ರಾಹುಲ್ ಗಾಂಧಿ ಕುರಿತು ಶಾಸಕ ಭರತ್ ಶೆಟ್ಟಿ ಹೇಳಿಕೆಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಖಂಡನೆ

0

ತಾಕತ್ತಿದ್ದರೆ ನಮ್ಮ ಕಾರ್ಯಕರ್ತನ ಮೈ‌ ಭರತ್ ಶೆಟ್ಟಿ‌ ಮುಟ್ಟಿ‌ ನೋಡಲಿ:ಪಿ.ಸಿ.

ಬಿಜೆಪಿಯ ಸಂಸ್ಜೃತಿ ಭರತ್ ಶೆಟ್ಟಿ ಮೂಲಕ ಅನಾವರಣ : ಪ್ರದೀಪ್

ಶಾಸಕ ಭರತ್ ಶೆಟ್ಟಿ ಮೇಲೆ‌ ಕಾನೂನು ಕ್ರಮ ಜರುಗಲಿ : ಜೆ.ಪಿ. ರೈ

ಕಾಂಗ್ರೆಸ್ ನಾಯಕರಾಗಿರುವ ರಾಹುಲ್ ಗಾಂಧಿಯವರ ಕುರಿತಾಗಿ ಶಾಸಕರಾದ ಭರತ್ ಶೆಟ್ಟಿಯವರು ಹೇಳಿರುವ ಹೇಳಿಕೆಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಖಂಡಿಸುತ್ತದೆ ಎಂದು‌ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮರು ಹೇಳಿದ್ದಾರೆ.

ಜು.13ರಂದು‌ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸಂಸತ್ ನ ವಿಪಕ್ಷ ನಾಯಕರಾಗಿ ರಾಹುಲ್ ಗಾಂಧಿಯವರು 15 ವಿಚಾರಗಳನ್ನು ಸುಮಾರು ಒಂದೂವರೆ ಗಂಟೆ ಮಾತನಾಡಿದ್ದಾರೆ. ಅವರ ಮಾತನ್ನು ಎಲ್ಲರೂ ಪೂರ್ತಿಯಾಗಿ ಕೇಳಬೇಕು. ಅರ್ಥವತ್ತಾಗಿ ಮಾತನಾಡಿದ್ದಾರೆ. ನೈಜ ಹಿಂದುಗಳು ಯಾವತ್ತೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿಯವರ ಹೇಳಿಕೆಯನ್ನು ನಾವು ಸಮರ್ಥಿಸುತ್ತೇವೆ ಎಂದ ಅವರು, ಶಾಸಕ ಭರತ್ ಶೆಟ್ಟಿಯವರ ಹೇಳಿಕೆ ಶಾಸಕರಿಗೆ ಶೋಭೆ ತರುವಂತದ್ದಲ್ಲ. ಅವರಿಗೆ ತಾಕತ್ತಿದ್ದರೆ ನಮ್ಮ ಕಾರ್ಯಕರ್ತನ ಮೈ ಮುಟ್ಟಿ ನೋಡಲಿ” ಎಂದು ಸವಾಲೆಸೆದರು.

ಕೆಪಿಸಿಸಿ ಸಂಯೋಜಕ ಪ್ರದೀಪ್ ರೈ ಪಾಂಬಾರು ಮಾತನಾಡಿ ತಿಳುವಳಿಕೆ ಇದ್ದವರು ಆ ರೀತಿಯ ಹೇಳಿಕೆ ನೀಡಲಿಕ್ಕಿಲ್ಲ. ಸಣ್ಣ ಮಕ್ಕಳು ಮಾತನಾಡಿದ ರೀತಿಯಲ್ಲಿ ಶಾಸಕರು ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ಯವರು ಹಿಂದೂ ವಿರೋಧಿ ಹೇಳಿಕೆ ನೀಡಿದ್ದೇ ಇಲ್ಲ. ಬಿಜೆಪಿಯವರು ಯಾವುದಾನ್ನಾದರೂ ತಿರುಚಿ ಹೇಳುವ ಸಂಸ್ಕೃತಿ ಹಿಂದಿನಿಂದಲೂ ಬೆಳೆಸಿಕೊಂಡವರು. ಈ ಬಾರಿ ಭರತ್ ಶೆಟ್ಟಿ ಮೂಲಕ ಬಿಜೆಪಿ ಸಂಸ್ಕೃತಿ ಅನಾವರಣಗೊಂಡಿದೆ” ಎಂದರು.

ಡಿಸಿಸಿ ಉಪಾಧ್ಯಕ್ಷ ಜಯಪ್ರಕಾಶ್ ರೈ ಮಾತನಾಡಿ, “ರಾಹುಲ್ ಗಾಂಧಿಯವರ ಭಾಷಣದಲ್ಲಿ ಈ ರಾಷ್ಟ್ರ ಹೇಗಿರಬೇಕು – ಧರ್ಮ ಹೇಗಿರಬೇಕೆಂದು ಸುಂದರವಾಗಿ ಹೇಳಿದ್ದಾರೆ. ಹಿಂದು ಧರ್ಮ ಹಿಂಸೆಗೆ ಪ್ರಚೋದನೆ ಕೊಡೋದಿಲ್ಲ. ಹಿಂದುಗಳೆಂದು ಹೇಳಿಕೊಂಡು ಹಿಂಸೆ ಮಾಡುವವರು ಹಿಂದುಗಳಲ್ಲ ಎಂದು ಹೇಳಿದ್ದನ್ನು ಬಿಜೆಪಿಯವರು ಒಂದು ಭಾಗವನ್ನು ಮಾತ್ರ ಹಿಡಿದುಕೊಂಡು ಅಪಮಾನ ಎಂದು ಹೇಳುತ್ತಿದ್ದಾರೆ. ಭರತ್ ಶೆಟ್ಟಿಯವರ ಹೇಳಿಕೆ ಖಂಡನೀಯವಾಗಿದ್ದು, ಅವರ ಮೇಲೆ ಕಾನೂನು ಕ್ರಮ ಜರುಗಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ಮಾತನಾಡಿ, ಶಾಸಕರೊಬ್ಬರು, ಅದರಲ್ಲೂ ಡಾಕ್ಟರ್ ಆದವರೊಬ್ಬರು ಈ ರೀತಿಯ ಕೆಟ್ಟ ಹೇಳಿಕೆ ನೀಡುವುದು ಖಂಡನೀಯ ಎಂದರು.

ಪ್ರಮುಖರಾದ ನಂದರಾಜ ಸಂಕೇಶ, ಕೆ.ಗೋಕುಲ್ ದಾಸ್, ಭವಾನಿಶಂಕರ್ ಕಲ್ಮಡ್ಕ, ಸುರೇಶ್ ಎಂ.ಹೆಚ್., ಶಶಿಧರ ಎಂ.ಜೆ. ಇದ್ದರು.