ವಿಟ್ಲ: ಮೂರ್ಜೆ (ಮೂರ್ಕಜೆ) ನಂದರವಂಶ ಒಕ್ಕಲಿಗ ಗೌಡ ತರವಾಡು ಟ್ರಸ್ಟ್ ವತಿಯಿಂದ ಗುರುವಂದನಾ – ಕುಟುಂಬ ಸಮ್ಮಿಲನ ಕಾರ್ಯಕ್ರಮ

0

 

 

ಕುಟುಂಬ ಸಮ್ಮಿಲನಗಳು ಮನುಷ್ಯನ ಮನಸ್ಸನ್ನು ಒಂದುಗೂಡಿಸುವ ಕೆಲಸಗಳನ್ನು ಮಾಡುತ್ತದೆ: ಡಾ. ನಿರ್ಮಲಾನಂದನಾಥ ಸ್ವಾಮೀಜಿ

ಭಾರತೀಯ ತತ್ವಶಾಸ್ತ್ರದಲ್ಲಿ ಹಿಂದೂ ಧರ್ಮದ ಧಾರ್ಮಿಕ ನಂಬಿಕೆಗೆ ವಿಶಿಷ್ಟ ಸ್ಥಾನವಿದೆ: ಧರ್ಮಪಾಲನಾಥ ಸ್ವಾಮೀಜಿ

ಹತ್ತು ಕುಟುಂಬ ಹದಿನೆಂಟು ಗೋತ್ರದಲ್ಲಿ ನಂದರವಂಶವೂ ಒಂದು : ಮಠಂದೂರು

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಶ್ರದ್ಧೆ , ಶ್ರಮ ಇರಬೇಕು. ಆಗ ಜ್ಞಾನದ ಉಗಮವಾಗುತ್ತದೆ. ನಮ್ಮ ಹಿರಿಯರು ಹಾಕಿಕೊಟ್ಟ ಪರಂಪರೆಗಳನ್ನು ಉಳಿಸಿಕೊಂಡು ಹೋಗುವ ಕೆಲಸವನ್ನು ಇಂದಿನ ಯುವ ಸಮುದಾಯ ಮಾಡಬೇಕಾಗಿದೆ. ಕುಟುಂಬ ಸಮ್ಮಿಲನಗಳು ಮನುಷ್ಯನ ಮನಸ್ಸನ್ನು ಒಂದುಗೂಡಿಸುವ ಕೆಲಸವನ್ನು ಮಾಡುತ್ತದೆ. ಆಗ ಕುಟುಂಬ ಸಮ್ಮಿಲನದಂತಹ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗುತ್ತದೆ. ಈ ಮೂಲಕ ಕುಟುಂಬ ಸಮ್ಮಿಲನ ಮಾತ್ರವಲ್ಲ ಮನುಷ್ಯನ ಹೃದಯ ಸಮ್ಮಿಲನವಾಗುತ್ತದೆ ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಭಾರತಿ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.

 

ಅವರು ಅ.22ರಂದು ವಿಟ್ಲದ ಅಕ್ಷಯ ಸಭಾಭವನದಲ್ಲಿ ಜರುಗಿದ ಬಂಟ್ವಾಳ ತಾಲೂಕಿನ ವಿಟ್ಲಪಡ್ನೂರು ಗ್ರಾಮದ ಕೊಡಂಗಾಯಿ ಮೂರ್ಜೆ (ಮೂರ್ಕಜೆ) ನಂದರವಂಶ ಒಕ್ಕಲಿಗ ಗೌಡ ತರವಾಡು ಟ್ರಸ್ಟ್ ವತಿಯಿಂದ ನಡೆದ ಗುರುವಂದನಾ – ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ, ವೇದಿಕೆಯಲ್ಲಿದ್ದ ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಾತನಾಡಿದರು.

ಶ್ರದ್ಧೆಯಿಂದ ಕೆಲಸ ಮಾಡಿದಾಗ ಫಲ ತಾನಾಗಿಯೇ ಸಿಗುತ್ತದೆ. ಮೂರ್ಜೆ ಕುಟುಂಬ ಈ ಕೆಲಸವನ್ನು ಮಾಡಿದೆ. ಹಾಗಾಗಿ ದೈವ ದೇವರುಗಳ ಅನುಗ್ರಹ ಈ ಕುಟುಂಬದ ಮೇಲೆ ಸದಾ ಇರಲಿದೆ ಎಂದು ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಆದಿಚುಂಚನಗಿರಿ ಕಾವೂರು ಶಾಖಾ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಮಾತನಾಡಿ ‘ವ್ಯಕ್ತಿಯನ್ನು ಸುಸಂಸ್ಕೃತಗೊಳಿಸುವ ದಾರಿಯೇ ಮಾನವಧರ್ಮ. ‘ನಮ್ಮಲ್ಲಿರುವ ಆತ್ಮವಿಶ್ವಾಸ ಕಳೆದುಕೊಳ್ಳುವ ನಿಟ್ಟಿನಲ್ಲಿ ಜೀವನ ಸಾಗಿಸದೇ ಸ್ವಾಭಿಮಾನದಲ್ಲಿ ಬದುಕುವ ನಿಟ್ಟಿನಲ್ಲಿ ಸಮುದಾಯದ ಪ್ರತಿಯೊಬ್ಬರು ಮುಂದೆ ಸಾಗಬೇಕು. ಭಾರತೀಯ ತತ್ವಶಾಸ್ತ್ರದಲ್ಲಿ ಹಿಂದೂ ಧರ್ಮದ ಧಾರ್ಮಿಕ ನಂಬಿಕೆ, ದೈವ, ದೇವರು, ಸಂಪ್ರದಾಯಗಳು ಉಳಿದಿದೆ ಎಂದರೆ ನಮ್ಮ ಪೂರ್ವಿಕರು ಹಾಕಿಕೊಟ್ಟ ಭದ್ರ ಬುನಾದಿಯೇ ಕಾರಣ. ದೈವ – ದೇವರುಗಳ ಫಲ ಮೂರ್ಜೆ ಕುಟುಂಬಕ್ಕೆ ಕೂಡಿಬಂದಿದ್ದು, ಆದಿಚುಂಚನಗಿರಿ ಪೀಠದ ಅನುಗ್ರಹ ಸದಾ ಈ ಕುಟುಂಬದ ಮೇಲಿರಲಿದೆ’ ಎಂದು ಆಶೀರ್ವಚನ ನೀಡಿದರು.
ಮಂಗಳೂರಿನ ಬಾವುಟಗುಡ್ಡದಲ್ಲಿ ಮುಂದಿನ ತಿಂಗಳು ಪ್ರತಿಷ್ಠಾಪನೆಗೊಳ್ಳಲಿರುವ ಅಮರ ಸುಳ್ಯದ ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡರು ಕೇವಲ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವಾಗಿರದೆ ರಾಜ್ಯ – ರಾಷ್ಟ್ರಮಟ್ಟದಲ್ಲಿ ಅವರ ಹೆಸರು ಉಳಿಯುವಂತೆ ಮಾಡುವ ಕೆಲಸ ಈ ಸಮಾಜದ ಮೇಲಿದೆ ಎಂದು ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಹೇಳಿದರು.

ಬೆಳಿಗ್ಗೆ ಗಣಪತಿ ಹವನ, ಬಳಿಕ ಶ್ರೀ ಸತ್ಯನಾರಾಯಣ ಪೂಜೆ , ಪ್ರಸಾದ ವಿತರಣೆ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮೂರ್ಜೆ ಮೂರ್ಕಜೆ ನಂದರವಂಶ ಒಕ್ಕಲಿಗ ಗೌಡ ತರವಾಡು ಟ್ರಸ್ಟ್ ಅಧ್ಯಕ್ಷರಾದ ಕೆ.ಎಸ್. ಗೋಪಾಲಕೃಷ್ಣ ಗೌಡ ಮೂರ್ಜೆ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳಿಗೆ ಮೂರ್ಜೆ ಮೂರ್ಕಜೆ ಕುಟುಂಬದ ವತಿಯಿಂದ ಗುರುವಂದನಾ ಕಾರ್ಯಕ್ರಮ ಜರುಗಿತು.
ಮೂರ್ಜೆ ಮೂರ್ಕಜೆ ನಂದರವಂಶ ಒಕ್ಕಲಿಗ ಗೌಡ ತರವಾಡು ಟ್ರಸ್ಟ್ ನ ಟ್ರಸ್ಟಿ ರಾಧಾಕೃಷ್ಣ ಮೂರ್ಜೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮೂರ್ಜೆ ಮೂರ್ಕಜೆ ನಂದರವಂಶ ಒಕ್ಕಲಿಗ ಗೌಡ ತರವಾಡಿನ ಕುರಿತು ವಿವರಿಸಿದರು.
ಮುಖ್ಯ ಅತಿಥಿಯಾಗಿದ್ದ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ‘ ಗೌಡ ಸಮಾಜಕ್ಕೆ ತನ್ನದೇ ಆದ ಇತಿಹಾಸವಿದೆ. ಇಂತಹ ಸಮಾಜದಲ್ಲಿ ಮೂರ್ಜೆ ಮನೆತನ ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಒಂದು ಸಮುದಾಯದ ಹಲವು ಕುಟುಂಬಗಳನ್ನು ಒಟ್ಟಿಗೆ ಸೇರಿಸಿ ವಿನೂತನ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಉಳಿದ ಕುಟುಂಬಕ್ಕೆ ಮಾದರಿಯಾಗಿದೆ. ತಮ್ಮ ಸಾಂಪ್ರದಾಯಿಕ ನಂಬಿಕೆ ಹಾಗೂ ಆಚಾರ ವಿಚಾರಗಳನ್ನು ಉಳಿಸಿ, ಮುಂದಿನ ಜನಾಂಗಕ್ಕೆ ತೋರ್ಪಡಿಸುವ ನಿಟ್ಟಿನಲ್ಲಿ ಮೂರ್ಜೆ ಮನೆತನ ಕೆಲಸ ಮಾಡಿದ್ದು, ಸಮಾಜದ ಹತ್ತು ಕುಟುಂಬ ಹದಿನೆಂಟು ಗೋತ್ರದಲ್ಲಿ ನಂದರವಂಶವೂ ಒಂದು ಎಂಬುದನ್ನು ಮೂರ್ಜೆ ಮನೆತನ ತೋರಿಸಿಕೊಟ್ಟಿದೆ’ ಎಂದು ಹೇಳಿದರು.
ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡರು ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಸುಳ್ಯದಲ್ಲಿ ಸಮುದಾಯದ ಜನರನ್ನು ಒಗ್ಗೂಡಿಸಿ ನಡೆಸಿದ ಹೋರಾಟವನ್ನು ಇದೇ ಸಂದರ್ಭದಲ್ಲಿ ಶಾಸಕ ಮಠಂದೂರು ಅವರು ನೆನಪಿಸಿಕೊಂಡರು.

 

ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ. ಕೆ.ವಿ. ರೇಣುಕಾಪ್ರಸಾದ್ ಅವರು ಮಾತನಾಡಿ “ಇಂದಿನ ಕಾಲದಲ್ಲಿ ಮಕ್ಕಳಿಗೆ ಅಷ್ಟಮಂಗಲ ಎಂದರೆ ಏನೆಂಬುದೇ ತಿಳಿದಿಲ್ಲ. ಅದನ್ನು ತಿಳಿಸಿಕೊಡುವ ಕೆಲಸವನ್ನು ಮೂರ್ಜೆ ತರವಾಡು ಮನೆತನ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಸಮುದಾಯದಲ್ಲಿ ಒಗ್ಗಟ್ಟು ಎಂಬುದೇ ಮರೆತಿದೆ. ಮನುಷ್ಯ ಮನುಷ್ಯನ ನಡುವೆ ಪ್ರೀತಿ ಸಂಬಧಗಳನ್ನು ಬೆಳೆಸುವ ಕೆಲಸ ಆಗಬೇಕಾಗಿದೆ ಎಂದರಲ್ಲದೇ, ಮೂರ್ಜೆ ಮನೆತನದ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ನನಗೆ ಮನವಿ ಸಲ್ಲಿಸಿದ್ದು, ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಧರ್ಮಪಾಲನಾಥ ಸ್ವಾಮೀಜಿಗಳ ಆಶೀರ್ವಾದದಿಂದ ರಾಜ್ಯ ಒಕ್ಕಲಿಗ ಸಂಘವು ಮೂರ್ಜೆ ಕುಟುಂಬದ ಜೊತೆ ಸದಾ ಇರಲಿದೆ ಎಂದು ಹೇಳಿದರು.
, ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಬಿ. ಜಯಪ್ರಕಾಶ್ ಗೌಡ, ದೈವಜ್ಞ ಶಶಿಧರನ್ ಮಾಂಗಾಡು,
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಕೆ.ಎಫ್.ಡಿ.ಸಿ. ಅಧ್ಯಕ್ಷ ಎ.ವಿ. ತೀರ್ಥರಾಮ ಅಂಬೆಕಲ್ಲು, ಬಂಟ್ವಾಳ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಮೋಹನ ಗೌಡ ಕಾಯರ್ ಮಾರ್, ವಿಟ್ಲ ಅರಮನೆಯ ಕೃಷ್ಣಯ್ಯ ಕೆ., ಬೆಂಗಳೂರು ಗೌಡ ಸಂಘದ ಅಧ್ಯಕ್ಷ ರವೀಂದ್ರನಾಥ ಕೇವಳ, ಅಕ್ಷಯ್ ಕೆ.ಸಿ‌., ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮೋಣಪ್ಪ ಗೌಡ, ದೈವಜ್ಞರುಗಳಾದ ರಾಜೇಶ್, ಗೋಪಾಲಕೃಷ್ಣ ಬದಿಯಡ್ಕ, ಸೇರಿದಂತೆ ಗಣ್ಯ ಅತಿಥಿಗಳು ಉಪಸ್ಥಿತರಿದ್ದು, ಶುಭಹಾರೈಸಿದರು.


ಮೋಹನ್ ಗೌಡ ಕಾಣಿಚಾರು ದಂಪತಿಗಳು ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ ಹಾಗೂ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಹರೀಶ್ ಮೂರ್ಜೆ ದಂಪತಿಗಳು ಡಾ. ಧರ್ಮಪಾಲನಾಥ ಸ್ವಾಮೀಜಿಗಳಿಗೆ ಫಲತಾಂಬೂಲ ನೀಡಿ ಗೌರವಿಸಿದರು. ಕು. ಚಂದನ ಮೂರ್ಜೆ ಪ್ರಾರ್ಥಿಸಿ, ಟ್ರಸ್ಟಿನ ಜಂಟಿ ಕಾರ್ಯದರ್ಶಿ ವಸಂತ ಉಲ್ಲಾಸ್ ಬೆಳ್ಳಾರೆ ಸ್ವಾಗತಿಸಿದರು. ಟ್ರಸ್ಟಿನ ಗೌರವಾಧ್ಯಕ್ಷ ಕೆ.ಎಸ್. ಆನಂದಗೌಡ ಮೂರ್ಜೆ ವಂದಿಸಿ, ಶ್ರೀಮತಿ ಭವ್ಯ ಮೂರ್ಜೆ ಕಾರ್ಯಕ್ರಮ ನಿರೂಪಿಸಿದರು.