ದುಗ್ಗಲಡ್ಕ ಸಮೀಪದ ಕೆದ್ಕಾನದಲ್ಲಿ ಪ್ರಸ್ತಾಪಿತ ನ.ಪಂ.ಕಸ ವಿಲೇವಾರಿಗೆ ಸ್ಥಳೀಯರ ವಿರೋಧ- ಬ್ಯಾನರ್ ಅಳವಡಿಕೆ

0

ಸುಳ್ಯ ನಗರ ಪಂಚಾಯತ್ ಕಸವನ್ನು ದುಗ್ಗಲಡ್ಕ ವಾರ್ಡ್ ನ ಕೆದ್ಕಾನ ಎಂಬಲ್ಲಿ ವಿಲೇವಾರಿ ಮಾಡಲು ನಗರ ಪಂಚಾಯತ್ ತೀರ್ಮಾನಿಸಿರುದಾಗಿ ತಿಳಿದು ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಬ್ಯಾನರ್ ಅಳವಡಿಸಿದ್ದಾರೆ.

ಸುಳ್ಯ ನಗರ ಪಂಚಾಯತ್ ಆಡಳಿತಕ್ಕೆ ನಗರದ ಕಸ ವಿಲೇವಾರಿ ತಲೆನೋವಾಗಿ ಪರಿಣಮಿಸಿದ್ದು, ಕಲ್ಚೆರ್ಪೆಯಲ್ಲಿಯೂ ಸ್ಥಳೀಯರ ತೀವ್ರ ವಿರೋಧ ಎದುರಾಗಿರುವುದರಿಂದ ಬದಲಿ ಸ್ಥಳದ ಹುಡುಗಾಟದಲ್ಲಿದ್ದ ನಗರ ಪಂಚಾಯತ್ ಕೆದ್ಕಾನ ಬಳಿ ಜಾಗ ಇರುವುದನ್ನು ತಿಳಿದು ಅದರಲ್ಲಿ 3 ಎಕ್ರೆ ಸ್ಥಳವನ್ನು ನಗರ ಪಂಚಾಯತ್ ಕಸ ವಿಲೇವಾರಿಗೆ ಕಾದಿರಿಸಿರುವುದಾಗಿ ತಿಳಿದುಬಂದಿದೆ.

ಈ ಜಾಗ ಕಂದಾಯ ಇಲಾಖೆಗೆ ಸೇರಿದ ಜಾಗವಾಗಿದ್ದು,ಇದಕ್ಕೆ ಕಂದಾಯ ಇಲಾಖೆ, ಅರಣ್ಯ ಇಲಾಖೆ, ಮತ್ತು ನಗರ ಪಂಚಾಯತ್ ಜಂಟಿಯಾಗಿ ಪರಿಶೀಲಿಸಿ ಸೂಕ್ತ ಜಾಗವೆಂದು ಗುರುತಿಸಿರುವುದಾಗಿ ತಿಳಿದುಬಂದಿದೆ.ಈ ವಿಚಾರ ಇದೀಗ ಸ್ಥಳೀಯರನ್ನು ಆತಂಕ ಪಡುವಂತೆ ಮಾಡಿದೆ. ಕಸವಿಲೇವಾರಿಗೆ ಗುರುತಿಸಿರುವ ಜಾಗ ಎತ್ತರ ಪ್ರದೇಶವಾಗಿದ್ದು ಸುತ್ತಲೂ ಮನೆಗಳಿವೆ. ಆ ಜಾಗದ ಆಸುಪಾಸಿನಲ್ಲಿ ಸುಮಾರು 35ಮನೆ ಇದ್ದು, ಎತ್ತರ ಪ್ರದೇಶದಲ್ಲಿ ಕಸ ಹಾಕಿದ್ದಲ್ಲಿ ತಗ್ಗು ಪ್ರದೇಶಕ್ಕೆ ತ್ಯಾಜ್ಯದ ನೀರು ಹರಿದು ಬರಬಹುದು.ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡುವುದಾಗಿ ನಗರ ಪಂಚಾಯತ್ ಹೇಳಿಕೊಂಡಿರುವುದಾದರೂ ಈಗ ಕಲ್ಚೆರ್ಪೆಯಲ್ಲಿ ಆದ ಪರಿಸ್ಥಿತಿ, ಅಲ್ಲಿನ ಜನಗಳ ಮಾನಸಿಕ ತಳಮಳ, ಆರೋಗ್ಯದ ಮೇಲೆ ಪರಿಣಾಮ ನಮಗೂ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ನಮ್ಮ ಸಮಸ್ಯೆಯನ್ನು ಯಾರಿಗೆ ಹೇಳಬೇಕೆಂದು ತಿಳಿಯುತ್ತಿಲ್ಲ, ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುವ ಬಗ್ಗೆ ಯೋಚನೆ ಮಾಡಿದ್ದೇವೆ ಎಂದು ಸ್ಥಳೀಯರು ಹೇಳುತ್ತಾರೆ.ಬ್ಯಾನರ್ ಅಳವಡಿಕೆ;ಸುಳ್ಯ ನಗರ ಪ್ರದೇಶದ ಕಸವನ್ನು ನಗರ ಪಂಚಾಯತ್‌ನವರು ನಮ್ಮ ಕೊಯಿಕುಳಿ ವಾರ್ಡ್ 2ರ ಕೆದಿಕಾನ ಅರಣ್ಯ ಪ್ರದೇಶದಲ್ಲಿ ಹಾಕಲು ನಿರ್ಧರಿಸಿದ್ದು, ಈ ಪ್ರದೇಶದ ನಿವಾಸಿಗಳಾದ ನಾವೆಲ್ಲರೂ ವಿರೋಧಿಸುತ್ತೇವೆ. ಈ ಜಾಗದಲ್ಲಿ ಕಸ ಹಾಕುವುದರಿಂದ ನಾಗರಿಕರೆಲ್ಲರಿಗೂ ತೊಂದರೆಯಾಗುವುದಲ್ಲದೇ ಈ ಭಾಗದಲ್ಲಿರುವ ನವಿಲು, ಜಿಂಕೆ, ಕಾಡುಕೋಣ ಹಾಗೂ ಇತರ ಪ್ರಾಣಿಗಳಿಗೂ, ಪರಿಸರಕ್ಕೂ ತೊಂದರೆಯಾಗುತ್ತದೆ. ಆದುದರಿಂದ ಈ ಪ್ರದೇಶದಲ್ಲಿ ಕಸ ಹಾಕುವುದಕ್ಕೆ ತೀವ್ರ ವಿರೋಧವಿದೆಕೆದಿಕಾನ-ಕೊಯಿಕುಳಿ-ಗೋಂಟಡ್ಕ-ಮಿತ್ತಮಜಲು-ಕುದ್ಪಾಜೆ-ದುಗಲಡ್ಕ ನಾಗರಿಕರು ಎಂದು ಬ್ಯಾನರ್ ಅಳವಡಿಸಿದ್ದಾರೆ.