ವಿಜ್ಞಾನ ಆಧುನಿಕ ಯುಗದ ಬೆಳವಣಿಗೆ : ಡಾ.ದಾಮ್ಲೆ

0

” ಪ್ರಾಚೀನ ಕಾಲದಲ್ಲಿ ಜನರು ಹೇಳಿದ್ದನ್ನು ನಂಬುತ್ತಿದ್ದರು. ಇಂದು ಪ್ರಶ್ನಿಸುವ ಹಂತಕ್ಕೆ ಜನರು ಬೆಳೆದಿದ್ದಾರೆ. ವಿಜ್ಞಾನ ಮೂಢನಂಬಿಕೆಯನ್ನು ಹೋಗಲಾಡಿಸುವ ಜೊತೆಗೆ ಸತ್ಯವಿಚಾರಗಳ ಮೇಲಿನ ನಂಬಿಕೆಯನ್ನು ಬಲಪಡಿಸುತ್ತದೆ. ಪಾಶ್ಚ್ಯಾತ್ಯರ ಚಿಂತನೆಯ ಪ್ರಕಾರ ಪ್ರಕೃತಿ ವಿಜ್ಞಾನದ ಹಿಡಿತದಲ್ಲಿದೆ. ಆದರೆ ಭಾರತೀಯ ಚಿಂತನೆಯ ಪ್ರಕಾರ ಮಾನವ ಪ್ರಕೃತಿಯ ಭಾಗ. ವಿಜ್ಞಾನವನ್ನು ತಿಳಿಯಲು ವೈಜ್ಞಾನಿಕ ಕಾರಣ ಹಾಗೂ ಪರಿಣಾಮವನ್ನು ಅರ್ಥಮಾಡಿಕೊಳ್ಳಬೇಕು. ವಿಜ್ಞಾನದ ಗುಣಾತ್ಮಕ ವಿಚಾರಗಳನ್ನು ತಿಳಿದುಕೊಂಡು ಬಳಸುವ ಬಗ್ಗೆ ಎಚ್ಚರಿಕೆ ವಹಿಸಿ ಬದುಕನ್ನು ಸುಂದರವಾಗಿಸೋಣ”. ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಅವರು ಹೇಳಿದರು. ಅವರು ಫೆ. ೮ರಂದು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಶಿಕ್ಷಕಿ ಶ್ರೀಮತಿ ಗಾಯತ್ರಿ ಬಿ.ಎಸ್ ಇವರು ಮಾತನಾಡಿ “ಸಿ.ವಿ. ರಾಮನ್ ಅವರ ‘ರಾಮನ್ ಪರಿಣಾಮ’ ಎಂಬ ಮಹತ್ವದ ತತ್ವವನ್ನು ಪ್ರತಿಪಾದಿಸಿದ ದಿನವೇ ವಿಜ್ಞಾನ ದಿನ. ಆಧುನಿಕ ತಂತ್ರಜ್ಞಾನದ ತಳಹದಿಯೇ ವಿಜ್ಞಾನ . ವಿಜ್ಞಾನ ಕ್ಷೇತ್ರದಲ್ಲಿ ಆದ ಸಾಧನೆಯನ್ನು ಗೌರವಿಸುವುದು ಹಾಗೂ ಜನತೆಯ ವಿಜ್ಞಾನ ಪ್ರೇಮವನ್ನು ಹೆಚ್ಚಿಸುವ ಉದ್ದೇಶದಿಂದ ಭಾರತ ಸರ್ಕಾರವು ಫೆಬ್ರವರಿ ೨೮ ನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸುತ್ತಿದೆ. ಪ್ರತಿ ವರ್ಷವೂ ಕೂಡ ಒಂದೊಂದು ಥೀಮ್ ನೊಂದಿಗೆ ಆಚರಿಸುತ್ತಿದ್ದು ಈ ವರ್ಷ ” ವಿಕಸಿತಾ ಭಾರತಕ್ಕಾಗಿ ವಿಜ್ಞಾನ ಮತ್ತು ನಾವಿನ್ಯತೆಯಲ್ಲಿ ಜಾಗತಿಕ ನಾಯಕತ್ವಕ್ಕಾಗಿ ಭಾರತೀಯ ಯುವಕರನ್ನು ಸಬಲೀಕರಣಗೊಳಿಸುವುದು ಎಂಬುದಾಗಿದೆ ” ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಅವರು ಮಾತನಾಡಿ “ನಮ್ಮ ದೈನಂದಿನ ಜೀವನದಲ್ಲಿ ವಿಜ್ಞಾನ ಹಾಸು ಹುಕ್ಕಾಗಿದೆ . ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆ ಮೂಡಿಸಿಕೊಂಡರೆ ಯಶಸ್ಸನ್ನು ಸಾಧಿಸಬಹುದು” ಎಂದರು .

ಕಾರ್ಯಕ್ರಮದಲ್ಲಿ ವಿಜ್ಞಾನ ಶಿಕ್ಷಕಿ ಶ್ರೀಮತಿ ಪ್ರತಿಮಕುಮಾರಿ ಕೆ. ಎಸ್ ವಿಜ್ಞಾನ ದಿನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಸಂಸ್ಥೆಯ ವಿದ್ಯಾರ್ಥಿ ಗ್ರಹಿತ್ ಡಿ. ಎಸ್. ಸ್ವಾಗತಿಸಿ, ಕಾರ್ತಿಕ್ ಎನ್. ಎನ್ ಧನ್ಯವಾದವಿತ್ತರು. ಅಪ್ರಮೇಯ ಆರ್.ಯು ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು. ಸುಮಾರು ೬೦ ವಿದ್ಯಾರ್ಥಿಗಳು ಭಾಗವಹಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.