ಎಡಮಂಗಲ ಭಾಗದ ರೈಲ್ವೆ ಬೇಡಿಕೆ ಈಡೇರಿಸುವಂತೆ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣರಿಗೆ ಮನವಿ

0

ಎಡಮಂಗಲದಲ್ಲಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ, ಸುಬ್ರಹ್ಮಣ್ಯ – ಮಂಗಳೂರು ಮಧ್ಯೆ ಪ್ಯಾಸೆಂಜರ್ ರೈಲು ಓಡಾಟ ಸೇರಿದಂತೆ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣರಿಗೆ ಮಂಗಳೂರಿನಲ್ಲಿ ನಡೆದ ರೈಲ್ವೆ ರಾಜ್ಯ ಸಚಿವರ ಮತ್ತು ರೈಲ್ವೆ ಉನ್ನತ ಅಧಿಕಾರಿಗಳ ಸಭೆಯಲ್ಲಿ
ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಮತ್ತು ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರು ನೀಡಿದರು.


ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡಂಜಿ, ಸುಳ್ಯ ಮಂಡಲದ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಕಂದಡ್ಕ, ಪ್ರದೀಪ್ ಮಣವಳಿಕೆ, ಸವಣೂರು ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಲೆಕ್ಕೆಸಿರಿಮಜಲು, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ವನಿತಾ ಕಾಯಿತ್ತಿಮಾರ್, ಶ್ರೀಮತಿ ಗೀತಾ ಮರ್ದೂರು ಮತ್ತು ಎಡಮಂಗಲ ಭಜರಂಗದಳ ಸಂಚಾಲಕರಾದ ಪ್ರವೀಣ್ ಮರ್ದೂರು ಉಪಸ್ಥಿತರಿದ್ದರು. ಎಡಮಂಗಲ ಎಲ್.ಸಿ ನಂಬರ್ 69 ಮತ್ತು ಎಲ್ ಸಿ ನಂಬರ್ 70 ಎರಡು ಲೆವೆಲ್ ಕ್ರಾಸಿಂಗ್ ಇದ್ದು, ಎಲ್.ಸಿ ನಂಬರ್ 70 ದೇವಸ್ಥಾನದ ಹತ್ತಿರ ರೈಲ್ವೆ ಮೇಲ್ ಸೇತುವೆ ಆಗಬೇಕು ಎಂಬುದು ಎಡಮಂಗಲ ಜನತೆಯ ಬಹುಕಾಲದ ಬೇಡಿಕೆ ಆಗಿತ್ತು. ಇದನ್ನು ಆದಷ್ಟು ಶೀಘ್ರವಾಗಿ ವಿಶೇಷ ಮುತುವರ್ಜಿ ವಹಿಸಿ ನೆರವೇರಿಸುವ ಬಗೆ ಸಂಸದರು ಭರವಸೆಯನ್ನು ನೀಡಿದ್ದಾರೆ. ಹಾಗೆಯೇ ಎಡಮಂಗಲದಲ್ಲಿ ವಿಶಾಲ ರೈಲ್ವೆ ನಿಲ್ದಾಣ ಮತ್ತು ಕ್ರಾಸಿಂಗ್ ಸ್ಥಳ ಇದ್ದು ಫ್ಲಾಟ್ ಫಾರ್ಮ್ ಕೆಲಸ ಮುಗಿದ ತಕ್ಷಣ ಎಲ್ಲಾ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಕ್ರಮ ಕೈಗೊಳ್ಳುವಬೇಕು.


ವಿಧಾನಸಭಾ ಕ್ಷೇತ್ರದ ಬಹುದಿನದ ಬೇಡಿಕೆಯಾದ ಹಿಂದಿನಂತೆ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಬೆಳಗ್ಗೆ ಮತ್ತು ಸಂಜೆ ಲೋಕಲ್ ರೈಲು ಓಡಾಟ ಆರಂಭವಾದರೆ ನರಿಮೊಗರು, ಕಾಣಿಯೂರು, ಎಡಮಂಗಲ, ಕಡಬ ಕೋಡಿಂಬಾಳ, ಬಜಕೆರೆ ಈ ಭಾಗದ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ, ವ್ಯಾಪಾರಿ, ಕೃಷಿಕರಿಗೆ ಮತ್ತು ಇತರ ರಾಜ್ಯಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲಾ ಬೇಡಿಕೆಗಳನ್ನು ಅತಿ ಶೀಘ್ರದಲ್ಲಿ ಈಡೇರಿಸುವ ಭರವಸೆಯನ್ನು ಮಾನ್ಯ ರಾಜ್ಯ ರೈಲ್ವೆ ಸಚಿವರು ಮಾನ್ಯ ಸಂಸದರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ನೀಡಿದ್ದಾರೆ ಎಂದು ಎಡಮಂಗಲ ಗ್ರಾ.ಪಂ. ಅಧ್ಯಕ್ಷ ರಾಮಣ್ಣ ಜಾಲ್ತಾರು ತಿಳಿಸಿದ್ದಾರೆ.