ರೈತರ ತೋಟಕ್ಕೆ ಹೋಗಿ ಅಡಿಕೆ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕಿ ರೋಗ ಕಣ್ಣಾರೆ ಕಂಡ ತೋಟಗಾರಿಕಾ ಸಚಿವ ಮುನಿರತ್ನ, ಶಾಶ್ವತ ಪರಿಹಾರಕ್ಕೆ ಕ್ರಮದ ಭರವಸೆ

0



ರಾಜ್ಯದ ತೋಟಗಾರಿಕಾ ಸಚಿವ ಮುನಿರತ್ನರವರು ದ.೧೧ ರಂದು ಸುಳ್ಯ ತಾಲೂಕಿನ ಮರ್ಕಂಜಕ್ಕೆ ಬಂದು ನಾಲ್ಕು ಮಂದಿ ರೈತರ ತೋಟಗಳಿಗೆ ಭೇಟಿ ನೀಡಿ ಅಡಿಕೆ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕಿ ರೋಗವನ್ನು ಕಣ್ಣಾರೆ ಕಂಡರು. ಈ ರೋಗದ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿಯೂ, ರೋಗಕ್ಕೆ ಔಷಧ ಕಂಡು ಹಿಡಿಯುವ ಬಗ್ಗೆ ಇಸ್ರೇಲ್ ನ ವಿಜ್ಞಾನಿಗಳ ಜತೆ ಸಮಾಲೋಚಿಸುವುದಾಗಿಯೂ ಅವರು ಭರವಸೆ ನೀಡಿದರು. ಸುಳ್ಯದ ಶಾಸಕರಾದ ಬಂದರು ಹಾಗೂ ಮೀನುಗಾರಿಕೆ ಸಚಿವ ಎಸ್.ಅಂಗಾರ ಜತೆಗಿದ್ದರು.


ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗದಿಂದಾಗಿ ತೋಟ ಸಂಪೂರ್ಣ ನಾಶಗೊಂಡಿರುವ ಕೃಷ್ಣ ಕಿಶೋರ್ ಅಡಿಕೆಹಿತ್ಲು, ವೆಂಕಟ್ರಮಣ ಅಂಗಡಿಮಜಲು, ವಿಶ್ವಾಸ್ ಮಾಪಲ ತೋಟ ಹಾಗೂ ವಶಿಷ್ಠ ಮಾಪಲತೋಟ ಮತ್ತು ಪುರ ದಯಾನಂದರ ತೋಟಗಳಿಗೆ ಸಚಿವ ಮುನಿರತ್ನ ಭೇಟಿ ನೀಡಿದರು. ರೋಗ ಬಾಧಿತ ಅಡಿಕೆ ಸೋಗೆ ಹಾಗೂ ಅಡಿಕೆಗಳನ್ನು ಪರಿಶೀಲಿಸಿ ಕೃಷಿಕರಿಂದ ಮಾಹಿತಿ ಪಡೆದರು.

ಮುಂದಿನ ತಿಂಗಳು ತನಗೆ ಇಸ್ರೇಲ್‌ಗೆ ಹೋಗಲಿಕ್ಕಿದ್ದು ಅಲ್ಲಿನ ವಿಜ್ಞಾನಿಗಳೊಂದಿಗೆ ಈ ರೋಗದ ಬಗ್ಗೆ ಚರ್ಚಿಸುತ್ತೇನೆ. ರೋಗ ಪೀಡಿತ ಎಲೆ ಮತ್ತು ಅಡಿಕೆಯ
ಮಾದರಿಯನ್ನು ಸಂಗ್ರಹಿಸಿ ನನಗೆ ಕಳುಹಿಸಿ” ಎಂದು ತನ್ನ ಜತೆಗಿದ್ದ ಇಲಾಖಾಧಿಕಾರಿಗಳಿಗೆ ಸಚಿವರು ಸೂಚಿಸಿದರು.


ಕಳೆದ ಹಲವು ವರ್ಷಗಳಿಂದ ಮರ್ಕಂಜ ಭಾಗದಲ್ಲಿ ಹಳದಿ ಎಲೆ ರೋಗ, ಬೇರು ಹುಳದ ಬಾಧೆ ಇದೆ. ಇದೀಗ ಎಲೆ ಚುಕ್ಕಿ ರೋಗ ವ್ಯಾಪಕವಾಗಿ ಹಬ್ಬಿ ಮರಗಳು ಸಾಯುತ್ತಿವೆ'' ಎಂದು ಕೃಷ್ಣ ಕಿಶೋರ್, ವೆಂಕಟ್ರಮಣ ಅಂಗಡಿಮಜಲು, ವಿಶ್ವಾಸ್ ಮಾಪಲತೋಟ ಪ್ರಶಾಂತ್ ಉಮ್ಮಡ್ಕ, ದಯಾನಂದ ಪುರ ಮೊದಲಾದವರು ಸಚಿವರೊಂದಿಗೆ ಹೇಳಿಕೊಂಡರು. ಈ ರೋಗಗಳಿಂದ ಅಡಿಕೆ ಕೃಷಿಕರಿಗೆ ಬಹುದೊಡ್ಡ ನಷ್ಟವಾಗಿದೆ ಎಂದು ಸರಕಾರಕ್ಕೆ ಮನವರಿಕೆಯಾಗಿದೆ. ಆದ್ದರಿಂದ ಇದಕ್ಕೆ ಶಾಶ್ವತ ಪರಿಹಾರ ಹುಡುಕುತ್ತೇವೆ” ಎಂದು ಸಚಿವ ಮುನಿರತ್ನ ರೈತರಿಗೆ ಸಾಂತ್ವನ ಹೇಳಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮರ್ಕಂಜ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪವಿತ್ರಾ ಗುಂಡಿ, ಸ್ಥಳೀಯ ಮುಖಂಡರುಗಳಾದ ರಾಮಚಂದ್ರ ಹಲ್ದಡ್ಕ, ಗಣೇಶ್ ರೈ, ಸಂಧ್ಯಾ ಸೇವಾಜೆ, ರೇಣುಕಾಪ್ರಸಾದ್ ಬಲ್ಕಾಡಿ ಇದ್ದರು.
ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ಕದಿರೇ ಗೌಡ, ಮೈಸೂರು ವಿಭಾಗದ ಜಂಟಿ ನಿರ್ದೇಶಕ ನಾಗರಾಜ ಎಂ, ಜಿಲ್ಲಾ ಉಪ ನಿರ್ದೇಶಕ ಎಚ್.ಆರ್. ನಾಯಕ್, ಮಂಗಳೂರು ತಾಲೂಕು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರವೀಣ್, ಸುಳ್ಯ ಹಿರಿಯ ತೋಟಗಾರಿಕಾ ನಿರ್ದೇಶಕರಾದ ಶ್ರೀಮತಿ ಸುಹಾನ ಮತ್ತಿತರರು ಸಚಿವರ ಜತೆಗಿದ್ದರು.
ಎಲೆಚುಕ್ಕಿ ರೋಗಕ್ಕೆ ಔಷಧ ಸಿಂಪಡಣೆಗೆ ೧೫ ಕೋಟಿ ಮತ್ತು ದೋಟಿ ಒದಗಣೆ : ಮುನಿರತ್ನ : ತೋಟಗಳಿಗೆ ಭೇಟಿ ನೀಡಿದ ಬಳಿಕ ವಿಶ್ವಾಸ್ ಮಾಪಲತೋಟರವರ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿರತ್ನರವರು, ಎಲೆಚುಕ್ಕಿ ರೋಗಕ್ಕೆ ಔಷಧಿ ಸಿಂಪಡಣೆಗೆ ಈಗಾಗಲೇ ೪ ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಇನ್ನೂ ೧೫ ಕೋಟಿ ರೂ. ಒದಗಿಸಲು ಮುಖ್ಯಮಂತ್ರಿಗಳನ್ನು ವಿನಂತಿಸಲಾಗುವುದು. ರೋಗಬಾಧಿತ ಎಲೆಯನ್ನು ತೆಗೆಯಲು ರೈತರಿಗೆ ದೋಟಿ ಒದಗಿಸಲಾಗುವುದು” ಎಂದು ಹೇಳಿದರು.


ಹಳದಿ ರೋಗ ಬಾಧಿಸುತ್ತಿರುವುದರಿಂದ ರೈತರು ಭಾರೀ ನಷ್ಟಕ್ಕೆ ಒಳಗಾಗಿದ್ದಾರೆ. ೪೦ ವರ್ಷ ಫಸಲು ನೀಡಬೇಕಾದ ಅಡಿಕೆ ಕೃಷಿ ಕಣ್ಣೆದುರೇ ನಾಶವಾಗಿ ಹೋಗುತ್ತಿರುವುದು ರೈತರಿಗೆ ದೊಡ್ಡ ಅನ್ಯಾಯ. ಇದಕ್ಕೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ನಡೆಸಲಾಗುವುದು. ಈ ರೋಗಕ್ಕೆ ಔಷಧ ಹುಡುಕಲು ನಮ್ಮ ಕೃಷಿ ವಿಜ್ಞಾನಿಗಳು ಪ್ರಯತ್ನ ನಡೆಸುತ್ತಲೇ ಇದ್ದಾರೆ. ಆದರೆ ಸಾಧ್ಯವಾಗಿಲ್ಲ. ಅದಕ್ಕಾಗಿ ಮುಂದಿನ ತಿಂಗಳು ಇಸ್ರೇಲ್ ದೇಶಕ್ಕೆ ತಾನು ಭೇಟಿ ನೀಡುವ ಸಂದರ್ಭ ಅಲ್ಲಿನ ಕೃಷಿ ವಿಜ್ಞಾನಿಗಳ ಜತೆ ಚರ್ಚಿಸುತ್ತೇನೆ ಎಂದು ಹೇಳಿದರು.


ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಅಡಿಕೆ ಹಳದಿ ಎಲೆ ರೋಗದ ಸಂಶೋಧನೆಗೆ ೨೫ ಕೋಟಿ ಒದಗಿಸುವುದಾಗಿ ಹೇಳಿದ್ದು ಅದನ್ನು ರೈತರಿಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ಸರಕಾರಕ್ಕೆ ಮನವಿ ನೀಡಿರುವ ಬಗ್ಗೆ ಪತ್ರಕರ್ತರು ಗಮನ ಸೆಳೆದಾಗ ಆ ಬಗ್ಗೆ ಮುಖ್ಯಮಂತ್ರಿಗಳ ಜತೆ ಸಮಾಲೋಚಿಸುವುದಾಗಿ ಹೇಳಿದರು.
ಹಳದಿ ಎಲೆ ರೋಗ ನಿರೋಧಕ ಅಡಿಕೆ ತಳಿ ಅಭಿವೃದ್ಧಿಯ ಕಾರ್ಯ ಯಾವ ಹಂತದಲ್ಲಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಆ ಬಗ್ಗೆ ಸಂಶೋಧನೆ ನಡೆದ ಬಳಿಕವೇ ಹೇಳ ಬೇಕಾಗುತ್ತದೆ. ಆ ರೀತಿಯ ಸಂಶೋಧನೆ ಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಸಚಿವರು ಉತ್ತರಿಸಿದರು.