ವಯೋಮಿತಿ ಮೀರಿದ ವಿದ್ಯಾರ್ಥಿಯ ಆಟ

0

ಜಿಲ್ಲಾ ಮಟ್ಟದ ಪ್ರಥಮ ಸ್ಥಾನ ಕಳಕೊಂಡ ಪುತ್ತೂರು ತಾಲೂಕು ಪ್ರಾಥಮಿಕ ಬಾಲಕರ ತಂಡ

ದ್ವಿತೀಯ ಬಂದಿದ್ದ ಬಂಟ್ವಾಳ ತಾಲೂಕು ತಂಡಕ್ಕೆ ಪ್ರಥಮ ಸ್ಥಾನ

ವಯೋಮಿತಿ ಮೀರಿದ ವಿದ್ಯಾರ್ಥಿಯೊಬ್ಬ ಪ್ರಾಥಮಿಕ ಶಾಲಾ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯದಲ್ಲಿ ಆಡಿದ ಕಾರಣಕ್ಕಾಗಿ ಜಿಲ್ಲಾ ಮಟ್ಟದ ಪ್ರಥಮ ಸ್ಥಾನ ಪಡೆದುಕೊಂಡಿದ್ದ ತಂಡ ತನ್ನ ಸ್ಥಾನ ಕಳೆದುಕೊಂಡ ಘಟನೆ ವರದಿಯಾಗಿದೆ.

ಗುತ್ತಿಗಾರಿನ ಪಿ.ಎಂ. ಶ್ರೀ ಶಾಲಾ ಮೈದಾನದಲ್ಲಿ ಸೆ. 20ರಂದು ನಡೆದ ಪ್ರಾಥಮಿಕ ಶಾಲಾ ಜಿಲ್ಲಾಮಟ್ಟದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಪುತ್ತೂರು ತಾಲೂಕಿನ ಹೆಸರಲ್ಲಿ ಆಡಿರುವ ಕಡಬ ತಾಲೂಕಿನ ಸೈಂಟ್ ಆ್ಯನ್ಸ್ ಕಡಬ ತಂಡ ಪ್ರಥಮ ಸ್ಥಾನ ಪಡೆದಿತ್ತು. ಆದರೆ ಈ ತಂಡದಲ್ಲಿ ವಯೋಮಿತಿ ಮೀರಿದ ವಿದ್ಯಾರ್ಥಿಯೊಬ್ಬ ಆಟವಾಡಿದ್ದು ಗೊತ್ತಾದುದರಿಂದ ಆ ಬಗ್ಗೆ ದೂರು ದಾಖಲಾದ ಕಾರಣ ಆ ತಂಡದ ಪ್ರಥಮ ಸ್ಥಾನವನ್ನು ಹಿಂಪಡೆಯಲಾಗಿದೆ ಎಂದು ತಿಳಿದುಬಂದಿದೆ. ಪ್ರಥಮ ಸ್ಥಾನವನ್ನು ದ್ವಿತೀಯ ಸ್ಥಾನ ಪಡೆದ ಬಂಟ್ವಾಳ ತಾಲೂಕಿಗೆ ಹಾಗೂ ದ್ವಿತೀಯ ಸ್ಥಾನವನ್ನು ಪ್ರಥಮ ಸ್ಥಾನ ಪಡೆದ ಪುತ್ತೂರು ತಂಡದೊಂದಿಗೆ ಸೆಮಿಫೈನಲ್ ನಲ್ಲಿ ಪರಾಭವಗೊಂಡಿದ್ದ ಮಂಗಳೂರು ಉತ್ತರ ತಂಡಕ್ಕೆ ನೀಡಲು ನಿರ್ಧಾರವಾಗಿರುವುದಾಗಿ ವರದಿಯಾಗಿದೆ.

ಆ ಶಾಲಾ ಅಧ್ಯಾಪಕರು ತಿಳಿದೇ ಆಡಿಸಿದ್ದರೋ ಅಥವಾ ತಿಳಿಯದೆ ಆಡಿಸಿದ್ದರೋ ಎಂಬುದು ತಿಳಿದುಬರಬೇಕಷ್ಟೆ. ತಿಳಿದೂ ಆಡಿಸಿದ್ದಾರಾದರೆ , ಕ್ರೀಡಾ ಸ್ಫೂರ್ತಿಗೆ ಕೊಳ್ಳಿ ಇಟ್ಟಿದ್ದಾರೆಂಬ ನೆಲೆಯಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯಗಳು ವ್ಯಕ್ತವಾಗತೊಡಗಿದೆ. ಆಟ ಆಡುವುದಕ್ಕಿಂತ ಮೊದಲೇ ವಿದ್ಯಾರ್ಥಿಗಳ ವಯಸ್ಸಿನ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಆದರೆ ಆಗ ಕಂಡುಬಾರದ ವ್ಯತ್ಯಾಸ, ಗೆದ್ದ ಬಳಿಕ ಬಂದ ದೂರನ್ನು ಪರಿಶೀಲಿಸುವಾಗ ಕಂಡುಬಂದಿದೆ.