ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಜಾಲ್ಸೂರು ಆಡಳಿತ ಮಂಡಳಿ ಚುನಾವಣೆ

0

ಮತ್ತೆ ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿ – ಪೈಪೋಟಿ ನೀಡಿದ ಕಾಂಗ್ರೆಸ್

ಬಿಜೆಪಿ ಬೆಂಬಲಿತ ಸಹಕಾರ ಭಾರತಿಗೆ 11 – ಸ್ವತಂತ್ರ ಅಭ್ಯರ್ಥಿ ಗಂಗಾಧರ ಕಾಳಮನೆ ಗೆಲುವು

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ‌. ಜಾಲ್ಸೂರು ಆಡಳಿತ ಮಂಡಳಿಯ ಚುನಾವಣೆಗೆ ನಿರ್ದೇಶಕರುಗಳ ಆಯ್ಕೆಗೆ ಡಿ.22ರಂದು ಜಾಲ್ಸೂರಿನ ಕದಿಕಡ್ಕ ಸ.ಹಿ.ಪ್ರಾ.ಶಾಲೆಯಲ್ಲಿ ಮತದಾನ ನಡೆಯಿತು.

ಅಂತಿಮ ಕಣದಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ 12 ಮಂದಿ, ಕಾಂಗ್ರೆಸ್ ಬೆಂಬಲಿತ ಸಹಕಾರಿಗಳ ಅಭಿವೃದ್ಧಿ ರಂಗದ 12 ಹಾಗೂ ಐದು ಮಂದಿ ಸ್ವತಂತ್ರ ಅಭ್ಯರ್ಥಿಗಳು ಸೇರಿ ಒಟ್ಟು 29 ಮಂದಿ ಅಭ್ಯರ್ಥಿಗಳು ಅಂತಿಮ ಸ್ಪರ್ಧಾ ಕಣದಲ್ಲಿದ್ದರು.

ಬೆಳಿಗ್ಗೆಯಿಂದ ಸಂಜೆಯವರೆಗೆ ಚುನಾವಣೆ ನಡೆದು ಸಂಜೆ 5 ಗಂಟೆಯ ಬಳಿಕ ಮತ ಎಣಿಕೆ ನಡೆಯಿತು. ಅಂತಿಮವಾಗಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು 11 ಸ್ಥಾನ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗಂಗಾದರ ಗೌಡ ಕಾಳಮನೆ ಅವರು ಗೆಲುವು ಸಾಧಿಸಿದ್ದಾರೆ.

ಈ ಮೂಲಕ ಬಿಜೆಪಿ ಮತ್ತೊಂದು ಅವಧಿಗೆ ಸಹಕಾರಿ ಸಂಘದ ಆಡಳಿತ ಚುಕ್ಕಾಣಿ ಹಿಡಿದಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು ಬಿಜೆಪಿಗೆ ಪೈಪೋಟಿ ನೀಡಿದರಾದರೂ, ಗೆಲುವು ಪಡೆಯುವಲ್ಲಿ ವಿಫಲವಾಗಿದ್ದಾರೆ‌.

ಸಾಲಗಾರರಲ್ಲದ ಕ್ಷೇತ್ರ ಬಿಜೆಪಿ ಬೆಂಬಲಿತ ಸುಧಾಕರ ಕಾಮತ್ ದಿಗ್ವಿಜಯ

ಇಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಣದಲ್ಲಿದ್ದ ಉದ್ಯಮಿ ಸುಧಾಕರ ಕಾಮತ್ ಅವರು 187 ಮತಗಳನ್ನು ಪಡೆದು ದಿಗ್ವಿಜಯ ಸಾಧಿಸಿದ್ದಾರೆ. ಅವರಿಗೆ ಸ್ಪರ್ಧೆಯೊಡ್ಡಿ ಕಾಂಗ್ರೆಸ್ ಬೆಂಬಲಿತ ಸಹಕಾರಿ ಅಭಿವೃದ್ಧಿ ರಂಗದ ಅಭ್ಯರ್ಥಿಯಾಗಿ ಕಣದಲ್ಲಿದ್ದ ಸುಬ್ರಹ್ಮಣ್ಯ ಹೊಳ್ಳ ಬೈತಡ್ಕ ಅವರು 30 ಮತಗಳನ್ನು ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದ ಸೋಣಂಗೇರಿಯ ಸತ್ಯಶಾಂತಿ ತ್ಯಾಗಮೂರ್ತಿ ಅವರು 27 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ಸಾಮಾನ್ಯ ಮಹಿಳಾ ಸ್ಥಾನ ಎರಡೂ ಸ್ಥಾನಗಳು ಬಿಜೆಪಿ ಬೆಂಬಲಿತರ ಮಡಿಲಿಗೆ

ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿದ್ದ ಸಹಕಾರ ಭಾರತಿಯ ಶ್ರೀಮತಿ ವಿನುತ ಸಾರಕೂಟೇಲು 436 ಮತಗಳನ್ನು ಹಾಗೂ ಶ್ರೀಮತಿ ದಮಯಂತಿ ಲಿಂಗಪ್ಪ ಗೌಡ ಅಡ್ಕಾರು ಅವರು 419 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ.

ಈ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಸಹಕಾರಿಗಳ ಅಭಿವೃದ್ಧಿ ರಂಗದಿಂದ ಸ್ಪರ್ಧಿಸಿದ್ದ ಶ್ರೀಮತಿ ತಿರುಮಲೇಶ್ವರಿ ಎ. ಎಲ್. 200 ಮತಗಳನ್ನು ಹಾಗೂ ಶ್ರೀಮತಿ ಜಯಂತಿ ಕೋಡಿಯಂಗಡಿ 173 ಮತಗಳನ್ನು ಪಡೆದು ಪರಾಜಿತಗೊಂಡಿದ್ದಾರೆ.

ಈ ಮೂಲಕ ಭಾರತೀಯ ಜನತಾ ಪಾರ್ಟಿ ಬೆಂಬಲಿತ ಸಹಕಾರ ಭಾರತಿಯ ಇಬ್ಬರೂ ಅಭ್ಯರ್ಥಿಗಳ ಗೆಲುವು ಸಾಧಿಸಿದ್ದಾರೆ.

ಸಾಲಗಾರರ ಪರಿಶಿಷ್ಟ ಜಾತಿ ಕ್ಷೇತ್ರ: ಬಿಜೆಪಿ ಪಾಲಿಗೆ

ಸಾಲಗಾರ ಪರಿಶಿಷ್ಟ ಜಾತಿ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಯಾಗಿ ಕಣದಲ್ಲಿದ್ದ ನಿರಂಜ‌ನ ಬೊಳುಬೈಲು 332 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಇವರಿಗೆ ಪ್ರಬಲ ಪೈಪೋಟಿ ಒಡ್ಡಿದ ಜಾಲ್ಸೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ 256 ಮತ ಪಡೆದು ಪರಾಭವಗೊಂಡರು. ಕಾಂಗ್ರೆಸ್ ಬೆಂಬಲಿತ ಸಹಕಾರಿಗಳ ಅಭಿವೃದ್ಧಿ ರಂಗದ ಅಭ್ಯರ್ಥಿಯಾಗಿದ್ದ ನಾರಾಯಣ ಪಂಜಿಗುಂಡಿ 92 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ.

ಸಾಲಗಾರರ ಪರಿಶಿಷ್ಟ ಪಂಗಡ ಕ್ಷೇತ್ರ: ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವು

ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ವೆಂಕಪ್ಪ ನಾಯ್ಕ ದೇರ್ಕಜೆ 419 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದು, ಈ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಸಹಕಾರಿಗಳ ಅಭಿವೃದ್ಧಿ ರಂಗದ ಅಭ್ಯರ್ಥಿಯಾಗಿದ್ದ ಬೋಜಪ್ಪ ನಾಯ್ಕ 162 ಮತ ಪಡೆದು ಸೋಲು ಕಂಡಿದ್ದಾರೆ. ಈ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದ ಕೃಷ್ಣಪ್ಪ ಮಹಾಬಲಡ್ಕ 98 ಮತ ಪಡೆದು ಪರಾಭವಗೊಂಡಿದ್ದಾರೆ.

ಸಾಲಗಾರ ಸಾಮಾನ್ಯ ಕ್ಷೇತ್ರ: ಬಿಜೆಪಿ ಬೆಂಬಲಿತ 4 ಹಾಗೂ ಸ್ವತಂತ್ರ ಅಭ್ಯರ್ಥಿ 1 ಗೆಲುವು

ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳಾದ ತಿಲೋತ್ತಮ ಗೌಡ ಕೊಲ್ಲಂತಡ್ಕ 377, ಡಾ. ಗೋಪಾಲಕೃಷ್ಣ ಭಟ್ ಕಾಟೂರು 362, ಸುನಿಲ್ ಅಕ್ಕಿಮಲೆ 353, ಕುಸುಮಾಧರ ಅರ್ಭಡ್ಕ 351 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಯಾಗಿ ಕಣದಲ್ಲಿದ್ದ ರಘುರಾಮ ಗೌಡ ಬುಡ್ಲೆಗುತ್ತು 349 ಮತ ಪಡೆದು ಪರಾಭವಗೊಂಡರು. ಈ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದ ಗಂಗಾಧರ ಗೌಡ ಕಾಳಮನೆ 357 ಮತ ಪಡೆದು ಗೆಲುವು ಸಾಧಿಸಿದ್ದಾರೆ.

ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಸಹಕಾರಿಗಳ ಅಭಿವೃದ್ಧಿ ರಂಗದ ಅಭ್ಯರ್ಥಿಗಳಾದ ಹರಿಪ್ರಕಾಶ್ ಅಡ್ಕಾರು 194, ಅಜಿತ್ ಕಾರಿಂಜ 183, ಅಬ್ದುಲ್ ಖಾದರ್ ಕದಿಕಡ್ಕ 163, ವಿಜಯ ನರಿಯೂರು 139, ಚೆನ್ನಕೇಶವ ಎಂ. ಜಾಲ್ಸೂರು 119 ಮತ ಪಡೆದು ಪರಾಭವಗೊಂಡರು.

ಈ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದ ಶರತ್ ಅಡ್ಕಾರು 160 ಮತ ಪಡೆದು ಸೋಲು ಕಂಡಿದ್ದಾರೆ.

ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಕ್ಷೇತ್ರ ಬಿಜೆಪಿ ಪಾಲು

ಹಿಂದುಳಿದ ವರ್ಗ ಪ್ರವರ್ಗ ಎ. ಮೀಸಲು ಕ್ಷೇತ್ರದಿಂದ ಸಹಕಾರ ಭಾರತಿ ಅಭ್ಯರ್ಥಿಯಾಗಿದ್ದ ಸಂದೀಪ್ ಕದಿಕಡ್ಕ 419 ಮತ ಪಡೆದು ಗೆಲುವು ಕಂಡಿದ್ದು, ಸಹಕಾರಿಗಳ ಅಭಿವೃದ್ಧಿ ರಂಗದ ಅಭ್ಯರ್ಥಿಯಾಗಿದ್ದ ನ್ಯಾಯವಾದಿ ಮಹಮ್ಮದ್ ಫವಾಜ್ ಕನಕಮಜಲು 273 ಮತ ಪಡೆದು ಸೋಲನುಭವಿಸಿದರು.

ಹಿಂದುಳಿದ ವರ್ಗ ಬಿ ಬಿಜೆಪಿ ಬೆಂಬಲಿತ ಗಂಗಾಧರ ರೈ ಸೋಣಂಗೇರಿ ಗೆಲುವು

ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಯಾಗಿ ಕಣದಲ್ಲಿದ್ದ ಗಂಗಾಧರ ರೈ ಸೋಣಂಗೇರಿ 407 ಮತ ಪಡೆದು ಗೆಲುವು ಸಾಧಿಸಿದ್ದಾರೆ.
ಸಹಕಾರಿಗಳ ಅಭಿವೃದ್ಧಿ ರಂಗದ ಅಭ್ಯರ್ಥಿಯಾಗಿ ಕಣದಲ್ಲಿದ್ದ ಕನಕಮಜಲಿನ ಹೇಮಚಂದ್ರ ಕುತ್ಯಾಳ 264 ಮತ ಪಡೆದು ಸೋಲು ಕಂಡಿದ್ದಾರೆ.

ಗಂಗಾಧರ ಗೌಡ ಕಾಳಮನೆ ಅವರು ಬಿಜೆಪಿ ಕಾರ್ಯಕರ್ತರಾಗಿದ್ದು, ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಲು ತಮಗೆ ಅವಕಾಶ ನೀಡುವಂತೆ ಪಕ್ಷದ ಪ್ರಮುಖರಿಗೆ ಕೇಳಿಕೊಂಡಿದ್ದರು. ಆದರೆ ಪಕ್ಷ ಅವಕಾಶ ನೀಡದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.