ಕಾರ್ಗಿಲ್ ವಿಜಯ ದಿನದ ಗೌರವಾರ್ಥ ಭಾರತೀಯ ಸೇನೆಯಿಂದ ಮಹಿಳೆಯರ ಬೈಕ್ ರ್‍ಯಾಲಿ

0

2000 ಕಿ.ಮೀ ರ್‍ಯಾಲಿಯಲ್ಲಿ ಪಾಲ್ಗೊಂಡ ಏಕೈಕ ಕನ್ನಡತಿ ಸುಳ್ಯ ತಾಲೂಕಿನ ವೃಷ್ಠಿ ಮಲ್ಕಜೆ

ಕಾರ್ಗಿಲ್ ವಿಜಯ ದಿನದ ಗೌರವಾರ್ಥ ಭಾರತೀಯ ಸೇನೆಯು 25 ಮಹಿಳೆಯರ ಆಲ್‌ವುಮೆನ್ ಬೈಕ್ ರ್‍ಯಾಲಿ ಆಯೋಜಿಸಿದ್ದು, 2000 ಕಿ.ಮೀ.ಮಾರ್ಗದ ಈ ರ್‍ಯಾಲಿಯಲ್ಲಿ ಕರ್ನಾಟಕದಿಂದ ಇಬ್ಬರು ಮಹಿಳೆಯರು ಪಾಲ್ಗೊಂಡಿದ್ದು, ಈ ಪೈಕಿ ಏಕೈಕ ಕನ್ನಡತಿ ಸುಳ್ಯ ತಾಲೂಕಿನ ಪಂಜ ಸಮೀಪದ ವೃಷ್ಠಿ ಮಲ್ಕಜೆ ಅವರಾಗಿದ್ದಾರೆ.

ಪುತ್ತೂರು ಹಾಗೂ ಸುಳ್ಯದಲ್ಲಿ ನ್ಯಾಯವಾದಿಯಾಗಿರುವ ಪುರುಷೋತ್ತಮ ಮಲ್ಕಜೆ ಹಾಗೂ ಉಷಾ ಮಲ್ಕಜೆ ದಂಪತಿಯ ಪುತ್ರಿಯಾಗಿರುವ ವೃಷ್ಠಿ ಈ ರ್‍ಯಾಲಿಯಲ್ಲಿ ಪಾಲ್ಗೊಂಡು ವಿಶೇಷ ಸಾಧನೆ ಮೆರೆದಿದ್ದಾರೆ.

ಕಾರ್ಗಿಲ್ ವಿಜಯ ದಿವಸವು ಭಾರತೀಯ ಸೇನಾ ಇತಿಹಾಸದಲ್ಲಿ ಮರೆಯಲಾಗದ ದಿನವಾಗಿದ್ದು, 25 ವರ್ಷಗಳ ಹಿಂದಿನ ಈ ಯುದ್ಧದಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸಲು ಭಾರತೀಯ ಸೇನೆ ಇತ್ತೀಚೆಗಷ್ಟೇ ಟಿವಿಎಸ್ ಮೋಟಾರ್ ಕಂಪೆನಿ ಜೊತೆಗೂಡಿ ನಾರಿ ಶಕ್ತಿ ಕಾರ್ಯಕ್ರಮದಡಿ 25 ಮಹಿಳಾ ಬೈಕರ್‌ಗಳ ವಿಶಿಷ್ಠ ರ್‍ಯಾಲಿ ಆಯೋಜಿಸಿತ್ತು.

ಸುಮಾರು 2000 ಕಿ.ಮೀ. ಮಾರ್ಗದ ಬೈಕ್ ರ್‍ಯಾಲಿಯಲ್ಲಿ ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು ಹಾಗೂ ಅವರ ಸೇನಾ ಕುಟುಂಬದ ಮಹಿಳೆಯರು ಸೇರಿದಂತೆ ಭಾಗವಹಿಸಿದ್ದು, ಸೇನಾ ಕುಟುಂಬದ ಹೊರತಾಗಿ ಭಾಗವಹಿಸಿದವರಲ್ಲಿ ವೃಷ್ಠಿ ಏಕೈಕರಾಗಿದ್ದಾರೆ.

ಜುಲೈ 4 ರಂದು ಹಿಮಾಚಲ ಪ್ರದೇಶದ ಲೇಹ್‌ನಿಂದ ಆರಂಭಗೊಂಡ ರ್‍ಯಾಲಿ ಲಡಾಕ್‌ನ ವಿವಿಧ ಸ್ಥಳಗಳ ಮೂಲಕ ಕಾರ್ಗಿಲ್ ಹುತಾತ್ಮರ ಸ್ಮಾರಕಕ್ಕೆ ತಲುಪಿತು. ದುರ್ಗಮ ಹಾದಿಯಲ್ಲಿ ನಡೆದ ಬೈಕ್ ಸವಾರಿಯಲ್ಲಿ ವೃಷ್ಠಿಯವರೂ ಪಾಲ್ಗೊಳ್ಳುವ ಮೂಲಕ ಅಸಾಮಾನ್ಯ ಸಾಧನೆ ಮೆರೆದಿದ್ದಾರೆ. ಪ್ರಪಂಚದ ಅತ್ಯಂತ ಎತ್ತರದ ಬೈಕ್ ಪಾಸಿಂಗ್ ಪ್ರದೇಶಗಳಾದ ಕರದುಂಗ್‌ ಲಾ ಮತ್ತು ಓಮ್ಲಿಂಗ್ ಲಾನಂತಹ ಆಮ್ಲಜನಕದ ಕೊರತೆ ಇರುವ ಪರ್ವತಗಳಲ್ಲೂ ಬೈಕ್‌ನಲ್ಲಿ ಸಂಚರಿಸಿ ಕಡಿದಾದ ರಸ್ತೆ, ಹೊಳೆಗಳನ್ನು ದಾಟಿ ಮುನ್ನುಗ್ಗಿದ ಸಾಹಸಗಾಥೆಗೆ ವೃಷ್ಠಿ ಪಾತ್ರರಾಗಿದ್ದಾರೆ.

ಬೆಂಗಳೂರಿನ ಇ.ವೈ. ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ವೃಷ್ಠಿಯವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಡಬ ಕ್ನಾನಾಯ ಜ್ಯೋತಿ , ಸುಳ್ಯ ಸೈಂಟ್ ಜೋಸೆಫ್ ಸ್ಕೂಲ್ ಹಾಗೂ ಗುತ್ತಿಗಾರಿನ ಕುರಿಯಾಕೋಸ್ ಶಾಲೆಯಲ್ಲಿ ಪಡೆದಿದ್ದು, ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಪ್ರೌಢಶಾಲಾ ಶಿಕ್ಷಣ ಪೂರೈಸಿದ್ದರು. ಮಂಗಳೂರಿನ ಶಾರದಾ ಪಿಯು ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಹಾಗೂ ಬೆಂಗಳೂರಿನ ಜೈನ್ ಯುನಿವರ್ಸಿಟಿಯಲ್ಲಿ ಪದವಿ ಪೂರೈಸಿ ಕ್ಯಾಂಪಸ್ ಸೆಲೆಕ್ಷನ್ ಮೂಲಕ ಇ.ವೈ. ಕಂಪೆನಿಯ ಉದ್ಯೋಗಿಯಾಗಿ ನಿಯುಕ್ತಿಗೊಂಡಿದ್ದರು.

ರಾಷ್ಟ್ರೀಯ ಮಟ್ಟದ ಟಿವಿಎಸ್ ರೇಸಿಂಗ್ ಚಾಂಪಿಯನ್‌ಷಿಪ್‌ಗೆ ಆಯ್ಕೆಗೊಂಡಿದ್ದ ವೃಷ್ಠಿ ಅಲ್ಲಿಂದ ಈ ಅಪರೂಪದ ಅವಕಾಶ ಪಡೆದಿದ್ದರು.

ವೃಷ್ಠಿ ಅವರ ಸಹೋದರಿ ವೃದ್ಧಿ ಮಲ್ಕಜೆ ಮಂಗಳೂರು ಶಾರದಾ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ಓದುತ್ತಿದ್ದಾರೆ.