ಸುದ್ದಿ ಸೌಹಾರ್ದ ಸಹಕಾರಿಯ ಸುಳ್ಯ ಶಾಖೆ ಜನವರಿಯಲ್ಲಿ ಉದ್ಘಾಟನೆ
ಸಲಹಾ ಸಮಿತಿ ರಚನೆ – ನಿತ್ಯಾನಂದ ಮುಂಡೋಡಿ ಅಧ್ಯಕ್ಷ

0

ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸುದ್ದಿ ಸೌಹಾರ್ದ ಸಹಕಾರಿ (ರಿ.) ಸಂಸ್ಥೆಯ ಶಾಖೆ ಸುಳ್ಯದಲ್ಲಿ ಜನವರಿಯಲ್ಲಿ ಶುಭಾರಂಭಗೊಳ್ಳಲಿದ್ದು, ಸುಳ್ಯ ಶಾಖೆಯ ಸಲಹಾ ಸಮಿತಿ ಸಭೆ ದ. 15ರಂದು ನಡೆಯಿತು.
ಸುದ್ದಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಡಾ.ಯು.ಪಿ. ಶಿವಾನಂದರ ಅಧ್ಯಕ್ಷತೆಯಲ್ಲಿ ಸುದ್ದಿ ಬಿಡುಗಡೆ ಪತ್ರಿಕಾ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಸಹಕಾರಿ ಸಂಸ್ಥೆಯ ಉಪಾಧ್ಯಕ್ಷರಾದ ಯು.ಪಿ. ರಾಮಕೃಷ್ಣರು ನಿರ್ದೇಶಕರುಗಳಾದ ನ್ಯಾಯವಾದಿ ಜಗನ್ನಿವಾಸ ರಾವ್, ಶ್ರೀಮತಿ ಸ್ವಾತಿ ಮಲ್ಲಾರ, ಹರೀಶ್ ಬಂಟ್ವಾಳ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರೇಂದ್ರ ರಾವ್, ಸಲಹಾ ಸಮಿತಿ ಸದಸ್ಯರುಗಳಾದ ನಿತ್ಯಾನಂದ ಮುಂಡೋಡಿ, ಡಾ. ಎಸ್. ರಂಗಯ್ಯ, ಶ್ರೀಮತಿ ರೇಣುಕಾ ಸದಾನಂದ ಜಾಕೆ, ಶ್ರೀಮತಿ ರೂಪ ಶ್ರೀ ಜೆ. ರೈ, ಅಬ್ದುಲ್ ಗಫೂರ್ ಕಲ್ಮಡ್ಕ, ರಾಮಚಂದ್ರ ಪಲ್ಲತಡ್ಕ ಐವರ್ನಾಡು, ಸುಧಾಮ ಆಲೆಟ್ಟಿ, ವಿಶ್ವನಾಥ ನಾಯರ್ ಅರಂಬೂರು, ದಿನೇಶ್ ಮಡ್ತಿಲ, ಸಂತೋಷ್ ಜಾಕೆ ಮತ್ತು ಯಶ್ವಿತ್ ಕಾಳಮ್ಮನೆ, ಸುದ್ದಿ ಸೌಹಾರ್ದ ಸೊಸೈಟಿ ಸುಳ್ಯ ಶಾಖಾ ಸಿಬ್ಬಂದಿಗಳಾದ ಚೇತನ್ ಬುಡ್ಲೆಗುತ್ತು ಹಾಗೂ ಅನ್ವಿತಾ ಸಂಪ್ಯಾಡಿ ಉಪಸ್ಥಿತರಿದ್ದರು.
” 2015 ರಲ್ಲಿ ಆರಂಭವಾದ ಸುದ್ದಿ ಸೌಹಾರ್ದ ಸಹಕಾರಿ ಸಂಸ್ಥೆಯು ಪ್ರಥಮ ವರ್ಷದಿಂದಲೇ ಉತ್ತಮ ರೀತಿಯ ವ್ಯವಹಾರದ ಮೂಲಕ ಲಾಭದಲ್ಲಿ ಮುನ್ನಡೆಯುತ್ತಿದೆ. ಈಗ ಸೊಸೈಟಿಯಲ್ಲಿ 8.9 ಕೋಟಿ ರೂ. ಡಿಪಾಸಿಟ್ ಇದ್ದು, 7.92 ಕೋಟಿ ರೂ. ಸಾಲ ನೀಡಲಾಗಿದೆ. ಶೇ.95 ಸಾಲ ವಸೂಲಾತಿಯಾಗಿದ್ದು, ಕಳೆದ ಸಹಕಾರಿ ವರ್ಷದಲ್ಲಿ ಶೇ.11 ಡಿವಿಡೆಂಟ್ ನೀಡಲಾಗಿದೆ” ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರೇಂದ್ರ ರಾವ್ ಸಲಹಾ ಸಮಿತಿ ಸದಸ್ಯರಿಗೆ ತಿಳಿಸಿದರು.
ನಿರ್ದೇಶಕರಾದ ಜಗನ್ನಿವಾಸ ರಾವ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ” ಸುದ್ದಿ ಸೌಹಾರ್ದ ಸಹಕಾರಿಯ ಕಾರ್ಯವಿಧಾನ ಹಾಗೂ ಅಧ್ಯಕ್ಷರು ಮತ್ತು ಮುಖ್ಯಕಾರ್ಯ ನಿರ್ವಹಣಾಧಿಕಾರಿಯವರು ಸಂಘದ ಏಳಿಗೆಗೆ ಶ್ರಮಿಸುತ್ತಿರುವ ಬಗ್ಗೆ” ವಿವರಿಸಿದರು. ಉಪಾಧ್ಯಕ್ಷ ಯು.ಪಿ. ರಾಮಕೃಷ್ಣರು ” ಸುದ್ದಿ ಸೌಹಾರ್ದ ಸಹಕಾರಿಯಲ್ಲಿ ಶೀಘ್ರಗತಿಯಲ್ಲಿ ಸಾಲದ ಮನವಿಗಳು ಇತ್ಯರ್ಥಗೊಳ್ಳುವ ಬಗ್ಗೆ ವಿವರಿಸಿದರಲ್ಲದೆ, ಸುಳ್ಯದಲ್ಲಿ ಶಾಖೆ ತೆರೆಯಲಿರುವ ಹಿನ್ನೆಲೆಯಲ್ಲಿ ಜನವರಿಯಲ್ಲಿ ಡೆಪಾಸಿಟ್ ಇರಿಸುವ ಹಿರಿಯ ನಾಗರಿಕರಿಗೆ ಶೇ.9.5 ಹಾಗೂ ಇತರರಿಗೆ ಶೇ. 9 ಬಡ್ಡಿ ಕೊಡಲು ನಿರ್ಧರಿಸಲಾಗಿದೆ” ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಡಾ.ಯು.ಪಿ. ಶಿವಾನಂದರು ಸುದ್ದಿ ಸೌಹಾರ್ದ ಸಹಕಾರಿಯ ಆರಂಭ ಮತ್ತು ಬೆಳವಣಿಗೆಯ ಬಗ್ಗೆ ವಿವರಿಸಿ, ‘ ಸುಳ್ಯದಲ್ಲಿ ಶಾಖೆ ತೆರೆಯಲು ನಡೆದಿರುವ ತಯಾರಿಯನ್ನು ಹೇಳಿದರಲ್ಲದೆ, ಮುಂದಿನ ವರ್ಷ ಬೆಳ್ತಂಗಡಿ ಮತ್ತು ಇತರೆಡೆ ಶಾಖೆ ತೆರೆಯುವುದಾಗಿ’ ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ ಸಲಹಾ ಸಮಿತಿಯ ಎಲ್ಲಾ ಸದಸ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿದರಲ್ಲದೆ, ಸಲಹೆಗಳನ್ನು ನೀಡಿದರು. ಸಲಹಾ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಸಹಕಾರಿಗಳಾದ ಸಹಕಾರ ರತ್ನ ನಿತ್ಯಾನಂದ ಮುಂಡೋಡಿಯವರು ಅವಿರೋಧವಾಗಿ ಆಯ್ಕೆಯಾದರು.
ಸುಳ್ಯದಲ್ಲಿ ಸುದ್ದಿ ಸೌಹಾರ್ದದ ಶಾಖೆಯಲ್ಲಿ ಜನವರಿ ತಿಂಗಳಲ್ಲಿ ತೆರೆಯುವುದೆಂದು ನಿರ್ಧರಿಸಲಾಯಿತು. ನಿರ್ದೇಶಕ ಹರೀಶ್ ಬಂಟ್ವಾಳ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಿ.ಇ.ಒ. ನರೇಂದ್ರ ರಾವ್ ವಂದಿಸಿದರು.
ಸುಳ್ಯದ ಮುಖ್ಯರಸ್ತೆಯ ಬದಿ ದ್ವಾರಕಾ ಹೋಟೆಲ್ ನ ಪಕ್ಕದಲ್ಲಿರುವ ರಾಜಾರಾಮ್ ಕಾಂಪ್ಲೆಕ್ಸ್ ನ ಮಹಡಿಯಲ್ಲಿ ಸುದ್ದಿ ಸೌಹಾರ್ದ ಸಹಕಾರಿ ಶುಭಾರಂಭಗೊಳ್ಳಲಿದ್ದು, ಅಧ್ಯಕ್ಷರು ಮತ್ತು ನಿರ್ದೇಶಕರು ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದರು.