ನಾರ್ಣಕಜೆಯಲ್ಲಿ ಸಂಭ್ರಮದ ಗಣೇಶೋತ್ಸವ

0

 

ಧಾರ್ಮಿಕ ಸಭೆ, ವೈಭವದ ಶೋಭಾಯಾತ್ರೆ

ನೆಲ್ಲೂರು ಕೆಮ್ರಾಜೆ ಯುವಕ ಮಂಡಲ ನಾರ್ಣಕಜೆ ಇದರ ಆಶ್ರಯದಲ್ಲಿ 43 ನೇ ವರ್ಷದ ಶ್ರೀ ಗಣೇಶೋತ್ಸವವು ಆ. 31 ರಂದು ನಾರ್ಣಕಜೆ ಹಿ.ಪ್ರಾ.ಶಾಲಾ ವಠಾರದಲ್ಲಿ ಸಂಭ್ರಮದಿಂದ ನಡೆಯಿತು.

 

ಬೆಳಿಗ್ಗೆ ಗಣಪತಿ ಹವನ, ಗಣಪತಿ ಪ್ರತಿಷ್ಠಾಪನೆ ನಡೆಯಿತು. ಬಳಿಕ ದುರ್ಗಾಶ್ರೀ ಭಜನಾ ಮಂಡಳಿ ನಾರ್ಣಕಜೆ ಮತ್ತು ನಾಗಶ್ರೀ ಭಜನಾ ಮಂಡಳಿ ದಾಸನಕಜೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆಗಳು ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಅಪರಾಹ್ನ ಬಂಗಾರದ ಕಲಾವಿದೆರ್ ಪುರುಷರಕಟ್ಟೆ ಇವರಿಂದ ತುಳು ಹಾಸ್ಯಮಯ ನಾಟಕ ” ನಾಡ್ಂಡಲಾ ತಿಕ್ಕಂದ್” ಪ್ರದರ್ಶನಗೊಂಡಿತು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಭಜರಂಗದಳದ ಮಾಜಿ ಜಿಲ್ಲಾ ಸಂಯೋಜಕ ದಿನೇಶ್ ಜೈನ್ ಪುತ್ತೂರು ಧಾರ್ಮಿಕ ಉಪನ್ಯಾಸ ನೀಡಿದರು. ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶೀಲಾವತಿ ಬೊಳ್ಳಾಜೆ, ಯುವಕ ಮಂಡಲದ ಅಧ್ಯಕ್ಷ ಕೌಶಿಕ್ ಸುಳ್ಳಿ ಉಪಸ್ಥಿತರಿದ್ದರು.

ಯುವಕ ಮಂಡಲದ ಕೋಶಾಧಿಕಾರಿ ಸಂತೋಷ್ ನಾರ್ಣಕಜೆ ಸ್ವಾಗತಿಸಿ, ಕಾರ್ಯದರ್ಶಿ ಯೋಗರಾಜ್ ವಂದಿಸಿದರು. ತೀರ್ಥೇಶ್ ಕಾರ್ಯಕ್ರಮ ನಿರೂಪಿಸಿದರು.

ಸಚಿವ ಎಸ್.ಅಂಗಾರ ಗಣೇಶೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಚಿವರನ್ನು ಸನ್ಮಾನಿಸಲಾಯಿತು. ಮಾಧವ ಸುಳ್ಳಿಯವರನ್ನೂ ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮದ ಬಳಿಕ ಪಿರಮಿಡ್ಡ್ ಮೊಸರು ಕುಡಿಕೆ ನಡೆಯಿತು. ನಂತರ ವೈಭವದ ಶೋಭಾಯಾತ್ರೆ ನಡೆದು, ತಳೂರು ಸರ್ಕಲ್‌ನವರೆಗೆ ಸಾಗಿ ವಾಪಾಸ್ ಬಂದು ಗಣಪತಿ ವಿಗ್ರಹವನ್ನು ಜಲಸ್ತಂಭನಗೊಳಿಸಲಾಯಿತು.

ಕೊಲೆ ಆರೋಪಿ ಮನೆಗೆ ಕಲ್ಲೆಸೆತ ಘಟನೆ :

ಗಣೇಶೋತ್ಸವದ ಶೋಭಾಯಾತ್ರೆಯ ವೇಳೆ ಸೇರಿಕೊಂಡ ಕೆಲವರು ಪ್ರವೀಣ್ ನೆಟ್ಟಾರು ಕೊಲೆ ಆರೋಪಿಯೊಬ್ಬನ ಮನೆಗೆ ಕಲ್ಲೆಸೆದ ಹಾಗೂ ಸಂಘಟಕರು ಪರಿಸ್ಥಿತಿಯನ್ನು ನಿಯಂತ್ರಿಸಿದ ಘಟನೆ ನಡೆಯಿತು.
ರಾತ್ರಿ ಶೋಭಾಯಾತ್ರೆ , ನಾರ್ಣಕಜೆಯಿಂದ ಆರಂಭಗೊಂಡು ಎಲಿಮಲೆ ದಾರಿಯಾಗಿ ತೆರಳಿ ತಳೂರಿನಲ್ಲಿ ನೂತನವಾಗಿ ನಿರ್ಮಿಸಲಾದ ಧ್ವಜಕಟ್ಟೆಯ ಬಳಿ ಸಾಗುತ್ತಿದ್ದಂತೆ ಎಲಿಮಲೆಯಲ್ಲಿ ಶೋಭಾಯಾತ್ರೆ ಮಧ್ಯೆ ಸೇರಿಕೊಂಡಿದ್ದ ಕೆಲವರು ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಬಶೀರ್ ಎಂಬಾತನ ಮನೆಯತ್ತ ಕಲ್ಲೆಸೆದರೆನ್ನಲಾಗಿದೆ. ಇದು ಅರಿವಿಗೆ ಬಂದ ಕೂಡಲೇ ಸಂಘಟಕರು ಮಧ್ಯಪ್ರವೇಶಿಸಿ ಈ ಪ್ರಯತ್ನಗಳನ್ನು ತಡೆದರು. ಈ ಘಟನೆಯ ಹಿನ್ನಲೆಯಲ್ಲಿ ಶೋಭಾಯಾತ್ರೆಯು ಸ್ವಲ್ಪ ಹೊತ್ತು ಅಲ್ಲೇ ನಿಲ್ಲುವಂತಾಯಿತು. ಬಿಗು ಪರಿಸ್ಥಿತಿ ಶಮನಗೊಂಡ ಬಳಿಕ ವಾಪಾಸ್ ಬಂದು ಗಣಪತಿ ಮೂರ್ತಿಯ ಜಲಸ್ತಂಭನ ನಡೆಯಿತು.