ಐವರ್ನಾಡು ಯುವಶಕ್ತಿ ಸಂಘದ ವತಿಯಿಂದ ಶ್ರೀ ಶಾರದಾ ಪೂಜಾ ಮಹೋತ್ಸವ

0

ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದ ಉದ್ಘಾಟನೆ – ಸನ್ಮಾನ

ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಅವಕಾಶ ನೀಡಿದಂತಾಗಿದೆ – ಸದಾನಂದ ಮಾವಜಿ

ಇಂದು ಸಂಜೆ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ – ಜಲಸ್ತಂಭನ

ಯುವಶಕ್ತಿ ಸಂಘ ಐವರ್ನಾಡು, ಸಾರ್ವಜನಿಕರ ಸಹಕಾರದೊಂದಿಗೆ 21 ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವವು ಸೆ.27 ರಿಂದ ಪ್ರಾರಂಭಗೊಂಡಿದ್ದು ಸೆ‌.28 ರಂದು ಐವರ್ನಾಡು ಮಡ್ತಿಲ ಪುರುಷೋತ್ತಮ ಗೌಡ ಸ್ಮಾರಕ ರಂಗಮಂದಿರದಲ್ಲಿ ನಡೆಯುತ್ತಿದೆ.

ಸೆ.27 ರಂದು ಸಂಜೆ ನಡೆದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಒಳ್ಳೆಯ ಪ್ರತಿಭೆಗಳಿದ್ದಾರೆ. ವೇದಿಕೆಯಲ್ಲಿ ಪ್ರತಿಭೆಗಳನ್ನು ತೋರ್ಪಡಿಸಲು ಅವಕಾಶ ಕಲ್ಪಿಸಿದಂತಾಗಿದೆ.ಇಲ್ಲಿ ಸಂಘಟನೆಗಳ ಚಾಕಚಕ್ಯತೆ ಎದ್ದು ಕಾಣುತ್ತಾ ಇದೆ.ಧಾರ್ಮಿಕ ಮನೋಭಾವ ಹೆಚ್ಚಿಸುವ ನಿಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಕೊಡುಗೈ ದಾನಿಗಳ ಸಹಕಾರದಿಂದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತದೆ ಎಂದು ಹೇಳಿದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯುವಶಕ್ತಿ ಸಂಘದ ಗೌರವಾಧ್ಯಕ್ಷ ದಿನೇಶ್ ಮಡ್ತಿಲ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಎಲ್ಲರ ಸಹಕಾರದಿಂದ 21 ವರ್ಷದ ಶಾರದೋತ್ಸವ ಕಾರ್ಯಕ್ರಮ ನಡೆಸುತ್ತಿದ್ದೇವೆ. ಶಾಲೆಯ ಬಹುದಿನದ ಬೇಡಿಕೆ ಈ ವರ್ಷ ಈಡೇರಿದಂತಾಗಿದೆ.ಶಾಲೆಗೆ ಇಂಗ್ಲೀಷ್ ಮಾಧ್ಯಮ ಸರಕಾರದಿಂದ ಮಂಜೂರಾಗಿದೆ.ಬರುವ ವರ್ಷದಿಂದ ಇಲ್ಲಿ ಇಂಗ್ಲೀಷ್ ಮಾಧ್ಯಮ ಪ್ರಾರಂಭವಾಗುತ್ತದೆ. ಇದಕ್ಕೆ ಸಹಕಾರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಸಾಧಕರಿಗೆ ಸನ್ಮಾನ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಹಲವು ವರ್ಷಗಳ ಕಾಲ ಅರ್ಚರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿಗೊಂಡಿರುವ ಪುರೋಹಿತ ಪದ್ಮನಾಭ ಭಟ್ ದಂಪತಿಯನ್ನು ಶಾಲುಹೊದಿಸಿ ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಪದ್ಮನಾಭ ಭಟ್ ರವರು ಮಾತನಾಡಿ ತಾನು ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ ದಿನಗಳನ್ನು ನೆನಪಿಸಿಕೊಂಡು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಯಕ್ಷಗಾನ ನಾಟ್ಯ ಗುರು ಬಾಲಕೃಷ್ಣ ನಾಯರ್ ನೀರಬಿದಿರೆ, ಕಲಾವಿದ ರಾಮಚಂದ್ರ ನಾಯ್ಕ ನೀರಬಿದಿರೆ ಇವರನ್ನು ಸನ್ಮಾನಿಸಲಾಯಿತು.
ಯುವಶಕ್ತಿ ಸಂಘದ ವತಿಯಿಂದ ದಾಸಪ್ಪ ನಾಯ್ಕರವರ ಪುತ್ರ ಲಕ್ಷ್ಮಿತ್ ಮತ್ತು ಶೇಷಪ್ಪ ಆಚಾರ್ಯರವರ ಪುತ್ರ ಅವಿನಾಶ್ ರವರಿಗೆ ಧನಸಹಾಯ ಹಸ್ತಾಂತರಿಸಲಾಯಿತು.

ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹೆಚ್ಚು ಧನಸಹಾಯ ಸಂಗ್ರಹಿಸಿದ ಬಾಲಕೃಷ್ಣ ಮಡ್ತಿಲ ಬಿಎಸ್ಸೆನ್ನೆಲ್ ಇವರ ತಂಡವನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಹೊನ್ನಪ್ಪ ಉದ್ದಂಪಾಡಿ,ಯುವಶಕ್ತಿ ಸಂಘದ ಪ್ರಧಾನ ಕಾರ್ಯದರ್ಶಿ ಪುನೀತ್ ಕೊಯಿಲ ಉಪಸ್ಥಿತರಿದ್ದರು. ಪ್ರಣೀತ ಜಬಳೆ ಮತ್ತು ಲಾವಣ್ಯ ಜಬಳೆ ಪ್ರಾರ್ಥಿಸಿ,ನವೀನ್ ಬಾಂಜಿಕೋಡಿ,ಹಿಮಾನಿ ಮಡ್ತಿಲ ಕಾರ್ಯಕ್ರಮ ನಿರೂಪಿಸಿ, ಯುವಶಕ್ತಿ ಸಂಘದ ಅಧ್ಯಕ್ಷ ಲೋಕೇಶ ಕತ್ಲಡ್ಕ ವಂದಿಸಿದರು.

ಸೆ.27 ರಂದು ಬೆಳಿಗ್ಗೆ ಪುತ್ತಿಲ ಶ್ರೀ ಗಿರೀಶ್ ಅಸ್ರಣ್ಣರವರ ನೇತೃತ್ವದಲ್ಲಿ ಗಣಹೋಮ ಮತ್ತು ಶ್ರೀ ಶಾರದಾ ದೇವಿಯ ಪ್ರತಿಷ್ಠಾಪನೆ ನಡೆಯಿತು.
ನಂತರ ಗ್ರಾಮಸ್ಥರಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ ನಡೆಯಿತು.
ಸಂಜೆ ಪ್ರಾಥಮಿಕ ಶಾಲಾ ಮಕ್ಕಳ ಡ್ಯಾನ್ಸ್,ಶ್ರೀ ಪಂಚಲಿಂಗೇಶ್ವರ ಯಕ್ಷಕಲಾ ಕೇಂದ್ರ ಮತ್ತು ಸ.ಹಿ.ಪ್ರಾ.ಶಾಲೆ ಐವರ್ನಾಡು ಇಲ್ಲಿನ ವಿದ್ಯಾರ್ಥಿಗಳಿಂದ “ಸುದರ್ಶನ ಗರ್ವಭಂಗ” ಎಂಬ ಯಕ್ಷಗಾನ ನಡೆಯಿತು. ಸಭಾ ಕಾರ್ಯಕ್ರಮ ನಡೆದ ಬಳಿಕ ಶ್ರೀ ದೇವರಿಗೆ ಮಹಾಪೂಜೆ,ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಅಮೋಘ ಸಿಡಿಮದ್ದಿನ ಪ್ರದರ್ಶನ ನಡೆಯಿತು.
ಬಳಿಕ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.
ನಮ್ಮ ಡಿ.ವಿ ಬಲೆತೆಲಿಪಾಲೆ ಖ್ಯಾತಿಯ ಸಾಯಿ ಪುತ್ತೂರು ಅರ್ಪಿಸುವ ಮಕ್ಕರ್ ಟೀಮ್ ರವರಿಂದ ತುಳು ಹಾಸ್ಯಕಾರ್ಯಕ್ರಮ “ತೆಲಿಕೆ ಬಂಜಿ ನಿಲಿಕೆ” ನಡೆಯಿತು.
ಬೈರವಿ ನಾಟ್ಯಾಲಯ ಐವರ್ನಾಡು ಇವರಿಂದ “ನೃತ್ಯಾರ್ಪಣಂ” ಹಾಗೂ ಫ್ಯೂಷನ್ ಇನ್ಸಿಟ್ಯೂಟ್ ಆಫ್ ಡ್ಯಾನ್ಸ್ ಸುಳ್ಯ ತಂಡದವರಿಂದ “ಡ್ಯಾನ್ಸ್ ಡ್ಯಾನ್ಸ್”
ಯುವಶಕ್ತಿ ಸದಸ್ಯರಿಂದ “ಕಾರ್ಯಕ್ರಮ ವೈವಿಧ್ಯ” ನಡೆಯಿತು.

ಇಂದು ಸಂಜೆ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ – ಜಲಸ್ತಂಭನ

ಸೆ.29 ರಂದು ಬೆಳಿಗ್ಗೆ ಶ್ರೀ ಗುರುದೇವಾ ಭಜನಾ ಮಂಡಳಿ ಐವರ್ನಾಡು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
“ಅಕ್ಷರಾಭ್ಯಾಸ ” “ಆಯುಧ ಪೂಜೆ” ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ. ನಂತರ
ಶ್ರೀ ಶಾರದಾ ದೇವಿಯ ಶೋಭಾಯಾತ್ರೆ ಐವರ್ನಾಡಿನ ಮುಖ್ಯ ರಸ್ತೆಯಲ್ಲಿ ಸಾಗಿ ಬಾಂಜಿಕೋಡಿ ಹೊಳೆಯಲ್ಲಿ ಜಲಸ್ತಂಭನ ಮಾಡಲಾಗುವುದು.