ಎಡಮಂಗಲದ ಕಲ್ಲೆಂಬಿಯಲ್ಲಿ ಗುಹೆ ಮತ್ತು ಅದರೊಳಗಡೆ ಪ್ರಾಚೀನ ಪರಿಕರ ಪತ್ತೆ

0

ಎಡಮಂಗಲ ಗ್ರಾಮದ ಕಲ್ಲೆಂಬಿಯಲ್ಲಿ ಗುಡ್ಡದಲ್ಲಿ ಅಡಿಕೆ ಸಸಿ ನೆಡಲೆಂದು ಜೇಸಿಬಿಯಲ್ಲಿ ಗುಂಡಿ ಅಗೆಯುತ್ತಿದ್ದ ವೇಳೆ ಮಣ್ಣಿನಡಿಯಲ್ಲಿ ಗುಹೆಯೊಂದು ಪತ್ತೆಯಾಗಿದೆ. ಆ ಗುಹೆಯ ಒಳಗಡೆ ಪ್ರಾಚೀನ ಕಾಲದ ಮಣ್ಣಿನ ಮಡಕೆಗಳು ಕಂಡುಬಂದಿದ್ದು ಈ ಬಗ್ಗೆ ಪ್ರಾಚ್ಯವಸ್ತು ಸಂಶೋಧಕರು ಅಧ್ಯಯನ ಆರಂಭಿಸಿದ್ದಾರೆ.

ಎಡಮಂಗಲದ ಕಲ್ಲೆಂಬಿ ನಿವಾಸಿ ಬಳ್ಳಡ್ಕ ವಿಶ್ವನಾಥ ಗೌಡರು ತನ್ನ ಮನೆಯ ಪಕ್ಕದ ಗುಡ್ಡದಲ್ಲಿ ರಬ್ಬರ್ ಕೃಷಿ ಮಾಡಿದ್ದರು. ಇತ್ತೀಚೆಗೆ ಈ ರಬ್ಬರ್ ಕೃಷಿಯನ್ನು ತೆಗೆದು ಅಡಿಕೆ ಸಸಿ ನೆಡಲೆಂದು ಜೆಸಿಬಿ ತರಿಸಿ ಅಡಿಕೆ ಗುಂಡಿ ತೋಡುವ ಕೆಲಸ ಆರಂಭಿಸಿದ್ದರು. ಹೀಗೆ ಕೆಲಸ ಮಾಡುತ್ತಿದ್ದ ವೇಳೆ ಒಂದು ಕಡೆ ಮಣ್ಣು ಸಡಿಲವಾಗಿ ಒಳಗಡೆ ಗೋಳಾಕಾರದ ಗುಹೆಯೊಂದು ಕಂಡುಬಂತು. ಆ ಗುಹೆಯೊಳಗೆ ಬಗ್ಗಿ ನೋಡುವಾಗ ಸುಂದರವಾಗಿ ಕೆತ್ತಲ್ಪಟ್ಟ ಗೋಳಾಕಾರದ ಗುಹೆ, ಅದರೊಳಗಡೆ ಪ್ರಾಚೀನ ಕಾಲದ ಮಣ್ಣಿನ ಮಡಿಕೆಗಳು, ಬಟ್ಟಲು, ಮತ್ತಿತರ ಸಣ್ಣಪುಟ್ಟ ಪಾತ್ರೆಗಳು ಕಂಡು ಬಂದವು. ಕೆಂಪು ಕಲ್ಲಿನ ಗೋಡೆಯ ಆ ಗುಹೆಯ ನಡುವಲ್ಲಿ ಸುಮಾರು 1 ಅಡಿ ಅಗಲದ ಕೆಂಪು ಕಲ್ಲಿನ ಕಂಬ ಕೂಡ ಇರುವುದು ಕಂಡುಬಂತು.
ಈ ಗುಹೆ ಮತ್ತು ಪ್ರಾಚೀನ ಪರಿಕರಗಳು ಪತ್ತೆಯಾದ ಕೂಡಲೇ ವಿಶ್ವನಾಥ ಗೌಡರು ಸ್ಥಳೀಯ ಗ್ರಾಮ ಕರಣಿಕರನ್ನು ಸಂಪರ್ಕಿಸಿ ವಿಷಯ ತಿಳಿಸಿದರು. ಅವರು ಬಂದು ಮಹಜರು ಮಾಡಿದರಲ್ಲದೆ ತಹಶೀಲ್ದಾರ್ ರಿಗೆ ವಿಷಯ ತಿಳಿಸಿ, ಬಳಿಕ ಪ್ರಾಚ್ಯವಸ್ತು ಸಂಶೋಧಕರಿಗೆ ತಿಳಿಸಿದರು. ವಿಷಯ ತಿಳಿದ ಉಡುಪಿ ಜಿಲ್ಲೆಯ ಶಿರ್ವದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್, ಪ್ರಾಚ್ಯವಸ್ತು ಸಂಶೋಧಕ ಪ್ರೊ। ಟಿ. ಮುರುಗೇಶಿಯವರು ಸ್ಥಳಕ್ಕೆ ಆಗಮಿಸಿ ಪರಿಕರಗಳನ್ನು ಜೋಪಾನವಾಗಿ ಸಂಗ್ರಹಿಸಿ ಕೊಂಡೊಯ್ದಿದ್ದಾರೆ. ಇದರ ಬಗ್ಗೆ ಅಧ್ಯಯನ ಮಾಡಿ ಹದಿನೈದು ದಿನಗಳೊಳಗೆ ಇದರ ಮಾಹಿತಿ ನೀಡುವುದಾಗಿ ಅವರು ತಿಳಿಸಿದ್ದಾರೆ.

” ರಬ್ಬರು ತೋಟ ತೆಗೆದು ಅಡಿಕೆ ತೋಟ ಮಾಡುವ ಉದ್ದೇಶದಿಂದ ಸಸಿ ನೆಡಲು ಗುಂಡಿ ತೋಡುವ ಕೆಲಸ ಮಾಡುತ್ತಿದ್ದೆವು. ಆಗ ಈ ಗುಹೆ ಕಂಡುಬಂದಿದೆ. ಅದರೊಳಗೆ ಪ್ರಾಚೀನ ಪರಿಕರಗಳು ಇದ್ದುದನ್ನು ಕಂಡು ಗ್ರಾಮಕರಣಿಕರಿಗೆ ವಿಷಯ ತಿಳಿಸಿದಾಗ ಅವರು ಬಂದು ವಿಡಿಯೋ ಚಿತ್ರೀಕರಣ ಮಾಡಿ ಬಳಿಕ ಸಂಶೋಧಕರಿಗೆ ತಿಳಿಸಿದರು. ಪ್ರಾಚ್ಯವಸ್ತು ಸಂಶೋಧಕರು ಬಂದಾಗ ಅವರಿಗೆ ಅವುಗಳನ್ನು ಒಪ್ಪಿಸಿದ್ದೇವೆ. ತೂಕದ ಬೃಹದಾಕಾರದ ರಚನೆಯೇ ವಿಚಿತ್ರವಾಗಿದೆ. ಒಳಗೆ ಸೂಕ್ಷ್ಮವಾಗಿ ಅವಲೋಕಿಸುವಾಗ ಗೋಳಾಕಾರದ ಗುಹೆಯ ಮಧ್ಯೆ ಕಲ್ಲಿನ ಗೋಡೆ ರಚಿಸಲಾಗಿದೆ. ಈ ಸ್ಥಳದ ಸುತ್ತಮುತ್ತ ಐತಿಹಾಸಿಕ ಸ್ಥಳಗಳಿದ್ದು ಅದಕ್ಕೂ ಇದಕ್ಕೂ ಏನಾದರೂ ಸಂಬಂಧವಿರಬಹುದೇ ಎಂಬುದರ ಬಗ್ಗೆ ಅಧ್ಯಯನದ ಮೂಲಕ ತಿಳಿಯಬೇಕಾಗಿದೆ ” ಎಂದು ಜಾಗದ ಮಾಲಕರಾದ ಬಿ ವಿಶ್ವನಾಥ ಗೌಡ ಕಲ್ಲೆಂಬಿ ಅಭಿಪ್ರಾಯ ಪಟ್ಟಿದ್ದಾರೆ.

LEAVE A REPLY

Please enter your comment!
Please enter your name here