ಆತ್ಮಹತ್ಯೆ ಮಾಡಿಕೊಳ್ಳಲು ಕೈ ಕೊಯ್ದುಕೊಂಡು ನದಿಗೆ ಹಾರಿದ ವ್ಯಕ್ತಿ

0

ಅಗ್ನಿಶಾಮಕ ದಳ, ಪೊಲೀಸರು ಹಾಗೂ ವಿಪತ್ತು ನಿರ್ವಹಣಾ ತಂಡದಿಂದ ವ್ಯಕ್ತಿಯ ರಕ್ಷಣೆ

ಪುಳಿಕುಕ್ಕು ಕುಮಾರಧಾರ ನದಿಯಲ್ಲಿ ಇಂದು ಬೆಳಿಗ್ಗೆ ಘಟನೆ

ಪಂಜ – ಕಡಬ ರಸ್ತೆಯ ಪುಳಿಕುಕ್ಕು ಎಂಬಲ್ಲಿ ಕುಮಾರಧಾರ ನದಿಯಿಂದ ವ್ಯಕ್ತಿಯೊಬ್ಬನನ್ನು ರಕ್ಷಿಸಲಾದ ಘಟನೆಗೆ ಸಂಬಂಧಿಸಿ ಹೆಚ್ಚಿನ ಮಾಹಿತಿ ಲಭ್ಯವಾಗಿದ್ದು ಇವರು ಆತ್ಮಹತ್ಯೆ ಮಾಡಿಕೊಳ್ಳಲು ಹಾರಿ ಪೊದೆಯಲ್ಲಿ ಸಿಲುಕಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಈ ವ್ಯಕ್ತಿಯನ್ನು ಅಗ್ನಿ ಶಾಮಕ ದಳ ಪೊಲೀಸರು ಮತ್ತು ವಿಪತ್ತು ನಿರ್ವಹಣಾ ತಂಡದವರು ಕಾರ್ಯಾಚರಣೆ ನಡೆಸಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮೂಲತ: ಆಂದ್ರ ಪ್ರದೇಶದ ಮಡಕಸಿರ ನಿವಾಸಿಯಾಗಿರುವ ರವಿ ಕುಮಾ‌ರ್ ಹಲವು ವರ್ಷಗಳಿಂದ ಬೆಂಗಳೂರು ಮಾರ್ತಹಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಇವರು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದು ಅದರಲ್ಲಿ ನಷ್ಟ ಉಂಟಾದ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ. ಕೈ ಕೊಯ್ದುಕೊಂಡು ಬಳಿಕ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಇವರು ತಿಳಿಸಿದ್ದಾರೆ.

ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ದೇವರ ದರ್ಶನ ಮುಗಿಸಿ ಕಡಬ-ಪಂಜ ರಸ್ತೆಯ ಪುಳಿಕುಕ್ಕು ಎಂಬಲ್ಲಿಗೆ ಬಂದಿದ್ದು, ಇಂದು ಮುಂಜಾನೆ 5 ರ ಸುಮಾರಿಗೆ ಬ್ಯಾಗನ್ನು ಬಸ್‌ ನಿಲ್ದಾಣದಲ್ಲೇ ಇರಿಸಿ ತನ್ನ ಕೈಯನ್ನು ಕುಯ್ದುಕೊಂಡು ನದಿಗೆ ಹಾರಿದ್ದಾರೆ.

ತುಂಬಿ ಹರಿಯುತ್ತಿದ್ದ ಕುಮಾರಧಾರ ನದಿಗೆ ಹಾರಿದ ಬಳಿಕ ಅವರಿಗೆ ಜೀವ ಭಯ ಉಂಟಾಗಿ, ಪೊದೆಯೊಂದು ಸಿಕ್ಕಿದ ಕಾರಣ ಅದನ್ನು ಹಿಡಿದು ಬಳಿಕ ರಕ್ಷಣೆಗಾಗಿ ಕೂಗಿಕೊಂಡಿದ್ದರೆನ್ನಲಾಗಿದೆ., ಹೀಗಾಗಿ ಸ್ಥಳೀಯರು ಇಲಾಖೆಗೆ ಮಾಹಿತಿ ರವಾನಿಸಿದ್ದರು. ಕೂಡಲೇ ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ , ಪೊಲೀಸರು, ವಿಪತ್ತು ನಿರ್ವಹಣಾ ತಂಡದ ಸದಸ್ಯರು ಕಾರ್ಯಾಚರಣೆ ಮಾಡಿದ್ದಾರೆ.

ಮೊಬೈಲ್ ಪೋನ್ ತುಂಬಿ ಹರಿಯುವ ನದಿಯಲ್ಲಿ ನಾಪತ್ತೆಯಾಗಿದ್ದು, ಇವರ ಪ್ಯಾಂಟ್ ಕಿಸೆಯಲ್ಲಿ ಹತ್ತು ಸಾವಿರ ರೂ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಕೈಗೆ ಗಂಭೀರ ಸ್ವರೂಪದ ಗಾಯವಾದ ಕಾರಣ ಕಡಬ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.