ನೋಡ ಬನ್ನಿ… ಸುಳ್ಯದ ಕೃಷಿ ಮೇಳ, ಗುತ್ತಿನ ಮನೆ, ಭೂತಾರಾಧನೆ, ಪಂಚಾಯತಿ ಕಟ್ಟೆ, ಕುಲ ಕಸುಬು ತುಳುನಾಡಿನ ಕಥೆ ಹೇಳುತ್ತಿದೆ ಪಾರಂಪರಿಕ ಗ್ರಾಮ, ಐದು ಸಾವಿರಕ್ಕೂ ಮಿಕ್ಕಿ ವಸ್ತುಗಳ ಸಂಗ್ರಹ ಪ್ರಾಚ್ಯ ವಸ್ತು ಸಂಗ್ರಹಾಲಯದ ವೈಶಿಷ್ಟ್ಯ

0

ಸುಳ್ಯದ ಕೃಷಿ ಮೇಳವನ್ನು ಒಮ್ಮೆ ನೋಡಬೇಕು. ಅದೇಷ್ಟೋ ಹೊಸ ವಿಷಯಗಳು ವಿಚಾರಗಳು ಈ ಕೃಷಿ ಮೇಳದ ಆಕರ್ಷಣೆ. ಪಾರಂಪರಿಕ ಗ್ರಾಮ ತುಳುನಾಡಿನ ಆಚಾರ ವಿಚಾರಗಳನ್ನು ತಿಳಿಸಿದರೆ, ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿ ಎರಡೂವರೆ ವರ್ಷಗಳ ಹಿಂದಿನ ವಸ್ತುಗಳ ಸಂಗ್ರಹವಿದ್ದು ಅಲ್ಲಿ ಸುಮಾರು ೫ ಸಾವಿರಕ್ಕೂ ಹೆಚ್ಚು ವಿವಿಧ ವಸ್ತುಗಳು ಕಣ್ಮನ ಸೆಳೆಯುತ್ತಿದೆ.


ಪಾರಂಪರಿಕ ಗ್ರಾಮ : ಸುಳ್ಯ ಚೆನ್ನಕೇಶವ ದೇವಸ್ಥಾನದ ಪಕ್ಕದ ಪ್ರಭು ಗ್ರೌಂಡ್ ನ ವಿಸ್ತಾರವಾದ ಜಾಗದಲ್ಲಿ ೧೨ ಕುಟೀರಗಳು ಹಾಗೂ ಅಟ್ಟಳಿಗೆಯ ಮನೆ ನಿರ್ಮಾಣದ ಮೂಲಕ ತುಳು ನಾಡಿನ ಪರಂಪರೆಯನ್ನು ತಿಳಿಸಲಾಗಿದೆ. ಮುಳಿ ಹುಲ್ಲು, ಸೋಗೆ, ತಟ್ಟಿ, ಮಣ್ಣು, ಸೆಗಣಿ, ಬಿದಿರು, ಅಡಿಕೆ ಕಂಬಗಳನ್ನು ಬಳಸಿಕೊಂಡು ಕುಟೀರಗಳ ನಿರ್ಮಾಣ ಮಾಡಲಾಗಿದೆ. ಕಾಂತಾರ ಚಿತ್ರದಲ್ಲಿ ನಾಗಾರಧನೆಗೆ ಸಂಬಂಧಿಸಿದಂತೆ ಸೆಟ್‌ಗಳನ್ನು ನಿರ್ಮಿಸಿರುವ ಮಂಗಳೂರಿನ ಮುಖೇಶ್ ಗಂದಕಾಡು ಪದಂಗಡಿಯವರು ಇಲ್ಲಿಯೂ ಕೆಲಸ ನಿರ್ವಹಿಸಿದ್ದಾರೆ. ಅವರಿಗೆ ವಿಕ್ಕಿ ಕುಲಾಲ್ ಸಹಕಾರ ನೀಡಿದ್ದಾರೆ.


ಪಾರಂಪರಿಕ ಗ್ರಾಮದಲ್ಲಿ ಗುತ್ತಿನ ಮನೆ, ನ್ಯಾಯ ಪಂಚಾತಿಕೆ ಮಾಡುವ ಪಂಚಾಯತಿ ಕಟ್ಟೆ, ದೈವಸ್ಥಾನಗಳು, ನಾಗಬನಗಳು, ಕಂಬಳ ಗದ್ದೆ ಯ ಜತೆಗೆ ಇಲ್ಲಿಯ ಕುಲ ಕಸುಬಾಗಿರುವ ಕುಂಬಾರಿಕೆ ಸೇರಿದಂತೆ, ತಟ್ಟಿ ಹಣೆಯುವುದು, ಕೊರಂಬು ರಚನೆ, ಕುತ್ತರಿ, ಕುಡುಪು ತಯಾರಿ, ಮುಟ್ಟಾಳೆ, ಒಳಿ ಚಾಪೆ, ಭತ್ತ ಕುಟ್ಟುವುದು ಹೀಗೆ ವಿವಿಧ ವಿಶೇಷತೆಗಳು ತುಳು ನಾಡಿನ ಕತೆಗಳನ್ನು ಕಣ್ಣಿಗೆ ಕಟ್ಟುವಂತಿದೆ. ಇಲ್ಲಿ ಮುಟ್ಟಾಳೆ, ಕುಂಬಾರಿಕೆ, ಮುಟ್ಟಾಲೆ, ಒಳಿ ಚಾಪೆ ಹೀಗೆ ಎಲ್ಲವನ್ನು ಮಾಡಿ ಮಾರಾಟ ಮಾಡುತ್ತಿರುವವರು ಕಾರ್ಕಳದವರು.


ಪ್ರಾಚ್ಯವಸ್ತು ಸಂಗ್ರಹಾಲಯ : ಪ್ರಭು ಮೈದಾನದಲ್ಲಿ ದೊಡ್ಡ ಪೆಂಡಾಲ್‌ನಲ್ಲಿ ಪ್ರಾಚ್ಯ ವಸ್ತು ಸಂಗ್ರಹಾಲಯ ವಿದೆ. ಶ್ರೀದತ್ತ ತುಳು ಜಾನಪದ ಮತ್ತು ಇತಿಹಾಸ ಅಧ್ಯಯನ ಕೇಂದ್ರ ಹಿರ್ಗಾನ ಕಾರ್ಕಳ ಹಾಗೂ ಬಜಪೆ ಸುಂಕದಕಟ್ಟೆ ನಿರಂಜನ ಸ್ವಾಮಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾಗಿರುವ ಸುಧಾಕರ ಶೆಟ್ಟಿ ಹಾಗೂ ಇನ್ಫೋಸಿಯಸ್ ಉದ್ಯೋಗಿಯಾಗಿರುವ ಆಶಿತಾ ಎಸ್ ಕಡಬಂಬರವರ ನೇತೃತ್ವದ ವಸ್ತು ಸಂಗ್ರಹಾಲಯದಲ್ಲಿ ೫ ಸಾವಿರಕ್ಕೂ ಹೆಚ್ಚು ಹಳೆ ವುಸ್ತುಗಳ ಸಂಗ್ರಹವಿದೆ.
ದೈವಾರಾಧನೆ, ದೇವತಾರಾಧನೆ, ನಾಗಾರಾಧನೆ, ಇತಿಹಾಸ, ಯಕ್ಷಗಾನ, ಅಳತೆ ಮಾಪನ, ಕ್ರೀಡೆಗಳು, ವಾದನಗಳು, ಗೃಹೋಪಯೋಗಿ ವಸ್ತುಗಳು, ಕುಲಸ ಕಸುಬು, ನೀರಾವರಿಗೆ ಸಂಬಂಧಿಸಿದ ವಸ್ತುಗಳು, ಗ್ರಾಮ ಫೋನ್ ರೇಡಿಯೋ, ಟೆಲಿಫೋನ್, ಹಿತ್ತಾಳೆ ವಸ್ತುಗಳು, ನಾಣ್ಯಗಳು ಹೀಗೆ ಹಲವು ವಿಧದ ವಸ್ತುಗಳಿವೆ.
ಹೀಗೆ ಸುಳ್ಯದ ಈ ಕರಷಿ ಮೇಳ ತುಳು ನಾಡಿನ ವೈಶಿಷ್ಟ್ಯತೆUಳನ್ನು ಇಂದಿನ ಪೀಳಿಗೆಗೆ ತಿಳಿಸುವ ಕೆಲಸ ಇಲ್ಲಿ ಮಾಡಲಾಗುತ್ತಿದೆ.