿಯರು ಕಟ್ಟಿ ಬೆಳೆಸಿದ್ದು, ಹಿರಿಯರಿಗೆ ಗೌರವ ನೀಡಬೇಕಾದದ್ದು ನಮ್ಮ ಕರ್ತವ್ಯ. ಸದಾ ಬದಲಾಗುತ್ತಿರುವ ಜಗತ್ತಿನೊಂದಿಗೆ ನಾವೂ ಬದಲಾಗಬೇಕು. ಇದು ಡಿಜಿಟಲ್ ಯುಗ, ಎಲ್ಲಾ ರೀತಿಯ ತಂತ್ರಜ್ಞಾನಗಳ ಬದಲಾವಣೆ ನಮ್ಮ ಕಣ್ಣ ಮುಂದಿದೆ. ಕೇವಲ ಶಾಲಾ ವಿದ್ಯಾಭ್ಯಾಸ ಮಾತ್ರ ಸಾಲದು. ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಗಳಲ್ಲಿ ಆಲೋಚನಾ ಶಕ್ತಿ, ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಬೆಳೆಸಬೇಕು. ಆಗ ಮುಂದೆ ವಿದ್ಯಾರ್ಥಿಗಳು ಉತ್ತಮ ನಾಗರಿಕರನ್ನಾಗಿ ಮಾಡಲು ಸಾಧ್ಯವಿದೆ ಎಂದು ಹೇಳಿದರು.
ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟರಮಣ ರಾವ್ ಮಂಕುಡೆ ಅವರು ಮುಖ್ಯ ಭಾಷಣಗಾರರಾಗಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಬಳ್ಳಡ್ಕ, ಶಾಲಾ ಅಮೃತಮಹೋತ್ಸವ ಸಮಿತಿ ಅಧ್ಯಕ್ಷೆ ಶ್ರೀಮತಿ ಪ್ರಮೀಳ ಭಾರದ್ವಾಜ್ ಬಂಗಾರಕೋಡಿ, ಗ್ರಾ.ಪಂ. ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಕೊಡಗು ಆಡಳಿತ ಮತ್ತು ಅಭಿವೃದ್ಧಿ ಉಪನಿರ್ದೇಶಕ ಚಂದ್ರಕಾಂತ್, ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ದೊಡ್ಡಗೌಡ, ಪೆರಾಜೆ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಅಮೃತಮಹೋತ್ಸವ ಸಮಿತಿ ಗೌರವ ಸಲಹೆಗಾರರುಗಳಾದ ಜಿತೇಂದ್ರ ನಿಡ್ಯಮಲೆ, ಸುರೇಶ್ ಪೆರುಮುಂಡ ಉಪಸ್ಥಿತರಿದ್ದರು.
ಗೌರವ ಉಪಸ್ಥಿತರಾಗಿ ಗ್ರಾ.ಪಂ. ಸದಸ್ಯರಾದ ಉದಯ್ ಚಂದ್ರ ಕುಂಬಳಚೇರಿ, ಪ್ರವೀಣ್ ಮಜಿಕೋಡಿ, ಭೂದೇವಿ, ಬೆಂಗಳೂರಿನ ವಿ.ಅ. ಎಸ್.ಎಫ್ ಸ್ವರಾಜ್ ಹೆಚ್. ಉಪಸ್ಥಿತರಿದ್ದರು.

ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರು ಸಭಾ ಕಾರ್ಯಕ್ರಮಕ್ಕೂ ಮುಂಚಿತವಾಗಿ ಆಗಮಿಸಿ,ಶುಭಹಾರೈಸಿ, ತೆರಳಿದ್ದರು.
ಶಾಲಾ ಅಧ್ಯಾಪಕ ಚಂದ್ರಶೇಖರ ಗುಡ್ಡೆಮನೆ ಶಾಲಾ ವರದಿ ಮಂಡಿಸಿದರು.
ಈ ಸಂದರ್ಭದಲ್ಲಿ ಶಾಲಾ ಅಮೃತಮಹೋತ್ಸವದ ಪ್ರಯುಕ್ತ ನಡೆಸಿದ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ರಾಜು ಅವರು ಸ್ವಾಗತಿಸಿದರು.