ಅರಂತೋಡು : ರಾಷ್ಟ್ರೀಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಗೆದ್ದ ಚಿಂತನಾ ಪೂಜಾರಿಮನೆಯವರಿಗೆ ಅದ್ಧೂರಿ ಸ್ವಾಗತ

0

೩೫ನೇ ಜೂನಿಯರ್ ರಾಷ್ಟ್ರೀಯ ತ್ರೋಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಕರ್ನಾಟಕ ತ್ರೋಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಸೆಮಿಫೈನಲ್ ಪಂದ್ಯದಲ್ಲಿ “ಪ್ಲೇಯರ್ ಆಫ್ ದಿ ಮ್ಯಾಚ್” ಮತ್ತು ಇಡೀ ಪಂದ್ಯಾಟದಲ್ಲಿನ ಅತ್ಯುತ್ತಮ ಆಟಕ್ಕೆ “ಬೆಸ್ಟ್ ಅಟ್ಯಾಕರ್ ಪ್ರಶಸ್ತಿ” ಯೊಂದಿಗೆ ಪ್ರಥಮ ಸ್ಥಾನ ಪಡೆದು ವಿಶಿಷ್ಟ ಸಾಧನೆಗೆ ಭಾಜನರಾದ ಕ್ರೀಡಾಪಟು ಅರಂತೋಡು ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಕು.ಚಿಂತನಾ ಪೂಜಾರಿ ಮನೆ ಅವರನ್ನು ಸಂಸ್ಥೆಯ ವತಿಯಿಂದ ಸ್ವಾಗತಿಸುವ ಕಾರ್ಯಕ್ರಮ ನಡೆಯಿತು.

ಅಲಂಕೃತ ತೆರೆದ ವಾಹನದಲ್ಲಿ ಅರಂತೋಡು ಪೇಟೆಯ ಮೂಲಕ ಮೆರವಣಿಗೆ ಮಾಡಿ ಕ್ರೀಡಾಪಟುವನ್ನು ಬರಮಾಡಿಕೊಳ್ಳಲಾಯಿತು. ಶಿಕ್ಷಣ ಸಂಸ್ಥೆಯ ವತಿಯಿಂದ ಉಪಾಧ್ಯಕ್ಷ ಜತ್ತಪ್ಪ ಮಾಸ್ಟರ್ ಅಳಿಕೆ ಮತ್ತು ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ಅಧ್ಯಕ್ಷ ಕೇಶವ ಆಡ್ತಲೆ ಚಿಂತನಾ ಅವರನ್ನು ಗೌರವಿಸಿದರು.
ವಿಶ್ರಾಂತ ಪ್ರಾಂಶುಪಾಲರಾದ ಕೆ.ಆರ್ ಗಂಗಾಧರ್ ರಾಷ್ಟ್ರೀಯ ಕ್ರೀಡಾಪಟುವಿನ ಸಾಧನೆಯನ್ನು ಸ್ಮರಿಸಿ, ಶುಭಹಾರೈಸಿದರು.ಇದೇ ಸಂದರ್ಭದಲ್ಲಿ ಪ್ರೌಢ ಶಾಲೆ ವಿಭಾಗದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಾಧನೆ ಮಾಡಿದ ಚರಿಶ್ಮಾ ಮತ್ತು ಶ್ರವಣ್ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಎ.ಸಿ.ವಸಂತ, ಕಾರ್ಯದರ್ಶಿ ಅಬ್ದುಲ್ಲ ಎ, ನಿರ್ದೇಶಕ ಅಶ್ರಫ್ ಗುಂಡಿ, ಕುಸುಮಧರ ಅಡ್ಕಬಳೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಕುರುಂಜಿ, ಕ್ರೀಡಾಪಟುವಿನ ಪೋಷಕರು, ಸಂಸ್ಥೆಯ ಪ್ರಾಂಶುಪಾಲ ಸುರೇಶ್ ವಾಗ್ಲೆ, ಮುಖ್ಯಗುರು ಸೋಮಶೇಖರ , ದೈಹಿಕ ಶಿಕ್ಷಕ ಜಯರಾಮ್ ಉಪಸ್ಥಿತರಿದ್ದರು.
ಕಿಶೋರ್ ಕುಮಾರ್ ಕಿರ್ಲಾಯ ಕಾರ್ಯಕ್ರಮ ನಿರೂಪಿಸಿದರು.