ನಾರ್ಕೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟು ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಣೆ

0

ವಿದ್ಯಾರ್ಥಿಗಳು ತಮ್ಮ ಮನಸ್ಸುಗಳನ್ನು ಚಿಂತನೆಗೊಳಪಡಿಸಿ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಲೇಖಕಿ ಚಂದ್ರಾವತಿ ಬಡ್ಡಡ್ಕ ಹೇಳಿದರು.

ಅವರು ಶ್ರೀ ಅಜ್ಜಾವರ ದೇವರ ಕಳಿಯ ಚೈತನ್ಯ ಸೇವಾಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಯವರು ಆಲೆಟ್ಟಿ ನಾರ್ಕೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದ ನೋಟು ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ಶಾಲೆಯಲ್ಲಿ ವಿತರಿಸಿ ಮಾತನಾಡಿದರು.

ಸ್ವಾಮೀಜಿಯವರು ಬರೆದ ಬ್ರಹ್ಮಸತ್ಯ ಜಗತ್ ಮಿಥ್ಯ ಎಂಬ ಕೃತಿಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿ ಎಲ್ಲ ವಿದ್ಯಾರ್ಥಿಗಳಿಗೂ ಪುಸ್ತಕವನ್ನು ಹಂಚಲಾಯಿತು.

ಶ್ರೀ ಯೋಗೇಶ್ವ ರಾನಂದ ಸರಸ್ವತಿ ಸ್ವಾಮೀಜಿತವರು ಮಾತನಾಡಿ, “ಉಚಿತವಾಗಿ ನೀಡಿದ ಪುಸ್ತಕಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಬೇಕು. ಗುರು ಹಿರಿಯರಿಗೆ ಸಮಾಜದಲ್ಲಿ ಉತ್ತಮ ಹೆಸರು ತರಬೇಕು” ಎಂದು ಹೇಳಿದರು.

ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ರತ್ನಾಕರ ಕುಡೆಕಲ್ಲು, ಎಲ್.ಕೆ.ಜಿ, ಯು.ಕೆ.ಜಿ ನಿರ್ವಹಣಾ ಸಮಿತಿಯ ಖಜಾಂಚಿ ತೀರ್ಥಕುಮಾರ್ ಕುಂಚಡ್ಕ ಹಾಗೂ ಶಾಲಾ ಮುಖ್ಯೋಪಾಧ್ಯಾಯನಿ ಸುನಂದ ಜಿ ಉಪಸ್ಥಿತರಿದ್ದರು. ಶಿಕ್ಷಕಿ ರೇಖಾ ಕೆ. ಸ್ವಾಗತಿಸಿದರು. ಸುನಿಲ್ ಕುಮಾರ್ ಕೆ. ಕಾರ್ಯಕ್ರಮ ನಿರೂಪಿಸಿ, ಸೀತಮ್ಮ ವಂದನಾರ್ಪಣೆಗೈದರು.