ಅ.19 ರಂದು ಶಿಕ್ಷೆ ಘೋಷಣೆ
ಕೊಡಗು ಸಂಪಾಜೆಯ ಬಿಜೆಪಿ ನಾಯಕರಾಗಿದ್ದ ಕಳಗಿ ಬಾಲಚಂದ್ರರ ಹತ್ಯೆ ಪ್ರಕರಣದ ಆರೋಪಿಗಳ ಮೇಲಿನ ಆರೋಪ ಸಾಬೀತಾಗಿರುವುದಾಗಿ ನ್ಯಾಯಾಲಯ ತಿಳಿಸಿದೆ. ತಪ್ಪಿತಸ್ಥರಿಗೆ ಅ.19 ರಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸುವುದಾಗಿ ಕೊಡಗಿನ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಘೋಷಿಸಿದ್ದಾರೆ.
ಸಂಪಾಜೆ ಗ್ರಾ.ಪಂ. ನ ಮಾಜಿ ಅಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾಲಚಂದ್ರ ಕಳಗಿ ಅವರನ್ನು ೨೦೧೯ ಮಾರ್ಚ್ ೧೯ ರಂದು ಓಮ್ನಿ ಕಾರಿಗೆ ಲಾರಿಯಲ್ಲಿ ಗುದ್ದಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಾದ ಸಂಪತ್, ಹರಿಪ್ರಸಾದ್ ಮತ್ತು ಜಯನ್ ಎಂಬವರನ್ನು ಮಡಿಕೇರಿ ಪೋಲೀಸರು ಬಂಧಿಸಿದ್ದರು. ಜಾಮೀನಿನಲ್ಲಿ ಹೊರಗೆ ಬಂದಿದ್ದ ಆರೋಪಿಗಳಲ್ಲಿ ಸಂಪತ್ ಎಂಬಾತನನ್ನು ಸುಳ್ಯದ ಶಾಂತಿನಗರದಲ್ಲಿ ಹತ್ಯೆಗಯ್ಯಲಾಗಿತ್ತು. ಉಳಿದ ಇಬ್ಬರು ಆರೋಪಿಗಳಾದ ಹರಿಪ್ರಸಾದ್ ಮತ್ತು ಜಯನ್‌ಯವರ ಮೇಲಿನ ಆರೋಪ ಸಾಬೀತುಗೊಂಡಿರುವುದಾಗಿ ಅ.೧೬ ರಂದು ಕೊಡಗು ಜಿಲ್ಲಾ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರಶಾಂತಿ ಜಿ. ಘೋಷಿಸಿದ್ದಾರೆ. ತೀರ್ಪಿನ ಪ್ರಮಾಣವನ್ನು ಅ.೧೯ ರಂದು ಘೋಷಿಸುವುದಾಗಿ ತಿಳಿಸಿದ್ದಾರೆ.