ಉಬರಡ್ಕ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಭಾಗವಹಿಸದ ಸದಸ್ಯರು

0

 

ಸಭೆ ಮುಂದೂಡಿಕೆ : ಸದಸ್ಯ ಅನಿಲ್ ವಿರುದ್ಧ ಖಂಡನಾ ನಿರ್ಣಯಕ್ಕೆ ನಿರ್ಧಾರ

ಗ್ರಾಮ ಪಂಚಾಯತ್‌ನಲ್ಲಿ ಅವ್ಯವಹಾರ ನಡೆದಿದೆ, ಕ್ರಿಯಾ ಯೋಜನೆ ಬದಲಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟದಟು ಪಂಚಾಯತ್ ಕುರಿತು ತಪ್ಪು ಸಮದೇಶ ಬರುವಂತೆ ಮಾಡಿದ ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಬಳ್ಳಡ್ಕ ತಪ್ಪೊಪ್ಪಿಕೊಳ್ಳುವ ತನಕ ಪಂಚಾಯತ್ ಸಾಮಾನ್ಯ ಸಭೆಗೆ ಭಾಗವಹಿಸದಿರಲು ನಿರ್ಧರಿಸಿರುವ ಉಬರಡ್ಕ ಗ್ರಾಮ ಪಂಚಾಯತ್ ಸದಸ್ಯರು ಅ.೧೮ರಂದು ನಿಗಧಿಯಾಗಿದ್ದ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಭಾಗವಹಿಸದಿರುವುದರಿಂದ ಸಭೆ ಮುಂದೂಡಲಾಗಿರುವುದಾಗಿ ತಿಳಿದು ಬಂದಿದೆ.
ಅ.೧೮ರಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಚಿತ್ರಕುಮಾರಿ, ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ, ಸದಸ್ಯರುಗಳಾದ ಅನಿಲ್ ಬಳ್ಳಡ್ಕ, ಪೂರ್ಣಿಮಾ ಸೂಂತೋಡು, ಮಮತಾ ಕುದ್ಪಾಜೆ, ವಸಂತಿ ಕಲ್ಚಾರು, ಭವಾನಿ ಮೂರ್ಜೆ ಬಂದಿದ್ದರು. ಸಾಮಾನ್ಯ ಸಭೆ ನಡೆಯುವ ಕೊಠಡಿಗೆ ಪಂಚಾಯತ್ ಅಧ್ಯಕ್ಷೆ ಚಿತ್ರಕುಮಾರಿ ಹಾಗೂ ಸದಸ್ಯ ಅನಿಲ್ ಬಳ್ಳಡ್ಕ ಹಾಗೂ ಪಿಡಿಒ ವಿದ್ಯಾಧರ್ ಹೋಗಿ ಕೆಲ ಹೊತ್ತು ಉಳಿದ ಸದಸ್ಯರಿಗೆ ಕಾದರಾದರೂ ಉಪಾಧ್ಯಕ್ಷ ಸಹಿತ ಉಳಿದ ಸದಸ್ಯರು ಪಂಚಾಯತ್‌ನ ಹಾಲ್ ನಲ್ಲಿ ಕುಳಿತಿದ್ದರು.
ಬಳಿಕ ಪಿಡಿಒ ವಿದ್ಯಾಧರ್ ಹಾಗೂ ಅಧ್ಯಕ್ಷೆ ಚಿತ್ರಕುಮಾರಿಯವರು ಸಾಮಾನ್ಯ ಸಭೆ ನಡೆಯುವ ಕೊಠಡಿಯಿಂದ ಹೊರಗೆ ಬಂದು ಹಾಲ್‌ನಲ್ಲಿದ್ದ ಸದಸ್ಯರನ್ನು ಸಭೆಗೆ ಬರುವಂತೆ ಕೇಳಿಕೊಂಡರು. ಆಗ ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲರು ಕಳೆದ ತಿಂಗಳು ತುರ್ತು ಸಭೆ ನಡೆದು ಆದ ನಿರ್ಧಾರದಂತೆ ಪಂಚಾಯತ್‌ಲ್ಲಿ ಅವ್ಯವಹಾರವಾಗಿದೆ ಮತ್ತು ಕ್ರಿಯಾ ಯೋಜನೆ ಬದಲಾಯಿಸಿರುವ ಕುರಿತು ಸದಸ್ಯ ಅನಿಲ್ ಬಳ್ಳಡ್ಕರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಸಂದೇಶಕ್ಕೆ ತಪ್ಪೊಪ್ಪಿಕೊಂಡು ಅವರ ಹೇಳಿಕೆಯನ್ನು ಮತ್ತೆ ಸಾಮಾಜಿಕ ಜಾಲತಾಣಕ್ಕೆ ಹಾಕಬೇಕೆಂದು ಎಲ್ಲ ಸದಸ್ಯರಿದ್ದು ನಿರ್ಣಯವಾಗಿತ್ತು. ಆದರೆ ಇದುವರೆಗೆ ಅವರು ಸಭೆಯ ನಿರ್ಣಯದಂತೆ ನಡೆದುಕೊಂಡಿಲ್ಲ” ಎಂದು ಹೇಳಿದರು. ಆಗ ಅಧ್ಯಕ್ಷೆ ಚಿತ್ರಕುಮಾರಿಯವರು, “ಪಿಡಿಒ ರವರು ಪಂಚಾಯತ್ ಸದಸ್ಯರ ಗಮನಕ್ಕೆ ಬಾರದೆ ಕ್ರಿಯಾ ಯೋಜನೆ ಬದಲಿಸಿರುವುದರಿಂದ ಇಷ್ಟೆಲ್ಲ ಗೊಂದಲ ಆಗಿದೆ. ಅದನ್ನು ಅವರೇ ಸರಿ ಪಡಿಸುತ್ತಾರೆ” ಎಂದು ಹೇಳಿದರೆಂದು, “ಪಂಚಾಯತ್‌ನಲ್ಲಿ ಅವ್ಯವಹಾರವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಡಿ ಪಂಚಾಯತ್‌ನ ಮೇಲೆ ತಪ್ಪು ಸಂದೇಶ ಬರುವಂತೆ ಅನಿಲ್ ಮಾಡಿದ್ದಾರೆ. ಮುಂದಿನ ಸಾಮಾನ್ಯ ಸಭೆಯ ಒಳಗೆ ಅವರು ಈ ಹಿಂದಿನ ಸಭೆಯ ನಿರ್ಣಯದಂತೆ ಮಾಡದಿದ್ದರೆ ನಾವೆಲ್ಲರು ಅವರ ವಿರುದ್ಧ ಖಂಡನಾ ನಿರ್ಣಯ ಮಾಡುತ್ತೇವೆ. ಗ್ರಾಮದ ಅಭಿವೃದ್ಧಿಯ ನಿಟ್ಟಿನಲ್ಲಿ ನಾವು ಮುಂದಿನ ಸಭೆಯಲ್ಲಿ ಭಾಗವಹಿಸುತ್ತೇವೆ” ಎಂದು ಪ್ರಶಾಂತರು ಹೇಳಿದರೆನ್ನಲಾಗಿದೆ. “ಇಲ್ಲಿ ಅವ್ಯವಹಾರಗಳು ನಡೆದಿಲ್ಲ ಎನ್ನುವುದು ಗೊತ್ತಿದೆ. ಕಿಯಾಯೋಜನೆ ಬದಲಾಯಿಸಿದ ವಿಚಾರ ಸ್ವಚ್ಛತಾಗಾರರ ವೇತನ ಪಾವತಿಗಾಗಿ ಕಾದಿರಿಸಿರುವುದು ಅನಿವಾರ್ಯವಾದ ಕಾರಣ ಸದಸ್ಯರ ಗಮನಕ್ಕೆ ತಾರದ ರೂ.೫೦೦೦೦/= ಹೊಂದಾಣಿಕೆ ಮಾಡಿರುವುದು ಗೊಂದಲಕ್ಕೆ ಕಾರಣವಾದ ವಿಚಾರವಾಗಿರುತ್ತದೆ. ಅದನ್ನು ಸರಿಪಡಿಸೋಣ” ಎಂದು ಅಧ್ಯಕ್ಷರು ಹೇಳಿದರೆಂದು ತಿಳಿದು ಬಂದಿದೆ.