” ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸಾರ್ವಜನಿಕ ಸಭೆಯಲ್ಲಿ “ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಬಡತನ ಅಂತ್ಯವಾಗುತ್ತದೆಯೇ? ಹೊಟ್ಟೆ ತುಂಬುತ್ತದೆಯೇ ? ದೇಶಕ್ಕೇನು ಲಾಭ ” ಎಂದು ಪ್ರಶ್ನಿಸಿದ್ದಾರೆ. ಇದು ದೇಶದ ನೂರಾರು ಕೋಟಿ ಹಿಂದೂಗಳ ಭಾವನೆಗೆ ಘಾಸಿ ಮಾಡುವಂತ ಹೇಳಿಕೆಯಾಗಿದೆ” ಎಂದು ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಲಳಂಬೆ ತಿಳಿಸಿದ್ದಾರೆ.
ಮಹಾ ಕುಂಭ ಮೇಳ ಸನಾತನ ಧರ್ಮದ ಪ್ರತೀಕವಾಗಿದೆ. ಸುಳ್ಯದಂತ ಗ್ರಾಮೀಣ ಪ್ರದೇಶದಿಂದ ಕೂಡ ಈ ಕುಂಭಮೇಳಕ್ಕೆ ನೂರಾರು ಜನ ಹೋಗಿ ಗಂಗಾ ಸ್ನಾನ ಮಾಡಿ ಬಂದು ಪುನೀತರಾಗಿದ್ದಾರೆ. ಅದೊಂದು ಶ್ರದ್ಧೆಯ ವಿಚಾರವಾಗಿದೆ. ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಮುಖರಿಗೆ ನಮ್ಮದೊಂದು ಪ್ರಶ್ನೆಯಿದೆ. ಆಯಾಯ ಧರ್ಮದವರು ಮೆಕ್ಕಾ, ವ್ಯಾಟಿಕನ್ ಗೆ ತೆರಳಿ ದೇವರ ದರ್ಶನ ಮಾಡಿ ಬರುತ್ತಾರೆ. ಆಗ ಬಡವರ ಹೊಟ್ಟೆ ತುಂಬುತ್ತದೆಯೇ ಎಂದು ಕೇಳುವ ಧೈರ್ಯ ನಿಮಗೆ ಇದೆಯೇ? ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾರವರು ಎಷ್ಟು ಮುಳುಗಿದರೂ ಸ್ವರ್ಗಕ್ಕೆ ಹೋಗಲ್ಲ ಎನ್ನುವ ಬಾಲಿಶ ಹೇಳಿಕೆ ಖಂಡನೀಯ. ಮಲ್ಲಿಕಾರ್ಜುನ ಖರ್ಗೆಯವರು ಇಂತಹ ಬೇಜವಾಬ್ದಾರಿ ಹೇಳಿಕೆಗಾಗಿ ಹಿಂದುಗಳ ಕ್ಷಮೆಯಾಚಿಸಬೇಕು ಎಂದು ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.