ಜಾಲ್ಸೂರು: ಕಲ್ಲಮುರದ ಸರ್ಕಾರಿ ಜಾಗ ಹಾಗೂ ಪ್ರಸ್ತುತ ಇರುವ ಪ.ಜಾತಿ ಕಾಲನಿ ಜಾಗ ರೆಕಾರ್ಡ್ ಮಾಡಿಕೊಡುವಂತೆ ಕಾಲನಿ ನಿವಾಸಿಗಳಿಂದ ಗ್ರಾ.ಪಂ. ಗೆ ಮನವಿ

0

ಜಾಲ್ಸೂರು ಗ್ರಾಮದ ಕಲ್ಲಮುರದಲ್ಲಿರುವ ಪರಿಶಿಷ್ಟ ಜಾತಿ ಕಾಲನಿ ನಿವಾಸಿಗಳಿಗೆ ಪ್ರಸ್ತುತ ಇರುವ ಜಾಗದ ರೆಕಾರ್ಡ್ ಮಾಡಿಕೊಡುವಂತೆ ಹಾಗೂ ಅಲ್ಲಿರುವ 46 ಸೆಂಟ್ಸ್ ಸರ್ಕಾರಿ ಜಾಗವನ್ನು ಪರಿಶಿಷ್ಟ ಜಾತಿ ಕಾಲನಿ ನಿವಾಸಿಗಳಿಗೆ ನೀಡುವಂತೆ ಕಾಲನಿ ನಿವಾಸಿಗಳು ಮೇ.29ರಂದು ಜಾಲ್ಸೂರು ಗ್ರಾ.ಪಂ.ಗೆ ಮನವಿ ಸಲ್ಲಿಸಿದರು.

ಇತ್ತೀಚೆಗೆ ಕಲ್ಲಮುರದಲ್ಲಿ ಖಾಸಗಿ ಜಾಗಕ್ಕೆ ಮಣ್ಣು ಹಾಕಿ ಎತ್ತರಿಸುವ ಕೆಲಸ ಮಾಡಲಾಗಿದ್ದು, ಆ ಸಂದರ್ಭದಲ್ಲಿ ಕಲ್ಲಮುರ ಪರಿಶಿಷ್ಟ ಜಾತಿ ಕಾಲನಿಯ ನಿವಾಸಿಗಳಿಗೆ ತೊಂದರೆಯಾಗಿದ್ದು, ಸ್ಥಳಕ್ಕೆ ಶಾಸಕಿ ಭಾಗೀರಥಿ ಮುರುಳ್ಯ, ತಹಶಿಲ್ದಾರ್ ಮಂಜುನಾಥ್ ಅವರು ಬಂದು ಕೆಲಸ ನಿಲ್ಲಿಸಿದ್ದರು.


ಆ ಬಳಿಕ ಕಾಲನಿ ನಿವಾಸಿಗಳು ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಭೇಟಿಯಾಗಿ ತಮಗೆ ಅಲ್ಲಿರುವ ಸರ್ಕಾರಿ ಜಾಗ ನೀಡುವಂತೆ ಮನವಿ ಸಲ್ಲಿಸಿದ್ದರು. ಇದೀಗ ಕಾಲನಿ ನಿವಾಸಿಗಳು ಪ್ರಸ್ತುತ ತಾವು ಕುಳಿತಿರುವ ಜಾಗವನ್ನು ತಮ್ಮ ತಮ್ಮ ಹೆಸರಿನಲ್ಲಿ ರೆಕಾರ್ಡ್ ಮಾಡಿಕೊಡಬೇಕು. ಅಲ್ಲದೇ, ಅಲ್ಲಿರುವ 46 ಸೆಂಟ್ಸ್ ಸರ್ಕಾರಿ ಜಾಗವನ್ನು ತಮಗೆ ನೀಡಬೇಕೆಂದು ಜಾಲ್ಸೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ ಅವರಿಗೆ ಮನವಿ ಮಾಡಿಕೊಂಡರು.


ಈ ಸಂದರ್ಭದಲ್ಲಿ ಕಾಲನಿ ನಿವಾಸಿಗಳು, ಗ್ರಾ.ಪಂ. ಸದಸ್ಯರಾದ ಕೆ.ಎಂ. ಬಾಬು ಕದಿಕಡ್ಕ, ಶ್ರೀಮತಿ ಗೀತಾ ಗೋಪಿನಾಥ್ ಬೊಳುಬೈಲು, ಗ್ರಾ.ಪಂ. ಕಾರ್ಯದರ್ಶಿ ಸುಂದರ ಮುಪ್ಪೇರ್ಯ ಉಪಸ್ಥಿತರಿದ್ದರು.