ಸಚ್ಚಾರಿತ್ರ ಸದ್ಗುಣಗಳಿಂದ ಸ್ವಾಸ್ಥ ಸಮಾಜ ನಿರ್ಮಾಣ: ಕೆ ಆರ್ ಗಂಗಾಧರ್
ಎನ್.ಎಂ.ಸಿ; ವಿದ್ಯಾರ್ಥಿ ಸಂಘದ ಉದ್ಘಾಟನೆ, ಪ್ರತಿಭಾ ದಿನಾಚರಣೆ

0

ಇಪ್ಪತ್ತೊಂದನೇ ಶತಮಾನದ ಆಧುನಿಕ ಕಾಲದಲ್ಲಿ ನಾವು ಯುವಜನಾಂಗ ನೈಜ ಬಡತನದ ಅರಿವಿಲ್ಲದೆ ಬದುಕುವುದನ್ನು ನೋಡುತ್ತಿದ್ದೇವೆ. ಹಾಗೆ ಸಮಾಜದ ಮಾಲಿನ್ಯದಿಂದ ತುಂಬಾ ಜಾಗರೂಕರಾಗಿ ಇರಬೇಕಾದ ಅನಿವಾರ್ಯತೆ ಇದೆ. ಯೋಗ್ಯ ಸಮಾಜ ನಿರ್ಮಾಣದಲ್ಲಿ ಒಳ್ಳೆಯ ಗುಣ ಮತ್ತು ಬದ್ಧತೆಯ ಬದುಕು ಅವಶ್ಯಕವಾಗಿದೆ. ಸಚ್ಚಾರಿತ್ರ್ಯ ವ್ಯಕ್ತಿಯ ಟ್ರೇಡ್ ಮಾರ್ಕ್ ಆಗಬೇಕು. ಕಠಿಣ ದುಡಿಮೆ, ಉತ್ಸಾಹ, ಬದ್ಧತೆ ಇದ್ದಾಗ ಮಾತ್ರ ಈ ಸ್ಪರ್ಧಾತ್ಮಕ ಜೀವನದಲ್ಲಿ ಯಶಸ್ಸು ಗಳಿಸಬಹುದು. ಸೋಲು ಜೀವನಕ್ಕೆ ಪಾಠ ಕಲಿಸುವುದು, ಅದನ್ನು ಸ್ವೀಕರಿಸಿ ಬದುಕಲು ಕಲಿಯಬೇಕು. ಹಣ ಸಂಪಾದನೆ ಬದುಕಲ್ಲ, ನಮ್ಮ ಬದುಕನ್ನು ಸುಂದರವಾಗಿರಿಸುವುದು ಶಿಕ್ಷಣ. ಯುವಜನತೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸ್ವಾಭಿಮಾನಿಗಳಾಗಿ ಬದುಕಿ ಪರಸ್ಪರ ಸಹಾಯ ಮಾಡುವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡಿನ ವಿಶ್ರಾಂತ ಪ್ರಾಂಶುಪಾಲ ರಾಷ್ಟ ಪ್ರಶಸ್ತಿ ಪುರಸ್ಕೃತರಾದ ಕೆ.ಆರ್ ಗಂಗಾಧರ್ ಹೇಳಿದರು. ಅವರು ಡಿ. 13ರಂದು ಸುಳ್ಯದ ನೆಹರು ಮೆಮೊರಿಯಲ್ ಕಾಲೇಜು, ಸುಳ್ಯ ಇಲ್ಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಗೈದು ಮಾತನಾಡಿದರು.


ಕಾಲೇಜಿನ ಮುಖ್ಯ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಇದರ ಅಧ್ಯಕ್ಷ ಡಾ. ಕೆ.ವಿ ಚಿದಾನಂದ ಇವರು ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಶ್ರೀಮತಿ ರತ್ನಾವತಿ ಡಿ. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಟಿ ವಿಶ್ವನಾಥ್ ವಿದ್ಯಾರ್ಥಿ ವೇತನ ವಿತರಿಸಿದರು. ವೇದಿಕೆಯಲ್ಲಿ, ವಾಣಿಜ್ಯ ವಿಭಾಗದಿಂದ ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದ ನೆನಪಿನ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.


ನಂತರ ಪ್ರತಿಭಾ ದಿನಾಚರಣೆ ಕಾರ್ಯಕ್ರಮವನ್ನು ತಾಸೆ ಬಾರಿಸುವುದರ ಮೂಲಕ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಾರ್ಯದರ್ಶಿ ಕೆ.ವಿ ಹೇಮನಾಥ ಅವರು ಉದ್ಘಾಟಿಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರುದ್ರಕುಮಾರ್ ಎಂ.ಎಂ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್, ಕಾಲೇಜು ಆಂತರಿಕ ಗುಣಮಟ್ಟ ಖಾತ್ರಿ ಕೋಶದ ಸಂಯೋಜಕಿ ಮಮತಾ ಕೆ. ಮತ್ತು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕುಮಾರಿ ಅನಘ ಮತ್ತು ಕುಮಾರಿ ರತ್ನ ಸಿಂಚನ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ರಜತ್ ಕುಮಾರ್ ಸ್ವಾಗತಿಸಿ, ಉಪಾಧ್ಯಕ್ಷೆ ಕು. ಚೈತನ್ಯ ಕೆ. ಅತಿಥಿಗಳನ್ನು ಪರಿಚಯಿಸಿ, ಕಾರ್ಯದರ್ಶಿ ಅನ್ವಿತ್ ಎಂ.ಸಿ ವಂದಿಸಿದರು. ಕು. ಗಾನ ಬಿ.ಡಿ ಮತ್ತು ಕು. ಶಾನ್ಯ ಕಾರ್ಯಕ್ರಮ ನಿರೂಪಿಸಿದರು. ಕಾಲೇಜು ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಸಹಕರಿಸಿದರು.