ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವರ ವಿಜೃಂಭಣೆಯ ಜಾತ್ರೋತ್ಸವ ಸಂಪನ್ನ

0

ಇತಿಹಾಸ ಪ್ರಸಿದ್ಧ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ,ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಫೆ.8,9 ಮತ್ತು 10 ರಂದು ಜಾತ್ರೋತ್ಸವವು ವಿಜೃಂಭಣೆಯಿಂದ ನಡೆದು ಸಂಪನ್ನಗೊಂಡಿತು.

ಫೆ.10 ರಂದು ಪೂರ್ವಾಹ್ನ ಕೊಯಿಲ ಉಳ್ಳಾಕುಲು ದೈವಗಳ ಭಂಡಾರ ಆಗಮನವಾಯಿತು. ಬಳಿಕ ಶ್ರೀ ದೇವರ ಬಲಿ ಹೊರಟು ಉತ್ಸವ,ದರ್ಶನ ಬಲಿ,ಬಟ್ಟಲು ಕಾಣಿಕೆ ನಡೆಯಿತು. ನಂತರ ಶುದ್ಧಿ ಕಲಶ, ಮಹಾಪೂಜೆ,ವೈದಿಕ ಮಂತ್ರಾಕ್ಷತೆ,ಪ್ರಸಾದ ವಿತರಣೆ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಜನ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿ ದೈವಗಳ ನಡಾವಳಿಯು ಭಕ್ತಿ,ಸಂಭ್ರಮದಿಂದ ನಡೆಯಿತು.


ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಭಟ್ ಬಾಂಜಿಕೋಡಿ,ವೈದಿಕ ಮುಖ್ಯಸ್ಥ ರಾಜಾರಾಮ ರಾವ್ ಉದ್ದಂಪಾಡಿ,ವ್ಯ.ಸ.ಸದಸ್ಯರಾದ ಅರ್ಚಕ ರಾಮಚಂದ್ರ ಪಿ.ಜಿ, ಶ್ರೀಮತಿ ಶೀಲಾವತಿ ಕುಳ್ಳಂಪಾಡಿ,ಬಾಲಕೃಷ್ಣ ಗೌಡ ಮಡ್ತಿಲ, ಕರುಣಾಕರ ಯು.ಉದ್ದಂಪಾಡಿ,ಶ್ರೀಮತಿ ಆಶಾ ಎಂ.ಎಸ್.ಮಡ್ತಿಲ,ಶಿವರಾಮ ಗೌಡ ಎನ್.ನೆಕ್ರೆಪ್ಪಾಡಿ, ರಾಧಾಕೃಷ್ಣ ಗೌಡ ಸಿ.ಚಾಕೊಟೆ,ಮುರಳೀಧರ ಕೊಚ್ಚಿ,ಕಚೇರಿ ನಿರ್ವಾಹಕ ಯಶವಂತ ಬಿ,ಪೂಗವನ ನಿರ್ವಾಹಕ ಪೊನ್ನಪ್ಪ ಪಡ್ಡಂಬೈಲು ಹಾಗು ಸಾವಿರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.

ಪ್ರತೀ ದಿನ ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಫೆ.09 ರಂದು ಬೆಳಿಗ್ಗೆ ಶ್ರೀ ಗುರುದೇವ ಭಜನಾ ಮಂಡಳಿ ಐವರ್ನಾಡು ಮತ್ತು ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಐವರ್ನಾಡು ಇವರಿಂದ ಭಜನೆ ನಡೆಯಿತು. ಬಳಿಕ “ಒಂ ಶಕ್ತಿ ಭಕ್ತಿ ಗಾನ ಲಹರಿ” ನಡೆಯಿತು. ರಾತ್ರಿ “ಯೋಗ ನೃತ್ಯ ಸಂಗಮ” ಸುಳ್ಯ ಹಾರ್ದಿಕ್ ಮತ್ತು ತಂಡದವರಿಂದ ನಡೆಯಿತು. ಬಳಿಕ ಶ್ರೀ ಪಂಚಲಿಂಗೇಶ್ವರ ಸಾಂಸ್ಕೃತಿಕ ಕಲಾ ವೇದಿಕೆ ಐವರ್ನಾಡು ಇದರ ಆಶ್ರಯದಲ್ಲಿ “ನೃತ್ಯ ವೈವಿಧ್ಯ ಕಾರ್ಯಕ್ರಮ “ನಡೆಯಲಿದೆ.
ಫೆ.10 ರಂದು ರಾತ್ರಿ ಪಂಚಲಿಂಗೇಶ್ವರ ಯಕ್ಷಕಲಾ ಕೇಂದ್ರ ಐವರ್ನಾಡು ಇವರಿಂದ ಮಕ್ಕಳ ಯಕ್ಷಗಾನ “ಶಿವ ಪಂಚಾಕ್ಷರಿ ಮಹಿಮೆ” ನಡೆಯಿತು.
ಎಲ್ಲಾ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಳಿಸಿತು.

ಐವರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘದಿಂದ ಜಾತ್ರೆಗೆ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಉಚಿತ ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಜನ ಭಕ್ತಾದಿಗಳು ಮಜ್ಜಿಗೆ ಸ್ವೀಕರಿಸಿದರು. ಸಂಘದ ಅಧ್ಯಕ್ಷರು,ನಿರ್ದೇಶಕರು,ಕಾರ್ಯದರ್ಶಿ,ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಭಕ್ತಾದಿಗಳಿಗೆ ಮಜ್ಜಿಗೆ ವಿತರಿಸಿದರು.

ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಜಾತ್ರೆಯಲ್ಲಿ ಭಕ್ತಾದಿಗಳ ಉಚಿತ ಆರೋಗ್ಯ ತಪಾಸಣೆ ನಡೆಯಿತು. ಭಕ್ತಾದಿಗಳು ತಮ್ಮ ಬಿ.ಪಿ,ಶುಗರ್ ಚೆಕಪ್ ಮಾಡಿಸಿಕೊಂಡರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ರಮ್ಯಲತಾ, ಸಮುದಾಯ ಆರೋಗ್ಯ ಅಧಿಕಾರಿ ವೀಣಾರವರು ಆರೋಗ್ಯ ತಪಾಸಣೆ ಮಾಡಿದರು.
ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಸುಂದರಿ,ಶ್ರೀಮತಿ ಇಂದುಮತಿ, ಶೋಭಾ ,ಸುಶೀಲರವರು ಸಹಕರಿಸಿದರು.

ಈ ಬಾರಿ ಜಾತ್ರೆಯಲ್ಲಿ ಜಾತ್ರಾ ಸಂತೆಗಳು ಹೆಚ್ಚಾಗಿದ್ದು ಜಾತ್ರೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಿತು.
ಜಾತ್ರೆಯಲ್ಲಿ ಐಸ್ ಕ್ರೀಂ ಗಾಡಿಗಳು ಅಲ್ಲಲ್ಲಿ ನಿಂತಿದ್ದವು, ಮಕ್ಕಳ ಆಟಿಕೆಗಳ ಅಂಗಡಿಗಳು,ಗೋಬಿ ಮಂಚೂರಿ,ಚರುಂಬಿರಿ ಅಂಗಡಿಗಳು,ಹೋಟೆಲ್ ಗಳು, ಪೊಟೆಟೊ ಟ್ವಸ್ಟರ್,ಸ್ವೀಟ್ ಕಾರ್ನ್,ಬಟ್ಟೆ ಅಂಗಡಿ, ಜ್ಯೂಸ್ ಅಂಗಡಿಗಳು,ಫ್ಯಾನ್ಸಿ ಅಂಗಡಿಗಳು ಹೆಚ್ಚಾಗಿದ್ದವು.
ಜಾತ್ರಾ ಸಂತೆಯಲ್ಲಿ ಜನರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿರುವುದು ಕಂಡು ಬಂತು.