ಎನ್ನೆಂಸಿ; ನೇಚರ್ ಕ್ಲಬ್ ವತಿಯಿಂದ ಕುದುರೆಮುಖ ಶಿಖರಕ್ಕೆ ಚಾರಣ

0

ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ನೇಚರ್ ಕ್ಲಬ್ ವತಿಯಿಂದ ಕುದುರೆಮುಖ ಅರಣ್ಯ ವಿಭಾಗದ ಸಹಕಾರದೊಂದಿಗೆ ಜೀವವಿಜ್ಞಾನ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಕರ್ನಾಟಕದ ಮೂರನೇ ಅತೀ ಎತ್ತರವಾದ ಪರ್ವತ ಶ್ರೇಣಿ ಕುದುರೆಮುಖ ಶಿಖರಕ್ಕೆ ಚಾರಣ ಕಾರ್ಯಕ್ರಮವನ್ನು ಡಿ. 12ರಂದು ಹಮ್ಮಿಕೊಳ್ಳಲಾಯಿತು.


ಕಾಲೇಜಿನ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿಗಳನ್ನು ಒಳಗೊಂಡ 30 ಜನರ ತಂಡಕ್ಕೆ ಕುದುರೆಮುಖ ಅರಣ್ಯ ವಿಭಾಗದ RFO ಜ್ಯೋತಿ ಮೆಣಸಿನಕಾಯಿ ಮತ್ತು DRFO ಹರೀಶ್ ಕುಮಾರ್ ಮಾರ್ಗದರ್ಶನ ನೀಡಿದರು. ಮುಂಜಾನೆ 6 ಗಂಟೆಗೆ ಚಾರಣವನ್ನು ಪ್ರಾರಂಭಿಸಿ ಆರಂಭಿಕ 6 ಕಿ.ಮೀ. ತೆರದ ಜೀಪಿನಲ್ಲಿ ಕ್ರಮಿಸಿ ನಂತರದ ಸುಮಾರು 20 ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲಿ ಸತತ 6 ಗಂಟೆಗಳ ಕಾಲ ಕ್ರಮಿಸಿ ಬರಲಾಯಿತು.

ಸ್ಥಳೀಯ ಮಾರ್ಗದರ್ಶಕರಾಗಿ ಜೊತೆಗಿದ್ದ ಶಾಂತೇಗೌಡ ಮತ್ತು ರತ್ನವರ್ಮರಿಂದ ಅಲ್ಲಿನ ವಿಶೇಷತೆಗಳ ಬಗ್ಗೆ ಉಪಯುಕ್ತ ಮಾಹಿತಿ ಪಡೆದುಕೊಳ್ಳಲಾಯಿತು. ಹಿಂದೆ ಬ್ರಿಟೀಷ್ ಆಳ್ವಿಕೆಯಲ್ಲಿ ಅಲ್ಲಿನ ಜನ ಜೀವನ, ಕಡಿದಾದ ಗುಡ್ಡಗಳಲ್ಲಿ ರಸ್ತೆಗಳನ್ನು ನಿರ್ಮಿಸಿ, ಎತ್ತು ಕುದುರೆಗಳ ಮೂಲಕ ವಸ್ತುಗಳನ್ನು ಸಾಗಿಸಿ, ಶಿಖರದ ಮೇಲೆ ಬಂಗಲೆ ನಿರ್ಮಿಸಿದ ಬಗ್ಗೆ; ಆಗ ಬ್ರಿಟಿಷರಿಂದ ಬಳುವಳಿ ಪಡೆದುಕೊಂಡಿದ್ದ ಭೂಮಿಯಲ್ಲಿ ವಾಸವಾಗಿದ್ದು ಸುಮಾರು 30 ವರ್ಷ ಹಿಂದಿನವರೆಗೂ ಭತ್ತ ಇತ್ಯಾದಿ ಕೃಷಿ ಮಾಡಿಕೊಂಡಿದ್ದ ಬೆಳ್ತಂಗಡಿ ಮೂಲದ ರೈತ ಸಾಧಕರ ಬಗ್ಗೆ ತಿಳಿಸಿದರು. ಸಾಕ್ಷಿಯಾಗಿ ಇಂದಿಗೂ ಅಲ್ಲಿ ಶಿಥಿಲಗೊಂಡು ಉಳಿದಿರುವ ಹಳೆ ಬ್ರಿಟೀಷ್ ಬಂಗಲೆಯನ್ನು ತೋರಿಸಿದರು. ಶಿಖರಗಳ ನಡುವೆ ಅರಣ್ಯವಾಗಿ ಬದಲಾದ ಕೃಷಿಭೂಮಿ ಕುರುಹಾಗಿ ಅಳಿದುಳಿದ ಅಡಿಕೆ, ಕಾಫಿ ಮತ್ತು ಗುಲಾಬಿ ಇನ್ನಿತರ ಗಿಡಗಳನ್ನು ಪರಿಚಯಿಸಿಕೊಂಡು ಅಲ್ಲಿನ ಕೆಲವು ವಿಶಿಷ್ಟ ಔಷದೀಯ ಸಸ್ಯಗಳು, ವನ್ಯ ಪ್ರಾಣಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು. ಕೆಲವು ವರ್ಷಗಳ ಹಿಂದೆ ಅರಣ್ಯ ಇಲಾಖೆ ಕಾಡಿನ ಜಾಗವನ್ನು ವಶಪಡಿಸಿಕೊಂಡ ಸಂದರ್ಭ ಅಲ್ಲಿನ ರೈತರ ನಡುವೆ ನಕ್ಸಲೈಟ್ ಬಂದು ಹೋದಾಗಿನ ಪರಿಸ್ಥಿತಿಗಳ ಬಗ್ಗೆ ವಿವರಿಸಿದರು. ಜೀವವಿಜ್ಞಾನ ವಿದ್ಯಾರ್ಥಿಗಳಿಗೆ ಪರಿಸರ ಶಿಕ್ಷಣ ಮತ್ತು ನಿಸರ್ಗದೊಂದಿಗೆ ಬೆರೆತು ನಡೆಯುವ ಅವಕಾಶ ಕಲ್ಪಿಸಿದ ಈ ಚಾರಣವನ್ನು ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಹಾಗೂ ನೇಚರ್ ಕ್ಲಬ್ ಸಂಯೋಜಕ ಕುಲದೀಪ್ ಪೆಲ್ತಡ್ಕ ಮತ್ತು ಉಪನ್ಯಾಸಕ ಅಜಿತ್ ಕುಮಾರ್ ಆಯೋಜಿಸಿದ್ದರು. ಬೋಧಕೇತರ ಸಿಬ್ಬಂದಿಗಳಾದ ಅರುಣ್ ಕುಮಾರ್, ಕಮಲಾಕ್ಷ ಮತ್ತು ಭವ್ಯಶ್ರೀ ಸಹಕರಿಸಿದರು.