ವೈಭವದೊಂದಿಗೆ ಶ್ರೀ ಶಾರದಾಂಬ ಉತ್ಸವ ಸುಳ್ಯ ದಸರಾ -2024 ಸಂಪನ್ನ

0

ಸಾವಿರಾರು ಜನಸ್ತೋಮದ ಮಧ್ಯೆ ಸುಳ್ಯ ನಗರದ ಪ್ರಮುಖ ರಸ್ತೆಯಲ್ಲಿ ಅದ್ಧೂರಿಯಾಗಿ ಸಾಗಿದ ಶ್ರೀ ಶಾರದಾ ದೇವಿಯ ಶೋಭಾಯಾತ್ರೆ

ಕಾಂತಮಂಗಲದ ಬಳಿ ಪಯಸ್ವಿನಿ ನದಿಯಲ್ಲಿ ಇಂದು ಬೆಳಿಗ್ಗಿನ ಜಾವ ಜಲಸ್ಥಂಭನ

ಸುಳ್ಯದ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿಯ ವತಿಯಿಂದ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ಕಳೆದ ಒಂಭತ್ತು ದಿನಗಳಿಂದ ಅತ್ಯಂತ ವೈಭವದೊಂದಿಗೆ ಜರುಗಿದ 53ನೇ ವರ್ಷದ ಶ್ರೀ ಶಾರದಾಂಬ ಉತ್ಸವ – ಸುಳ್ಯ ದಸರಾ 2024
ಶ್ರೀ ಶಾರದಾ ದೇವಿಯ ಅದ್ಧೂರಿ ಶೋಭಾಯಾತ್ರೆಯು ಸುಳ್ಯ ನಗರದ ಪ್ರಮುಖ ರಸ್ತೆಗಳಲ್ಲಿ ಅತ್ಯಂತ ವೈಭವದೊಂದಿಗೆ ಸಾಗಿ ಕಾಂತಮಂಗಲದ ಬಳಿ ಪಯಸ್ವಿನಿ ನದಿಯಲ್ಲಿ ಜಲಸ್ಥಂಭನಗೊಳಿಸುವ ಮೂಲಕ ಸುಳ್ಯ ದಸರಾ 2024 ಸಂಪನ್ನಗೊಂಡಿತು.

ಅ.17ರಂದು ಸಂಜೆ ಪುರೋಹಿತ ನಾಗರಾಜ ಭಟ್ ಅವರ ನೇತೃತ್ವದಲ್ಲಿ ಶ್ರೀದೇವಿಗೆ ಶೋಭಾಯಾತ್ರೆಯ ವಿಶೇಷ ಪೂಜೆ ಜರುಗಿತು. ಬಳಿಕ ದಸರಾ ಉತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ದಸರಾ ಉತ್ಸವ ಸಮಿತಿ ಅಧ್ಯಕ್ಷೆ ಭಾಗೀರಥಿ ಮುರುಳ್ಯ ಅವರು ಭಗವಾದ್ಛಜವನ್ನು ಮುಗಿಲೆತ್ತರಕ್ಕೆ ಹಾರಿಸುವುದರ ಮೂಲಕ ಅದ್ಧೂರಿ ಶೋಭಾಯಾತ್ರೆಗೆ ಚಾಲನೆ ನೀಡಿದರು.

ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದಿಂದ ವಿದ್ಯುತ್ ದೀಪಾಲಂಕೃತ ವಾಹನದಲ್ಲಿ ಹೊರಟ ಶ್ರೀ ಶಾರದಾ ದೇವಿಯ ವಿಜೃಂಭಣೆಯ ಶೋಭಾಯಾತ್ರೆಯು ಕೆವಿಜಿ ಸರ್ಕಲ್, ವಿವೇಕಾನಂದ ಸರ್ಕಲ್, ಯುವಜನ ಸಂಯುಕ್ತ ಮಂಡಳಿ, ಶ್ರೀರಾಂಪೇಟೆ, ವಿದ್ಯಾನಗರ, ಹಳೆಗೇಟು, ವಸಂತಕಟ್ಟೆ, ಓಡಬಾಯಿ ತನಕ ಸಾಗಿ ಅಲ್ಲಿಂದ ಮರಳಿ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತ, ಶ್ರೀರಾಮ ಭಜನಾ ಮಂದಿರ, ಜಟ್ಟಿಪಳ್ಳ ಜಂಕ್ಷನ್, ಖಾಸಗಿ ಬಸ್ ನಿಲ್ದಾಣ, ಪೊಲೀಸ್ ಠಾಣೆಯ ಮುಂಭಾಗ, ಮಿತ್ತೂರು ನಾಯರ್ ಕಟ್ಟೆ, ಅರಣ್ಯ ಇಲಾಖೆ ವಸಂತಕಟ್ಟೆ, ಕಾಯರ್ತೋಡಿ ವಿಷ್ಣುಸರ್ಕಲ್ ತನಕ ಸಂಚರಿಸಿ, ಮರಳಿ ರಥಬೀದಿಯ ಮೂಲಕ ಸಾಗಿ ಕಾಂತಮಂಗಲ ಬಳಿ ಪಯಸ್ವಿನಿ ನದಿಯಲ್ಲಿ ಅ.18ರಂದು ಬೆಳಗ್ಗಿನ ಜಾವ 4.30ರ ವೇಳೆಗೆ ಜಲಸ್ಥಂಭನಗೊಳಿಸಲಾಯಿತು.

ಶೋಭಾಯಾತ್ರೆಯಲ್ಲಿ ಸುಮಾರು ಹದಿನೈದಕ್ಕೂ ಅಧಿಕ ಸ್ಥಬ್ಧಚಿತ್ರಗಳು ಸಾಗಿ ನೋಡುಗರ ಮನಸೂರೆಗೊಳಿಸಿತು. ಇದರೊಂದಿಗೆ ಹಲವು ಕುಣಿತ ಭಜನಾ ತಂಡಗಳು, ಚೆಂಡೆ, ಬ್ಯಾಂಡ್ ಸೆಟ್, ನಾಸಿಕ್ ಬ್ಯಾಂಡ್, ಹುಲಿವೇಷ ಕುಣಿತ, ಡಿ.ಜೆ. ಅಬ್ಬರದೊಂದಿಗೆ ಜನರ ನೃತ್ಯ ಸಾಗಿದ್ದರು‌.
ಹೆಚ್ಚಿನ ಜನರು ಶೋಭಾಯಾತ್ರೆಯ ಜೊತೆಗೆ ಸಾಗಿದರೆ , ಸಾವಿರಾರು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಶೋಭಾಯಾತ್ರೆ ವೀಕ್ಷಿಸಿದ್ದರು.

ಮೂರು ಕಡೆ ಸಂಗೀತ ರಸಮಂಜರಿಯ ರಂಗು

ಶೋಭಾಯಾತ್ರೆ ಸಾಗಿ ಬರುವ ಸುಳ್ಯ ನಗರದ ಮೂರು ಕಡೆಗಳಲ್ಲಿ ವಿಶೇಷ ಸಂಗೀತ ರಸಮಂಜರಿ ಜರುಗಿತ್ತು.
ನಗರದ ಓಡಬಾಯಿಯಲ್ಲಿ ಶಿವಸ್ವರ ಮೆಲೋಡಿಸ್ ವತಿಯಿಂದ ಶಿವಪ್ರಸಾದ್ ಆಲೆಟ್ಟಿ ಅವರ ನೇತೃತ್ವದ ತಂಡದಿಂದ ಸಂಗೀತ ರಸಮಂಜರಿ, ತಾ.ಪಂ . ಮುಂಭಾಗದಲ್ಲಿ ಸುಳ್ಯದ ಮಾಸ್ಟರ್ ಸ್ಟುಡಿಯೋ ಮಾಲಕ ಚೆನ್ನಕೇಶವ ನೇತೃತ್ವದ ತಂಡದಿಂದ ಸಂಗೀತ ರಸಮಂಜರಿ ಹಾಗೂ ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಜ್ಯೋತಿಷಿ ಹಾಗೂ ಗಾಯಕರಾದ ಭೀಮರಾವ್ ವಾಷ್ಠರ್ ನೇತೃತ್ವದ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮವು ಶೋಭಾಯಾತ್ರೆಗೆ ರಂಗು ನೀಡಿತ್ತು.

ಈ ಸಂದರ್ಭದಲ್ಲಿ ಶ್ರೀ ಶಾರದಾಂಬ ಉತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಅಧ್ಯಕ್ಷ ಡಾ. ಲೀಲಾಧರ್ ಡಿ. ವಿ., ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ, ಕೋಶಾಧಿಕಾರಿ ಗಣೇಶ್ ಆಳ್ವ, ಗೌರವ ಸಲಹೆಗಾರರಾದ ಎನ್. ಜಯಪ್ರಕಾಶ್ ರೈ, ಎನ್.ಎ. ರಾಮಚಂದ್ರ, ಎಂ. ವೆಂಕಪ್ಪ ಗೌಡ, ಅಕ್ಷಯ್ ಕೆ.ಸಿ., ಸೇರಿದಂತೆ ಉತ್ಸವ ಸಮಿತಿಯ ಉಪಾಧ್ಯಕ್ಷರುಗಳು, ಶ್ರೀ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷ ಗೋಕುಲ್ ದಾಸ್, ಅಧ್ಯಕ್ಷ ನಾರಾಯಣ ಕೇಕಡ್ಕ, ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್, ಕೋಶಾಧಿಕಾರಿ ಅಶೋಕ್ ಪ್ರಭು, ಜತೆ ಕಾರ್ಯದರ್ಶಿ ಅನಿಲ್ ಕುಮಾರ್ ಕೆ.ಸಿ., ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಅಧ್ಯಕ್ಷ ನವೀನ್ ಚಂದ್ರ ಕೆ.ಎಸ್., ಕಾರ್ಯದರ್ಶಿ ಎಂ.ಕೆ. ಸತೀಶ್, ಸುಳ್ಯ ತಾಲೂಕು ದಸರಾ ಉತ್ಸವ ಸಮಿತಿ ಅಧ್ಯಕ್ಷೆ ಭಾಗೀರಥಿ ಮುರುಳ್ಯ, ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಖಜಾಂಜಿ ಸುನಿಲ್ ಕೇರ್ಪಳ, ಗೌರವ, ಪ್ರಧಾನ ಸಂಯೋಜಕರಾದ ಮಾಜಿ ಸಚಿವ ಎಸ್. ಅಂಗಾರ, ಶ್ರೀ ಶಾರದಾಂಬ ಸೇವಾ ಸಮಿತಿ ಗೌರವ ಸಲಹೆಗಾರರಾದ ಡಾ. ಹರಪ್ರಸಾದ್ ತುದಿಯಡ್ಕ, ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್, ಶ್ರೀಮತಿ ಕಮಲಾಕ್ಷಿ ವಿ.ಶೆಟ್ಟಿ, ಸಮಿತಿಯ ಗೌರವ ಸದಸ್ಯರುಗಳು, ಶ್ರೀ ಶಾರದಾಂಬ ಮಹಿಳಾ ಸಮಿತಿಯ ಗೌರವ ಸಲಹೆಗಾರರಾದ ಡಾ. ಯಶೋದಾ ರಾಮಚಂದ್ರ, ಶ್ರೀಮತಿ ಲತಾ ಮಧುಸೂದನ್, ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ಕಾರ್ಯದರ್ಶಿ ಶ್ರೀದೇವಿ ನಾಗರಾಜ ಭಟ್, ಮಹಿಳಾ ಸಮಿತಿಯ ಗೌರವ ಸದಸ್ಯರುಗಳು, ಸುಳ್ಯ ನಗರದ ದಸರಾ ವಾರ್ಡ್ ಸಮಿತಿ ಸಂಚಾಲರುಗಳು, ಅಧ್ಯಕ್ಷರುಗಳು, ಸದಸ್ಯರುಗಳು , ದಸರಾ ಉಪ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.