ತಂಟೆಪ್ಪಾಡಿ ಶಂಭಟ್ಟರ ನೆನಪಿನ ಗ್ರಂಥ ಬಿಡುಗಡೆ

0

 

 

ಖ್ಯಾತ ಯಕ್ಷಗಾನ ಮದ್ದಳೆ ಕಲಾವಿದರಾದ ತಂಟೆಪ್ಪಾಡಿ ಶಂಭಟರ ನೆನಪಿನ ಗ್ರಂಥ ಬಿಡುಗಡೆ ಸಮಾರಂಭ ಆ. 31ರಂದು ತಂಟೆಪ್ಪಾಡಿ ಮನೆಯಲ್ಲಿ ಜರುಗಿತು. ನೆನಪಿನ ಗ್ರಂಥವನ್ನು ಹಿರಿಯ ಸಾಹಿತಿ ಮತ್ತು ಖ್ಯಾತ ಕವಿಗಳಾದ ಸುಬ್ರಾಯ ಚೊಕ್ಕಾಡಿ ಲೋಕಾರ್ಪಣೆಗೊಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಹವ್ಯಕ ವಿಭಾಗದ ಗುರಿಕಾರ ಮುಂಡುಗಾರು ಸುಬ್ರಹ್ಮಣ್ಯ ವಹಿಸಿದ್ದರು. ಕೃತಿಯ ಸಂಪಾದಕರಾದ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ರಾಮಕೃಷ್ಣ ಭಟ್ ಚೂಂತಾರು ಪ್ರಾಸ್ತಾವಿಕವಾಗಿ
ಮಾತನಾಡಿದರು. ಪುಸ್ತಕದ ತಯಾರಿ ಔಚಿತ್ಯ ಮತ್ತು ಸಿದ್ಧತೆಗಳ ಬಗ್ಗೆ ತಂಟೆಪ್ಪಾಡಿ ಶಿವರಾಮ ಭಟ್ ತಿಳಿಸಿದರು. ಶ್ಯಾಮ ಭಟ್ ತಂಟೆಪ್ಪಾಡಿ ಸ್ವಾಗತ ಭಾಷಣ ಮಾಡಿದರು. ಶ್ರೀಮತಿ ಶ್ರೀದೇವಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಪಿ. ಎಸ್ ಭಟ್ ಕಾಯರ ನಿರ್ವಹಿಸಿದರು. ಡಾ. ಮುರಲೀ ಮೋಹನ್ ಚೂಂತಾರುರವರ ಸಾರಥ್ಯದ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಮೂಲಕ ಈ ಪುಸ್ತಕ ಪ್ರಕಾಶನಗೊಂಡಿತು. ಸಮಾರಂಭದಲ್ಲಿ ಶಿವರಾಂ ಭಟ್ಟ ದಂಪತಿಗಳು ಮತ್ತು ಸೀತಾರಾಂ ಹುಟ್ಟು ದಂಪತಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ಸಮಯದಲ್ಲಿ ಮಾತನಾಡಿದ ಸುಬ್ರಾಯ ಚೊಕ್ಕಾಡಿಯವರು”ತಂಟೆಪ್ಪಾಡಿ ಶಂಭಟ್ಟರು ಎಲೆಮರೆಯ ಕಾಯಿಯಾಗಿ ಬಂದವರು. ಕುಶಲಕಲೆಗಳಲ್ಲಿಯೂ ಪ್ರಾವಿಣ್ಯತೆ ಪಡೆದು ಸಕಲಕಲಾವಲ್ಲಭರಾಗಿದ್ದರು. ನನ್ನ ತಂದೆ ಅಜ್ಜನಗದ್ದೆ ಗಣಪ್ಪಯ್ಯ ಭಾಗವತರಿಗೆ ಮದ್ದಳೆಯಲ್ಲಿ ಸಾಥಿಯಾಗಿದ್ದರು. ತಂಟೆಪ್ಪಾಡಿ ಶಂಭಟ್ಟರು ಅಸ್ತಿತ್ವವನ್ನು ಹೊಂದಿರುವ ಚೂಂತಾರು-ಕಾಯರ-ತಂಟೆಪ್ಪಾಡಿ ಮನೆತನವು ಗತ-ಇತಿಹಾಸವನ್ನು ಹೊಂದಿದೆ. ಆಧುನಿಕತೆಯತ್ತ ಹೊರಳುತ್ತಿರುವ ಈ ಜಗತ್ತಿನಲ್ಲಿ ಕುಶಲ ಕಲೆಗಳಲ್ಲಿ ವಿರಳತೆಯನ್ನು ಕಾಣದೆ ಹಿರಿಯರ ಮಹತ್ವವನ್ನರಿತು ತಾವೂ ಪರಂಪರಾಗತ ಚಟುವಟಿಕೆಗಳ ಒಂದಂಶವನ್ನಾದರೂ ಪಾಲಿಸಿಕೊಂಡು ಬರಬೇಕು”ಎಂದು ಹೇಳಿದರು.