ಕುಮಾರಸ್ವಾಮಿ ವಿದ್ಯಾಲಯದ ರಜತ ಸಂಭ್ರಮ ಸಮಾರೋಪ : ಕುಮಾರ ಪರ್ವ ಕಾರ್ಯಕ್ರಮ ಸಂಪನ್ನ, ಪ್ರತಿಭೆ ಮತ್ತು ಸಾಧನೆಯ ಸಂಗಮ ಕುಮಾರ ಸ್ವಾಮಿ ವಿದ್ಯಾಲಯ: ಡಾ. ಯಡಪಡಿತ್ತಾಯ ಪ್ರಶಂಸೆ, ಜೀವನ ಶಿಕ್ಷಣ ಗುಣ ಮಟ್ಟದ ಶಿಕ್ಷಣದ ಭಾಗವಾಗಬೇಕು: ಭೋಜೇ ಗೌಡ

0

ಪ್ರತಿಭೆ ಮತ್ತು ಸಾಧನೆಗಳ ಸಂಗಮ ವಾಗಿರುವ ಕುಮಾರ ಸ್ವಾಮಿ ವಿದ್ಯಾ ಸಂಸ್ಥೆ ಪುಣ್ಯ ಕ್ಷೇತ್ರದಲ್ಲಿ ಪುಣ್ಯದ ಕಾರ್ಯ ಮಾಡುತ್ತಿದೆ. ಯಶಸ್ಸಿನ ಹಾದಿಯಲ್ಲಿ ಉನ್ನತ ಸಾಧನೆ ಮಾಡಲು ರಜತ ಸಂಭ್ರಮ ಪ್ರೇರಣೆ ನೀಡುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಪಿ.ಎಸ್. ಯಡಪಡಿತ್ತಾಯ ಹೇಳಿದರು.

ಅವರು ಕುಕ್ಕೆ ಸುಬ್ರಹ್ಮಣ್ಯದ ಅನುಗ್ರಹ ಎಜ್ಯುಕೇಶನ್ ಟ್ರಸ್ಟ್‌ನಿಂದ ಪ್ರವರ್ತಿತವಾಗಿರುವ ಕುಮಾರಸ್ವಾಮಿ ವಿದ್ಯಾಲಯದ ರಜತ ಸಂಭ್ರಮ ಕಾರ್ಯಕ್ರಮ ಕುಮಾರ ಪರ್ವ -2022 ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಎಚ್. ಎಲ್ ಭೋಜೇಗೌಡ ಮಾತನಾಡಿ ಭಾವೈಕ್ಯತೆಯ ನಾಡಲ್ಲಿ ಅದಕ್ಕೆ ಅರ್ಥ ತುಂಬುವ ಕೆಲಸವನ್ನು ಕುಮಾರಸ್ವಾಮಿ ವಿದ್ಯಾಲಯ ಮಾಡಿದೆ ಎಂದು ಶ್ಲಾಘಿಸಿದರು.

ಜೀವನದ ಶಿಕ್ಷಣ ಕಲಿತರೆ ಮಾತ್ರ ಗುಣಮಟ್ಟದ ಶಿಕ್ಷಣಕ್ಕೆ ಅರ್ಥ. ಆ ಕಾರ್ಯವನ್ನು ವಿದ್ಯಾಸಂಸ್ಥೆಗಳು ಮಾಡಬೇಕಾಗಿದೆ ಎಂದವರು ಹೇಳಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ಹಿರಿಯ ಸಹಕಾರಿ ಜಾಕೆ ಮಾಧವ ಗೌಡ, ಭಾರತೀಯ ರಬ್ಬರ್ ಮಂಡಳಿಯ ನಿರ್ದೇಶಕ ಮುಳಿಯ ಕೇಶವ ಭಟ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯೆ ವನಜಾ ಭಟ್ ಅತಿಥಿಗಳಾಗಿ ಭಾಗವಹಿಸಿದ್ದರು.

ಅನುಗ್ರಹ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಗಣೇಶ್ ಪ್ರಸಾದ್ ಎನ್., ಕುಮಾರಸ್ವಾಮಿ ವಿದ್ಯಾಲಯದ ಸಂಚಾಲಕ ಚಂದ್ರಶೇಖರ ಎನ್.ಕೆ., ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಶಿವರಾಮ ಏನೆಕಲ್, ಶಾಲಾ ಮುಖ್ಯ ಶಿಕ್ಷಕಿ ವಿದ್ಯಾರತ್ನ ಎಚ್., ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ. ಸಂಕೀರ್ತ್ ಹೆಬ್ಬಾರ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರಸಾದ್ ಮುನಿಯಂಗಳ, ಆಡಳಿತ ಮಂಡಳಿ ಸದಸ್ಯರಾದ ವೆಂಕಟ್ರಾಜ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ತೀರ್ಥೇಶ್ ಪಾರೆಪ್ಪಾಡಿ, ವಿದ್ಯಾರ್ಥಿ ನಾಯಕ ಕಾರ್ತಿಕ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಗುರುವಂದನೆ ಕಾರ್ಯಕ್ರಮ ನಡೆಯಿತು. ಮುಖ್ಯ ಶಿಕ್ಷಕಿ ವಿದ್ಯಾರತ್ನ, ಪ್ರಾಂಶುಪಾಲ ಡಾ. ಸಂಕೀರ್ತ್ ಹೆಬ್ಬಾರ್ ಹಾಗೂ ಎಲ್ಲ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಸಿಬ್ಬಂದಿ ವರ್ಗ, ಆಯಾ ವೃಂದ ಹಾಗೂ ಚಾಲಕ ವೃಂದದವರನ್ನೂ ಗೌರವಿಸಲಾಯಿತು.

ಶಿಕ್ಷಕ ರಕ್ಷಕ ಸಂಘದ ವತಿಯಿಂದ ಶ್ರೀಮತಿ ಭಾರ್ಗವಿ ಕುಮಾರ ನಾಯರ್ , ಗಣೇಶ್ ಪ್ರಸಾದ್ ಮತ್ತು ಚಂದ್ರಶೇಖರ ನಾಯರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀಮತಿ ಭಾರತಿ ದಿನೇಶ್ ಸನ್ಮಾನ ಪತ್ರ ವಾಚಿಸಿದರು. ಹಿರಿಯ ವಿದ್ಯಾರ್ಥಿಗಳಾದ ಮನುದೇವ ಪರಮಲೆ ಮತ್ತು ಶ್ರೀಮತಿ ಪ್ರತಿಜ್ಞಾ ಗುರುವಂದನೆ ಕಾರ್ಯಕ್ರಮ ನಿರೂಪಿಸಿದರು.

ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಶಿವರಾಮ ಏನೆಕಲ್, ಸಂಸ್ಥೆಯ ಪ್ರಥಮ ವಿದ್ಯಾರ್ಥಿ ಸ್ಮಿತಾ ಎ.ಟಿ. ಅವರನ್ನೂ ಸನ್ಮಾನಿಸಲಾಯಿತು.
ಗಣೇಶ್ ಪ್ರಸಾದ್ ಎನ್ ಸ್ವಾಗತಿಸಿ ಪ್ರಸ್ತಾವನೆಗೈದರು.