ಗೂನಡ್ಕ ದೊಡ್ಡಡ್ಕ – ರಾಜಾರಾಂಪುರದಲ್ಲಿ 43ನೇ ವರ್ಷದ ಶ್ರೀ ಆದಿಬ್ರಹ್ಮ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ

0

ಏಕಕಾಲದಲ್ಲಿ ನರ್ತನ ಸೇವೆ ಮೂಲಕ ಭಕ್ತಾದಿಗಳಿಗೆ ದರ್ಶನ ನೀಡಿದ ಹದಿನಾರು ಕೊರಗಜ್ಜ ದೈವಗಳು

ದ.ಕ. ಸಂಪಾಜೆ ಗ್ರಾಮದ ಗೂನಡ್ಕ – ದೊಡ್ಡಡ್ಕ ರಾಜಾರಾಂಪುರದಲ್ಲಿ 43ನೇ ವರ್ಷದ ಶ್ರೀ ಆದಿಬ್ರಹ್ಮ ಮೊಗೇರ್ಕಳ ನೇಮೋತ್ಸವ ಹಾಗೂ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವವು ಮಾ.9 ಮತ್ತು 10ರಂದು ನಡೆಯಿತು.

ಮಾ.9ರಂದು ಬೆಳಿಗ್ಗೆ ಸ್ಥಳ ಶುದ್ಧೀಕರಣ, ಐದು ತಂಡಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಅನ್ನಸಂತರ್ಪಣೆ, ಅಪರಾಹ್ನ ಮಂತ್ರಮೂರ್ತಿ ಗುಳಿಗ ದೈವದ ನೇಮ, ರಾತ್ರಿ ಅನ್ನಸಂತರ್ಪಣೆ ಬಳಿಕ ಶ್ರೀ ಮೊಗೇರ್ಕಳ ದೈವದ ಗರಡಿ ಇಳಿಸಲಾಯಿತು.

ಮಧ್ಯರಾತ್ರಿ ಮಾಯೆದ ದೇವಿ ಗರಡಿ ಇಳಿಸಲಾಯಿತು. ಆ ಬಳಿಕ ಬಟ್ಟಲುಕಾಣಿಕೆ, ಹೂವಿನ ಹಾರ ಅರ್ಪಣೆ, ಮೊಗೇರ ಪೂಜಾರಿಗಳ ದರ್ಶನ ಸವಾರಿ, ಹರಿಕೆ ಹಾಗೂ ಪ್ರಸಾದ ವಿತರಣೆ ಜರುಗಿತು.

ಮಾ.10ರಂದು ಬೆಳಿಗ್ಗೆ ಏಕಕಾಲದಲ್ಲಿ ಒಟ್ಟು ಹದಿನಾರು ಶ್ರೀ ಸ್ವಾಮಿ ಕೊರಗಜ್ಜ ದೈವಗಳು ಭಕ್ತಾದಿಗಳಿಗೆ ನರ್ತನ ಸೇವೆಯ ಮೂಲಕ ದರ್ಶನ ನೀಡಿದವು. ಮಧ್ಯಾಹ್ನ ಪ್ರಸಾದ ವಿತರಣೆ, ಹಣ್ಣುಕಾಯಿ, ಅನ್ನಸಂತರ್ಪಣೆ ಜರುಗಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಜಿ.ಕೆ. ಚಂದ್ರಶೇಖರ ಬೆಳ್ಚಪ್ಪಾಡ, ಪ್ರೋತ್ಸಾಹಕ ಸುಂದರ ಪೂಜಾರಿ ದೊಡ್ಡಡ್ಕ, ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸರ್ವ ಸದಸ್ಯರುಗಳು ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.