ಕೆಂಬಾವುಟ ಹಿಡಿಯುವವರನ್ನು ದೇಶದ್ರೋಹಿಗಳೆಂದು ಟೀಕಿಸಿದರೆ ಕಾರ್ಮಿಕ ವರ್ಗವನ್ನು ಟೀಕಿಸಿದಂತೆ : ಸಿಐಟಿಯು ಪತ್ರಿಕಾಗೋಷ್ಠಿ

0

ಕೆಂಬಾವುಟ ಹುಟ್ಟಿz ಭಾರತದಲ್ಲಿ. ಕಾರ್ಮಿಕರ ಪರ ಹೋರಾಟ, ಚಳವಳಿಯ ಸಂದರ್ಭದಲ್ಲಿ ಇದನ್ನು ಹಿಡಿದೇ ಹೋರಾಡುತ್ತಿದ್ದೆವು. ಇದೀಗ ಕೆಂಬಾವುಟದ ವಿರುದ್ಧ ಅಪಪ್ರಚಾರ ನಡೆಯುತ್ತಿದ್ದು ಕಾರ್ಮಿಕರು ಇದಕ್ಕೆ ಕಿವಿಕೊಡಬಾರದು ಎಂದು ಸಿ.ಐ.ಟಿ.ಯು ರಾಜ್ಯ ಸಮಿತಿ ಸದಸ್ಯ, ನ್ಯಾಯವಾದಿ ಬಿ.ಎಂ. ಭಟ್ ಹೇಳಿದ್ದಾರೆ.
ಡಿ.೩ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸುಳ್ಯದಲ್ಲಿ ಮಾಲಕರ ಪರವಾಗಿ ಕಾರ್ಮಿಕ ಸಂಘಟನೆ ಸ್ಥಾಪಿಸಲು ಹವಣಿಸುವ ಶಕ್ತಿಗಳು ಕೆಂಬಾವುಟ ಹಿಡಿಯುವವರನ್ನು ದೇಶದ್ರೋಹಿಗಳೆಂದು ಟೀಕಿಸುವುದೂ ಎಂದರೆ ಕಾರ್ಮಿಕ ವರ್ಗವನ್ನು ದೇಶದ್ರೋಹಿಗಳೆಂದು ಕರೆದಂತೆ. ೧೫೦ ವರ್ಷದ ಇತಿಹಾಸ ಇರುವ ಕೆಂಬಾವುಟ ಹಿಡಿಯುವ ಕಾರ್ಮಿಕ ವರ್ಗ ಇಂತಹ ಅಪಪ್ರಚಾರಗಳಿಗೆ ಕಿವಿಕೊಡಬಾರದು. ೮ ಗಂಟೆಯ ಕೆಲಸ, ೮ ಗಂಟೆಯ ವಿರಾಮ, ೮ ಗಂಟೆ ಮನೋರಂಜನೆ ಎಂದು ದಿನದ ೨೪ ಗಂಟೆಯನ್ನು ೩ ವಿಭಾಗ ಮಾಡಲು ೮ ಗಂಟೆ ದುಡಿಮೆಗೆ ಕನಿಷ್ಟ ಕೂಲಿ ಸಿಗಬೇಕೆಂದು ಹಾಗೂ ಅದು ಬದುಕುವ ಕೂಲಿಯಾಗಿರಬೇಕೆಂದು ಹೋರಾಡಿದ ಇತಿಹಾಸ ಇದೇ ಕೆಂಬಾವುಟದ್ದು. ಕಟ್ಟಡ ಕಾರ್ಮಿಕರಿಗೆ ಕಾನೂನು ಬರಲು ಹೋರಾಡುವಾಗ ಕೂಡಾ ಇಂತಹ ಸಮಾಜ ವಿರೋಧಿ ಶಕ್ತಿಗಳು ಕೆಂಬಾವುಟವನ್ನು ಟೀಕಿಸುತ್ತಾ ಅಪಹಾಸ್ಯ ಮಾಡುತ್ತಿದ್ದರು. ಇಂದು ಕಾನೂನು ಬರುವಂತೆ ಹೋರಾಡಿದ ಸಿಯಟಿಯು ಕೆಂಬಾವುಟವನ್ನು ಟೀಕಿಸುವವರೆಂದರೆ ಹೆತ್ತ ತಾಯಿಯ ಎದೆಗೆ ತುಳಿಯುವುದಕ್ಕೆ ಸಮ ಅಷ್ಟೆ ಎಂದು ಅವರು ಹೇಳಿದರು.
ಕೆಂಬಾವುಟವನ್ನು ಟೀಕಿಸುವವರು ೫ ವರ್ಷದ ಹಿಂದೆ ಸರಕಾರ ನಿಗದಿ ಪಡಿಸಿದ ಬೀಡಿ ಕಾರ್ಮಿಕರ ಕಾನೂನು ಬದ್ದ ವೇತನದಲ್ಲಿ ಪ್ರತಿ ೧೦೦೦ ಬೀಡಿಯಲ್ಲಿ ೪೦ ರೂ ಕಡಿತ ಮಾಡಿಕೊಳ್ಳುತ್ತಾ ಕಳೆದ ನಾಲ್ಕೂವರೆ ವರ್ಷದಿಂದ ರೂ.೩೦ ಸಾವಿರದಂತೆ ಬಾಕಿ ಮಾಡಿದ ಮಾಲಕರ ಪರ ನಿಂತ ಸರಕಾರದ ವಿರುದ್ಧ ಸ್ವರ ಎತ್ತುತ್ತಿಲ್ಲ ಯಾಕೆ? ಬೀಡಿ ಕಾರ್ಮಿಕರ ಗ್ರಾಚ್ಯುವಿಟಿ ನೀಡದ ಮಾಲಕರ ವಿರುದ್ಧವಾಗಲಿ, ಬಿಸಿಯೂಟ ನೌಕರರಿಗೆ ಎರಡು ಮೂರು ತಿಂಗಳಿನಿಂದ ವೇತನ ನೀಡದೆ ಶೋಷಿಸುವ ಸರಕಾರದ ವಿರಉದ್ಧ ಧ್ವನಿ ಎತ್ತದವರು ಕಾರ್ಮಿಕರ ಒಗ್ಗಟ್ಟನ್ನು ಕಂಡು ಕೆಂಬಾವುಟ ಹಿಡಿಯುವ ಕಾರ್ಮಿಕರನ್ನು ದೇಶದ್ರೋಹಿಗಳೆಂದು ಟೀಸುತ್ತಾರೆಂದರೆ ಇವರು ಸುಳ್ಯದಲ್ಲಿ ಕಾರ್ಮಿಕರಿಗೆ ಮೋಸ ಮಾಡಲು ಹೊರಟಂತೆ ಕಾಣುತ್ತಿದೆ.
ಕಟ್ಟಡ ಕಾರ್ಮಿಕ ಮಂಡಳಿಯ ಹಣವನ್ನು ಕಿಟ್‌ಗಳ ಹೆಸರಲ್ಲಿ ಮಂಡಳಿಯ ಹಣವನ್ನು ಲೂಟಿ ಮಾಡುತ್ತಿರುವ ರಾಜ್ಯ ಸರಕಾರ ಕಾರ್ಮಿಕರ ಹಕ್ಕು ಸವಲತ್ತುಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಕಿಟ್ ಸರಕಾರದ ಕೊಡುಗೆ ಅಲ್ಲ. ಅದು ಕಾರ್ಮಿಕ ಮಂಡಳಿಯ ಹಣ. ಕಾರ್ಮಿಕರಿಗೆ ಬಸ್ ಪಾಸು ನೀಡಲು ನಿರ್ಧರಿಸಿದ ಸರಕಾರ ಕಟ್ಟಡ ಕಾರ್ಮಿಕ ಒಬ್ಬೊಬ್ಬರ ಹೆಸರಲ್ಲಿ ಮಾಸಿಕ ತಲಾ ರೂ.೧೬೦೦ ರಂತೆ ಲೂಟಿ ಮಾಡುತ್ತಿದೆ. ಎಲ್ಲರಿಗೂ ಬಸ್ ಪಾಸನ್ನೇ ನೀಡದೆ ಈ ರೀತಿ ಮಂಡಳಿಯ ಹಣವನ್ನು ಲೂಟಿ ಮಾಡುವುದನ್ನು ಸಿಐಟಿಯು ಖಂಡಿಸುತ್ತದೆ ಎಂದು ಅವರು ಹೇಳಿದರು.
ಸಿಐಟಿಯುವ ಮುಖಂಡರಾದ ಕೆ.ಪಿ. ಜಾನಿ ಮಾತನಾಡಿ ವಿದ್ಯಾರ್ಥಿ ವೇತನ ಸಮಪರ್ಕವಾಗಿ ನೀಡುತ್ತಿಲ್ಲ. ಕಲ್ಯಾಣ ನಿಧಿಯನ್ನು ನೀಡುತ್ತಿಲ್ಲ. ೪೫೦ ರೂ ಬೆಲೆ ಬಾಳುವ ಕಿಟ್‌ನ್ನು ೧೨೦೦-೧೪೦೦ ಎಂದು ನೀಡಲಾಗುತ್ತಿದೆ. ಇದೆಲ್ಲ ಭ್ರಷ್ಟಚಾರವಲ್ಲವೇ ಎಂದು ಅವರು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬಿಜು ಅಗಸ್ಟಿನ್, ವಿಶ್ವನಾಥ ನೆಲ್ಲಿಬಂಗಾರಡ್ಕ, ಶಿವರಾಮ ಗೌಡ, ವಿಜಯ ಮೇಸ್ತ್ರೀ, ಉಸ್ಮಾನ್ ಜಯನಗರ, ವಿ.ಗಣೇಶ್, ವಿ.ಆರ್. ಪ್ರಸಾದ್ ಇದ್ದರು.