ವಿದ್ಯಾರಶ್ಮಿಯಲ್ಲಿ ವಿದ್ಯಾರ್ಥಿ ಸರಕಾರದ ಉದ್ಘಾಟನೆ

0

ಸವಣೂರಿನ ವಿದ್ಯಾರಶ್ಮಿಯಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸರಕಾರವನ್ನು ಸಂಚಾಲಕರಾದ ಸಹಕಾರಿ ರತ್ನ ಸವಣೂರು ಸೀತಾರಾಮ ರೈಯವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಪ್ರಾಥಮಿಕ ಅರಿವು ಈ ವಿದ್ಯಾರ್ಥಿ ಸರಕಾರದ ಚಟುವಟಿಕೆಗಳ ಸಿಗುತ್ತದೆ.

ಈ ಮೂಲಕ ನೀವು ಸಮರ್ಪಕತೆಯನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದರು.

ಮುಖ್ಯ ಅತಿಥಿಯವರಾಗಿ ಆಗಮಿಸಿದ್ದ ಸುಳ್ಯದ ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಮಿಥಾಲಿ ಪ್ರಸನ್ನ ಅವರು ಮಾತನಾಡಿ ವಿದ್ಯಾರ್ಥಿ ಸರಕಾರದ ಪದಾಧಿಕಾರಿಗಳು ಯಾವುದೇ ತಪ್ಪು ಮಾಡದೇ ಮಾದರಿಯಾಗಿರಿ ಎಂದು ಹೇಳಿ ಹೆಚ್ಚು ಓದುವ ಮತ್ತು ತಾಳ್ಮೆಯ ಮನೋಭಾವನೆಯೊಂದಿಗೆ ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದರು.


ಸಭಾಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿಯವರು ಮಾತನಾಡಿ ಜಗತ್ತು ನಮಗೆ ಬೇಕಾದ ಹಾಗೆ ಇರುವುದಿಲ್ಲ. ಅದಕ್ಕೆ ಬದಲಾಗಿ ನಮಗೆ ಬೇಕಾದ ಹಾಗೆ ನಾವು ಅದನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿ ನಾಯಕತ್ವದ ಜವಾಬ್ದಾರಿ ಹೊತ್ತ ಎಳೆಯ ಮಕ್ಕಳನ್ನು ಅಭಿನಂದಿಸಿದರು.

ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಶಶಿಕಲಾ ಎಸ್. ಆಳ್ವ ಅವರು ಸರ್ವರನ್ನೂ ಸ್ವಾಗತಿಸಿದರು. ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಇಂಚರ ನಿರೂಪಿಸಿದ ಕಾರ್ಯಕ್ರಮದಲ್ಲಿ, ದ್ವಿತೀಯ ಪಿಯುಸಿಯ ಸನಾ ಫಾತಿಮಾ ಆತಿಥಿಯವರ ಪರಿಚಯ ಮತ್ತು ಸರಕಾರದ ಉಪಾಧ್ಯಕ್ಷೆ 10ನೇ ತರಗತಿಯ ಎಂ. ವೈಷ್ಣವಿ ವಂದನಾರ್ಪಣೆಗಳನ್ನು ನಿರ್ವಹಿಸಿದರು.