ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿಅನುಮತಿ ಪಡೆಯದೆ ಅಳವಡಿಸಿದ ಫ್ಲೆಕ್ಸ್ಗಳ ತೆರವಿಗೆ ಕ್ರಮಕ್ಕೆ ಅಗ್ರಹ

ಅರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆಯವರ ಅಧ್ಯಕ್ಷತೆಯಲ್ಲಿ ಪಂಚಾಯತ್ “ಗ್ರಾಮ ಸ್ವರಾಜ್ ” ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಪ್ರಮುಖವಾಗಿ ಪಂಚಾಯತ್ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲಿ ವ್ಯಾಪಕವಾಗಿ ವಾಣಿಜ್ಯ ಉದ್ದೇಶಕ್ಕಾಗಿ ಶಾಶ್ವತ ಫ್ಲಕ್ಸ್ ಅಳವಡಿಸಿದ್ದು. ಆದರೆ ಕೆಲವರು ಪಂಚಾಯತ್ ಅನುಮತಿ ಪಡೆಯದೆ, ಪ್ಲೆಕ್ಸ್ ಅಳವಡಿಸಿದ ಸ್ಥಳದ ಮಾಹಿತಿ ನೀಡದಿರುವುದರಿಂದ ಪ್ರಯಾಣಿಕರಿಗೂ ಹಾಗೂ ವ್ಯಾಪಾರಸ್ಥರಿಗೂ ತೊಂದರೆಯಾಗುವುದರಿಂದ ಇದರ ಬಗ್ಗೆ ಕ್ರಮ ಕೈಕೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಾಮಾನ್ಯ ಸಭೆಯಲ್ಲಿ ನವಂಬರ್ ತಿಂಗಳ ಎರಡನೇ ವಾರದಲ್ಲಿ ಶಾಸಕರು, ವಿಧಾನಪರಿಷತ್ ಸದಸ್ಯರ ಸಮಯಾವಕಾಶವನ್ನು ಪಡಕೊಂಡು ಬೆಂಕಿಯಿಂದ ಅವಘಡಕ್ಕೆ ಈಡಾದ ಘನತ್ಯಾಜ ಘಟಕದ ಮರು ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸುವುದೆಂದು ನಿರ್ಣಯಿಸಲಾಯಿತು. ತೊಡಿಕಾನ ಗ್ರಾಮ ಅದ್ಯಡ್ಕದಲ್ಲಿ ಪಂಚಾಯತ್ ನೀರು ಬಳಕೆದಾರರಿಗೆ 24/7 ನೀರು ಪೂರೈಕೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಲು ನಿರ್ಣಯಿಸಲಾಯಿತು.








ಮತ್ತು ಪಂಚಾಯತ್ ಆವರಣದೊಳಗೆ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಯ ಸ್ಥಳಾಂತರಕ್ಕೆ ನಿರ್ಣಯಿಸಲಾಯ್ತು. ಪಂಚಾಯತ್ ಈಗಿನ ಆಡಳಿತ ಅವಧಿ ಎರಡು ಮೂರು ತಿಂಗಳು ಇರುವುದರಿಂದ ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ನಿರ್ಣಯಿಸಿ. ಕಾಮಗಾರಿಯ ಗುತ್ತಿಗೆಯನ್ನು ಪಡೆದುಕೊಂಡು ತ್ವರಿತವಾಗಿ ಮುಗಿಸದಿದ್ದರೆ ಅಂತಹ ಗುತ್ತಿಗೆದಾರರಿಗೆ ಮುಂದಿನ ಪಂಚಾಯತ್ ಕಾಮಗಾರಿ ಗುತ್ತಿಗೆಯನ್ನು ನೀಡದಿರಲು ನಿರ್ಣಯ ಕೈಕೊಳ್ಳಲಾಯ್ತು. ಸಭೆಯಲ್ಲಿ ಸದಸ್ಯರು ಪಂಚಾಯತ್ ರಸ್ತೆಗಳ ದುರಸ್ಥಿ, ಬೀದಿ ದೀಪ ದುರಸ್ಥಿ ಬಗ್ಗೆ ಚರ್ಚೆ ನಡೆಸಿದರು. ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಭವಾನಿ ಚಿಟ್ಟನೂರು, ಪಂಚಾಯತ್ ಸದಸ್ಯರಾದ ಹರಿಣಿ ದೇರಾಜೆ, ಶ್ವೇತಾ ಅರಮನೆ ಗಾಯ, ಮಾಲಿನಿ ಉಳುವಾರು, ಸುಜಯ ಮೇಲಡ್ತಲೆ, ಉಷಾ ಅಡ್ಯಡ್ಕ, ವಿನೋದ ತೊಡಿಕಾನ, ಶಿವಾನಂದ ಕುಕ್ಕುಂಬಳ, ವೆಂಕಟರಮಣ ಪೆತ್ತಾಜೆ, ರವೀಂದ್ರ ಪಂಜಿಕೋಡಿ, ಪುಷ್ಪಾದರ ಕೊಡಂಕೇರಿ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜಯಪ್ರಕಾಶ್ ಎಮ್ ಆರ್ ಸ್ವಾಗತಿಸಿ, ಸರಕಾರದ ಸುತ್ತೋಲೆಗಳನ್ನು ಮಂಡಿಸಿದರು. ಪಂಚಾಯತ್ ಮತ್ತು ಸ್ವಚ್ಛತಾ ಘಟಕದ ಸಿಬ್ಬಂದಿಗಳು ಸಹಕರಿಸಿದರು.










