ಬೆಳ್ಳಾರೆ ಸುಳ್ಯ ರಸ್ತೆ ಮತ್ತು ಬೆಳ್ಳಾರೆ ನಿಂತಿಕಲ್ಲು ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಪ್ರಯಾಣಿಕರೇ ಎಚ್ಚರ

0

ಈ ಬಾರಿಯ ಮಳೆಗಾಲದಲ್ಲಿ ಬೆಳ್ಳಾರೆಯಿಂದ ಸುಳ್ಯಕ್ಕೆ ತೆರಳುವ ರಸ್ತೆ ಮತ್ತು ಪಂಜಿಗಾರು ಮೂಲಕ ನಿಂತಿಕಲ್ಲಿಗೆ ಹೋಗುವ ರಸ್ತೆಯಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸಂಚಾರಕರು ಎಚ್ಚರ ತಪ್ಪಿದರೆ ಅಪಾಯ ಖಚಿತ .

ಬೆಳ್ಳಾರೆಯ ಬೀಡು ಮತ್ತು ದರ್ಖಾಸ್ತು ರಬ್ಬರ್ ಫ್ಯಾಕ್ಟರಿ ಬಳಿ ದೊಡ್ಡ ಗುಂಡಿಗಳು ನಿರ್ಮಾಣವಾಗಿದೆ. ನಿಂತಿಕಲ್ಲು ರಸ್ತೆಯ ಪಂಜಿಗಾರು, ಅಯ್ಯನಕಟ್ಟೆ, ಬಾಳಿಲ, ಕಲ್ಕಲ ಮತ್ತು ಟಪ್ಪಾಲುಕಟ್ಟೆಗಳಲ್ಲೂ ಇದೇ ರೀತಿಯ ಗುಂಡಿಗಳು ನಿರ್ಮಾಣಗೊಂಡಿವೆ. ಪ್ರತೀ ವರ್ಷ ಈ ಭಾಗಗಳಲ್ಲಿ ಗುಂಡಿ ನಿರ್ಮಾಣವಾಗುವುದು, ಅದಕ್ಕೆ ತೇಪೆ ಹಾಕುವುದು ನಡೆಯುತ್ತಲೇ ಇರುತ್ತದೆ. ತೇಪೆ ಹಾಕಿದ ಜಾಗ ಮತ್ತೆ ಮಳೆಗಾಲ ಆರಂಭದಲ್ಲಿಯೇ ಹೊಂಡ ಗುಂಡಿಗಳಾಗಿ ಮಾರ್ಪಾಡಾಗ್ತದೆ.

ಹಾಗಾದರೆ ಕಾಮಗಾರಿ ಕಳಪೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ. ವಾಹನ ಸವಾರರು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಿಡಿಶಾಪ ಹಾಕಿಕೊಂಡು ಸಂಚರಿಸುತ್ತಿದ್ದಾರೆ. ಪ್ರತೀ ಮಳೆಗಾಲದಲ್ಲೂ ಹೊಂಡ ಗುಂಡಿಗಳಾಗುವ ಆಯ್ದ ಜಾಗಗಳಿಗೆ ಇಲಾಖೆ ಯಾಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಕಡೆಗೆ ಗಮನ ಹರಿಸಿ ರಸ್ತೆ ಗುಂಡಿಗಳಿಗೆ ತೇಪೆ ಹಾಕುವ ಬದಲಿಗೆ ಶಾಶ್ವತ ಪರಿಹಾರ ಒದಗಿಸಲಿ ಎಂಬುದು ಸುದ್ದಿಯ ಆಶಯ.