ಪ್ರಾಕೃತಿಕ ವಿಕೋಪ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದರೆ ಕ್ರಮ : ಯಾವುದೇ ಸಂದರ್ಭದಲ್ಲೂ ಸಾರ್ವಜನಿಕರಿಂದ ದೂರವಾಣಿ ಕರೆ ಬಂದರೆ ಅಧಿಕಾರಿಗಳು ಸ್ವೀಕರಿಸಬೇಕು

0

ಶಾಸಕರು, ಎ.ಸಿ. ಯವರ ನೇತೃತ್ವದಲ್ಲಿ ಪ್ರಾಕೃತಿಕ ವಿಕೋಪ ಸಭೆ

ಮಳೆಗಾಲದ ಸಂದರ್ಭದಲ್ಲಿ ಅಧಿಕಾರಿಗಳು ಕೇಂದ್ರ ಸ್ಥಾನವನ್ನು ಬಿಟ್ಟು ಹೊರಗೆ ಹೋಗಬಾರದು. ಮಲೆನಾಡು ಪ್ರದೇಶವಾಗಿರುವುದರಿಂದ ಯಾವ ಸಂದರ್ಭದಲ್ಲಿ ಏನಾಗುತ್ತದೆ ಎಂದು ತಿಳಿಯುವುದಿಲ್ಲ. ಪ್ರಾಕೃತಿಕ ವಿಕೋಪ ವಿಚಾರದಲ್ಲಿ ಯಾರೂ ನಿರ್ಲಕ್ಷ್ಯ ವಹಿಸಬಾರದು. ಸಾರ್ವಜನಿಕರು ಯಾವುದೇ ಸಂದರ್ಭದಲ್ಲಿ ಫೋನ್ ಮಾಡಿದರೂ ಅಧಿಕಾರಿಗಳು ಸ್ವೀಕರಿಸಬೇಕು ಎಂದು ಶಾಸಕರು ಹಾಗೂ ಪುತ್ತೂರು ಸಹಾಯಕ ಉಪವಿಭಾಗಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜೂ.13ರಂದು ಸುಳ್ಯ ತಾಲೂಕು ಪಂಚಾಯತ್ ನಲ್ಲಿ ನಡೆದ ತಾಲೂಕು ಮಟ್ಟದ ಪ್ರಾಕೃತಿಕ ವಿಕೋಪದ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕರು ಸೂಚನೆ ನೀಡಿದರು.

ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಅಪಾಯಕಾರಿ ಮರಗಳಿದ್ದರೆ ಪರಿಶೀಲನೆ ನಡೆಸಿ ತೆರವು ಮಾಡಬೇಕು. ನೀರು ಸರಾಗವಾಗಿ ಹರಿದು ಹೋಗುವಂತೆ ಎಚ್ಚರ ವಹಿಸಬೇಕು. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಫಾಗಿಂಗ್ ಮಾಡಲು ಆದ್ಯತೆ ನೀಡಬೇಕು, ಕುಡಿಯುವ ನೀರು ಶುದ್ಧವಾಗಿರಬೇಕು ಇತ್ಯಾದಿಗಳ ಕುರಿತು ವಿವರ ನೀಡಿದರು.

ವಿದ್ಯುತ್ ಸಮಸ್ಯೆಯ ಬಗ್ಗೆ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಸುಳ್ಯ ತಾಲೂಕಿನಲ್ಲಿ ನಿರಂತರ ವಿದ್ಯುತ್ ಕಡಿತ ಸಮಸ್ಯೆಯ ಬಗ್ಗೆ ದೂರುಗಳು ಬರುತಿದೆ. ಗ್ರಾಮೀಣ ಭಾಗದಲ್ಲಿ ವಾರಗಟ್ಟಲೆ ವಿದ್ಯುತ್ ಕಡಿತ ಆಗಿರುವ ಬಗ್ಗೆ ದೂರುಗಳಿವೆ.

ಅದು ಆಗಬಾರದು ಕೂಡಲೇ ಸ್ಪಂದಿಸಿ ಸಮಸ್ಯೆಗೆ ಪರಿಹಾರ ಹುಡುಕಬೇಕು. ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಹಾಯಕ ಕಮೀಷನರ್ ಸೂಚನೆ ನೀಡಿದರು.

ತಾಲೂಕಿನಲ್ಲಿ ವಿದ್ಯುತ್‌ ಸರಬರಾಜಿಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ವಾರದಲ್ಲಿ ವರದಿ ಸಲ್ಲಿಸುವಂತೆ ಅವರು ಮೆಸ್ಕಾಂಗೆ ಆದೇಶ ನೀಡಿದರು. ವಿದ್ಯುತ್ ಸರಬರಾಜಿಗೆ ಕೈಗೊಂಡ ಕ್ರಮಗಳು, ಇರುವ ಉಪಕರಣ, ಗ್ಯಾಂಗ್‌ಮನ್, ಲೈನ್ ಮೆನ್, ಸಿಬ್ಬಂದಿಗಳು ಹೀಗೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಅನುಪಾಲನಾ ವರದಿ ಸಲ್ಲಿಸುವಂತೆ ಎಸಿಯವರು ಸೂಚಿಸಿದರು. ತಾಲೂಕು ಕಂಟ್ರೋಲ್ ರೂಂಗೆ ಒಬ್ಬರು ಮೆಸ್ಕಾಂ ಸಿಬ್ಬಂದಿ ನೇಮಕ ಮಾಡಬೇಕು. ವಿದ್ಯುತ್ ಸಮಸ್ಯೆ ಕುರಿತು ಯಾವುದೇ ದೂರು ಬಂದರೂ ಕೂಡಲೇ ಸ್ಪಂದಿಸಿ, ಸಮಸ್ಯೆ ಪರಿಹಾರ ಮಾಡಬೇಕು ಜೊತೆಗೆ ಜನರಿಗೆ ಸರಿಯಾದ ಮಾಹಿತಿ ನೀಡಬೇಕು. ವಿದ್ಯುತ್ ಸಮಸ್ಯೆ ಕುರಿತು ಮುಂದೆ ಯಾವುದೇ ದೂರುಗಳು ಬರಬಾರದು ಎಂದು ಎಸಿಯವರು ಸೂಚನೆ ನೀಡಿದರು.

ಹಲವು ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ತಹಶೀಲ್ದಾರ್ ಮಂಜುನಾಥ್ ಜಿ, ಇ.ಒ. ರಾಜಣ್ಣ ಹಾಗೂ ಅಧಿಕಾರಿಗಳು ಸಭೆಯಲ್ಲಿದ್ದರು.