ಗ್ರಾ.ಪಂ. ಅಧ್ಯಕ್ಷರ ಅಧಿಕಾರ ಮೊಟಕು : 50 ಶೇ. ಕಮಿಷನ್ ಕಸಿಯಲು ಸರಕಾರ ಸಂಚು : ಎಂ.ವಿ.ಜಿ. ಆರೋಪ ಆದೇಶ ವಾಪಸ್ಸು ಪಡೆಯಲು ಒತ್ತಾಯ : ಪ್ರಜಾಪ್ರತಿನಿಧಿ ಹೆಸರಿನಲ್ಲಿ ಹೋರಾಟಕ್ಕೆ ನಿರ್ಧಾರ

0

 

ರಾಜ್ಯ ಬಿಜೆಪಿ ಸರಕಾರ ಗ್ರಾಮ ಪಂಚಾಯತ್ ಅಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸಿ, ಗ್ರಾ.ಪಂ. ಪಿ.ಡಿ.ಒ. ಹಾಗೂ ಕಾರ್ಯದರ್ಶಿಗಳಿಗೆ ಸಹಿ ಸೇರಿದಂತೆ ಇನ್ನಿತರ ಅಧಿಕಾರ ನೀಡಿರುವ ಕ್ರಮ ಸರಿಯಲ್ಲ. ಇದುವರೆಗೆ ೪೦ ಪರ್ಸೆಂಟ್ ಆಗಿದ್ದ ಸರಕಾರ ಅಧಿಕಾರಿಗಳಿಗೆ ಹೆಚ್ಚುವರಿ ಜವಾಬ್ದಾರಿ ನೀಡಿ ೫೦ ಪರ್ಸೆಂಟ್ ಕಮಿಷನ್ ಕಸಿಯಲು ಸಂಚು ರೂಪಿಸಿದಂತೆ ನಮಗೆ ಭಾಸವಾಗುತ್ತಿದೆ ಎಂದು ನ.ಪಂ. ಸದಸ್ಯ, ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.
ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, “ಜನರಿಗೆ ಸ್ಥಳೀಯವಾಗಿ ಸಿಗುವುದು ಗ್ರಾಪಂ. ಸದಸ್ಯರು ಹಾಗೂ ಅಧ್ಯಕ್ಷರು. ಸಮಸ್ಯೆಗಳನ್ನು ಹೇಳಿಕೊಳ್ಳುವುದು ಕೂಡಾ ನಮ್ಮ ಬಳಿಯೇ. ಈಗ ಅಧ್ಯಕ್ಷರಿಗಿದ್ದ ಜವಾಬ್ದಾರಿಯನ್ನು ಪಿಡಿಒಗಳಿಗೆ ನೀಡಿದ ಸರಕಾರದ ಕ್ರಮ ಸರಿಯಲ್ಲ. ಇದರಿಂದ ಜನರಿಗೆ ತೊಂದರೆ. ಸರಕಾರ ಇದುವರೆಗೆ ೪೦ ಶೇ. ಎಂದು ಕರೆಸಿಕೊಳ್ಳುತ್ತಿತ್ತು. ಈಗ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಿ ಹೆಚ್ಚುವರಿ ೧೦ ಶೇ. ಕಮಿಷನ್ ಕಸಿದುಕೊಂಡು ೫೦ ಪರ್ಸೆಂಟ್ ಸರಕಾರ ಎನಿಸಿಕೊಂಡಿದೆ. ಪಂಚಾಯತ್ ಸದಸ್ಯರಿಗೆ ಗೌರವಧನ ಹೆಚ್ಚಿಸಿದ್ದು, ಗ್ರಾಮ ವಿಕಾಸ ಯೋಜನೆಯ ಮೂಲಕ ಅನುದಾನ ನೀಡಿದ್ದು ಕಾಂಗ್ರೆಸ್ ಸರಕಾರ. ಈಗಿನ ಬಿಜೆಪಿ ಸರಕಾರ ಅಧಿಕಾರ ಮೊಟಕುಗೊಳಿಸಿದ್ದು ಹೊರತು ಏನೂ ಸೌಲಭ್ಯ ಗ್ರಾಮಗಳಿಗೆ ನೀಡಿಲ್ಲ ಎಂದ ಅವರು, ನಮ್ಮ ಕ್ಷೇತ್ರದ ಶಾಸಕರು ಸಚಿವರಿದ್ದಾರೆ. ಅವರು ಪ್ರತೀ ಗ್ರಾಮಕ್ಕೆ ತಲಾ ೧ ಕೋಟಿ ರೂ ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.

ಪೆರುವಾಜೆ ಗ್ರಾ.ಪಂ. ಸದಸ್ಯ ಸಚಿನ್ ರಾಜ್ ಶೆಟ್ಟಿ ಮಾತನಾಡಿ, “ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸಿದ ಸರಕಾರದ ಕ್ರಮ ಸರಿಯಲ್ಲ. ಇದರ ವಿರುದ್ಧ ನಮ್ಮ ಪ್ರತಿಭಟನೆಯಿದೆ. ಅ.೧೨ರಂದು ಸುಳ್ಯ ತಾಲೂಕಿನ ಪಂಚಾಯತ್ ಸದಸ್ಯರ ಸಭೆಯನ್ನು ಪಕ್ಷಭೇದ ಮರೆತು ಪ್ರಜಾಪ್ರತಿನಿಧಿ ಎಂಬ ಹೆಸರಿನಲ್ಲಿ ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ನಡೆಸಲಾಗುವುದು. ಅಲ್ಲಿ ಹೋರಾಟದ ರೂಪುರೇಶೆ ಸಿದ್ಧಗೊಳಿಸಲಾಗುವುದು ಎಂದು ಅವರು ಹೇಳಿದರು.

“ಗ್ರಾ.ಪಂ. ಗೆ ೧೫ನೇ ಹಣಕಾಸು ಯೋಜನೆ ಹೊರತು ಪಡಿಸಿ ಬೇರೆ ಯಾವ ಮೂಲದಿಂದಲೂ ಸರಕಾರ ಅನುದಾನ ನೀಡುವುದಿಲ್ಲ. ಅದರಲ್ಲಿಯೂ ಕಡಿತಗೊಳಿಸಲಾಗುತ್ತಿದೆ. ಹಾಗೂ ಆ ಅನುದಾನಕ್ಕೆ ಸೋಲಾರ್, ಪಂಚಾಯತ್‌ಗೆ ವಾಹನ ಖರೀದಿ ಹೀಗೆ ಯೋಜನೆಯೂ ಮೇಲ್ಮಟ್ಟದಲ್ಲೆ ಸಿದ್ಧಗೊಳ್ಳುತ್ತದೆ. ಇದೆಲ್ಲವೂ ಕಮಿಷನ್ ತಿನ್ನುವ ದಂದೆ. ನಮ್ಮ ಪಂಚಾಯತ್‌ಗೆ ಸೋಲಾರ್ ಅಳವಡಿಸಲಾಗಿದ್ದು ಅದಕ್ಕೆ ೪ ಲಕ್ಷದ ೮೦ ಸಾವಿರ ಆಗಿದ್ದು ಸರಕಾರದ ಕಡೆಯಿಂದಲೇ ಯೋಜನೆ ಮಾಡಲಾಗಿದೆ. ಅದೇ ಮಾದರಿಯ ಸೋಲಾರ್‌ಗೆ ಇಲ್ಲಿ ವಿಚಾರಿಸಿದಾಗ ಸುಮಾರು ೨ ಲಕ್ಷ ರೂ ವೆಚ್ಚದಲ್ಲಿ ಆಗಬಹುದೆಂದು ಹೇಳುತ್ತಿದ್ದಾರೆ. ಹೀಗಾದರೆ ಎಷ್ಟರ ಮಟ್ಟಿಗೆ ಲೂಟಿ ನಡೆಯುತ್ತಿದೆ ಎಂದು ಪೆರುವಾಜೆ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಹೇಳಿದರು.
ಜೆಜೆಎಂ ನಲ್ಲಿ ಮಾಡುವ ಕೆಲಸ ಪಂಚಾಯತ್ ಗಮನಕ್ಕೆ ಬರುವುದಿಲ್ಲ. ನಮಗೆ ತಿಳಿಸದೇ ಅವೈಜ್ಞಾನಿಕ ರೀತಿಯಲ್ಲಿ ಕೆಲಸಗಳು ನಡೆಯುತ್ತಿದೆ ಎಂದು ಉಬರಡ್ಕ ಗ್ರಾ.ಪಂ. ಅಧ್ಯಕ್ಷೆ ಚಿತ್ರಕುಮಾರಿ ಹೇಳಿದರು.
“ಅಧ್ಯಕ್ಷರ ಅಧಿಕಾರವನ್ನು ಹೀಗೆ ಮೊಟಕು ಗೊಳಿಸಿದರೆ ಮುಂದೆ ಪಂಚಾಯತ್ ಚುನಾವಣೆಯ ಅಗತ್ಯವೇ ಇರಲಿಕ್ಕಿಲ್ಲ. ಎಲ್ಲವನ್ನೂ ಅಧಿಕಾರಿಗಳೇ ಮಾಡಿಯಾರು. ಜೆಜೆಎಂ ಯೋಜನೆಯಲ್ಲಿ ನೀರಿನ ಮೂಲ ಮೊದಲು ಹುಡುಕಬೇಕು. ಆದರೆ ಇಲ್ಲಿ ಟ್ಯಾಂಕ್ ಮೊದಲು ಮಾಡಿ ಕಾಮಗಾರಿ ವ್ಯರ್ಥವಾಗುವಂತೆ ಮಾಡುತ್ತಿದ್ದಾರೆ ಎಂದು ಕಲ್ಮಡ್ಕ ಗ್ರಾ.ಪಂ. ಅಧ್ಯಕ್ಷೆ ಹಾಜಿರಾ ಗಪೂರ್ ತಿಳಿಸಿದರು.
`’ಭ್ರಷ್ಟಾಚಾರ ತಡೆಗಟ್ಟಲು ಅಧಿಕಾರಿಗಳಿಗೆ ಜವಾಭ್ದಾರಿ ನೀಡಲಾಗುತ್ತಿದೆ ಎಂದು ಸರಕಾರ ಸಮಜಾಯಿಸಿ ನೀಡುತ್ತಿದೆ. ಇದರಿಂದ ಭ್ರಷ್ಟಾಚಾರ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಜನಪ್ರತಿನಿಧಿಗಳಿಗೆ ಅಧಿಕಾರ ಇರಬೇಕು ಎಂದು ಅಜ್ಜಾವರ ಗ್ರಾ.ಪಂ. ಉಪಾಧ್ಯಕ್ಷೆ ಲೀಲಾ ಮನಮೋಹನ ಮುಡೂರು ತಿಳಿಸಿದರು.
ಉಬರಡ್ಕ ಗ್ರಾ.ಪಂ. ಸದಸ್ಯ ಅನಿಲ್ ಬಳ್ಳಡ್ಕ, ಬೆಳ್ಳಾರೆ ಗ್ರಾ.ಪಂ. ಸದಸ್ಯ ಮಣಿಕಂಠ, ಎನ್.ಎಸ್.ಡಿ. ವಿಠಲದಾಸ್, ಜಯಪ್ರಕಾಶ್ ನೆಕ್ರೆಪ್ಪಾಡಿ ಐವರ್ನಾಡು, ಆಲೆಟ್ಟಿ ಗ್ರಾ.ಪಂ. ಸದಸ್ಯ ಸತ್ಯಕುಮಾರ್ ಆಡಿಂಜ, ಭವಾನಿಶಂಕರ್ ಕಲ್ಮಡ್ಕ ಇದ್ದರು.