ಮುರೂರಿನಲ್ಲಿ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿ ರಸ್ತೆ ಕುಸಿಯುವ ಭೀತಿ ಹಿನ್ನೆಲೆ

0

ಮುರೂರು ಜಂಕ್ಷನ್ ನಲ್ಲಿ ವಾಹನ ಪ್ರಯಾಣ ನಿರ್ಬಂಧಿಸಿ ರಸ್ತೆ ಬಂದ್ ಮಾಡಿದ ಪೊಲೀಸರು

ಹೆದ್ದಾರಿ ಪಕ್ಕದಲ್ಲಿ ತುಂಬಿ ಹರಿಯುತ್ತಿರುವ ಪಯಸ್ವಿನಿ ನದಿ

ಜಾಲ್ಸೂರು – ಕಾಸರಗೋಡು ರಸ್ತೆ ಸಂಚಾರ ಸ್ಥಗಿತ

ಅಡೂರು – ಮಂಡೆಕೋಲು ಮೂಲಕ ಸುತ್ತುವರಿದು ಬರುತ್ತಿರುವ ಪ್ರಯಾಣಿಕರು

ಜಾಲ್ಸೂರು – ಕಾಸರಗೋಡು ರಸ್ತೆಯ ಮಂಡೆಕೋಲು ಗ್ರಾಮದ ಮುರೂರಿನ ಕೆಲವು ಕಡೆಗಳಲ್ಲಿ ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡ ನಿರ್ಮಾಣಗೊಂಡು, ರಸ್ತೆ ಕುಸಿಯುವ ಭೀತಿಯ ಹಿನ್ನೆಲೆಯಲ್ಲಿ ಮುರೂರು ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ, ಪೊಲೀಸರು ರಸ್ತೆ ಬಂದ್ ಮಾಡಿದ್ದು, ಜಾಲ್ಸೂರು – ಕಾಸರಗೋಡು ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ಆ.1ರಂದು ಸಂಜೆ ಸುಳ್ಯ ಭಾಗದಿಂದ ಮರದ ಲೋಡ್ ಹೊತ್ತೊಯ್ಯುತ್ತಿದ್ದ ಲಾರಿಯೊಂದು ಮುರೂರಿನ ಬಳಿ ಮುಖರಸ್ತೆಯ ಮಧ್ಯೆ ಬಾಯ್ದೆರೆದು ನಿಂತಿದ್ದ ಭಾರೀ ಗಾತ್ರದ ಹೊಂಡಕ್ಕೆ ಬಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರಾತ್ರಿ ವೇಳೆ ಅದನ್ನು ತೆರವುಗೊಳಿಸಿ, ವಾಹನ ಸಂಚಾರ ಪ್ರಾರಂಭಗೊಂಡಾಗ ಮತ್ತದೇ, ಗುಂಡಿಯಲ್ಲಿ ಬೇರೊಂದು ಲಾರಿಯ ಚಕ್ರ ಹೂತು ಹೋಗಿರುವುದಾಗಿ ತಿಳಿದುಬಂದಿದೆ.

ರಸ್ತೆಯ ಎಡಭಾಗದಲ್ಲಿ ಪಯಸ್ವಿನಿ ನದಿ ತುಂಬಿ ಹರಿಯುತ್ತಿದ್ದು, ಹೊಂಡ ಮತ್ತಷ್ಟು ಬಾಯ್ದೆರೆದು, ರಸ್ತೆ ಕುಸಿಯುವ ಭೀತಿಯಿಂದ ಪೊಲೀಸರು ಮುರೂರು ಜಂಕ್ಷನ್‌ ನಲ್ಲಿ ಬ್ಯಾರಿಕೇಡ್ ಅಳವಡಿಸಿ, ರಸ್ತೆ ಬಂದ್ ಮಾಡಿರುವುದಾಗಿ ತಿಳಿದುಬಂದಿದೆ.

ಇದೀಗ ಜಾಲ್ಸೂರು – ಕಾಸರಗೋಡು ರಸ್ತೆ ಸಂಚಾರ ಬಂದ್ ಆದ ಹಿನ್ನೆಲೆಯಲ್ಲಿ ಸುಳ್ಯ ಭಾಗದಿಂದ ಕಾಸರಗೋಡಿಗೆ ಹೋಗುವ ಪ್ರಯಾಣಿಕರು ಮಂಡೆಕೋಲು – ಅಡೂರು – ಕೊಟ್ಯಾಡಿ – ಮುಳ್ಳೇರಿಯಾದ ಮೂಲಕ ಹಾಗೂ ಕಾಸರಗೋಡಿನಿಂದ ಸುಳ್ಯ ಬರುವ ಪ್ರಯಾಣಿಕರು ಮುಳ್ಳೇರಿಯಾ – ಕೊಟ್ಯಾಡಿ – ಅಡೂರು – ಮಂಡೆಕೋಲು ಆಗಿ ಸುಳ್ಯಕ್ಕೆ ಪ್ರಯಾಣಿಸಬೇಕಾಗಿದೆ.

ಜಾಲ್ಸೂರು – ಕಾಸರಗೋಡು ಅಂತರರಾಜ್ಯ ಹೆದ್ದಾರಿಯ ಮುರೂರಿನ ಅಕ್ಕಪಕ್ಕದ ಪ್ರದೇಶ ಕರ್ನಾಟಕ ರಾಜ್ಯಕ್ಕೆ ಬರುತ್ತಿದ್ದು, ರಸ್ತೆ ಮಾತ್ರ ಕೇರಳ ರಾಜ್ಯಕ್ಕೆ ಸೇರಿರುವುದರಿಂದ ಇಲ್ಲಿ ಸಮಸ್ಯೆ ಹೆಚ್ಚುತ್ತಿರುವುದಾಗಿ ಸಾರ್ವಜನಿಕರು ಹೇಳುತ್ತಿದ್ದಾರೆ‌.