ಸುಳ್ಯ :ಅಪರಾಧ ತಡೆ ಮಾಸಾಚರಣೆ 2022 ಅಂಗವಾಗಿ ಜಾಗೃತಿ ಅರಿವು ಕಾಲ್ನಡಿಗೆ ಜಾಥಾ

0

ಸುಳ್ಯ ಪೊಲೀಸ್ ಇಲಾಖೆ ವತಿಯಿಂದ ರಾಜ್ಯದಾದ್ಯಂತ ನಡೆಯುತ್ತಿರುವ ಅಪರಾಧ ತಡೆ ಮಾಸಾಚರಣೆ 2022 ಅಂಗವಾಗಿ ಇಂದು ನಗರದ ಮುಖ್ಯಬೀದಿಗಳಲ್ಲಿ ಜಾಗೃತಿ ಅರಿವು ಕಾಲ್ನಡಿಗೆ ಜಾಥಾ ಹಾಗೂ ಮಾಹಿತಿ ಅರಿವು ಕಾರ್ಯಕ್ರಮ ನಡೆಯಿತು.
ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ರವರ ನೇತೃತ್ವದಲ್ಲಿ ಜ್ಯೋತಿ ಸರ್ಕಲ್ ನಿಂದ ಗಾಂಧಿನಗರದವರೆಗೆ ಕಾಲ್ನಡಿಗೆ ಮೂಲಕ ಸಂಚರಿಸಿ ನಗರದ ಪ್ರಮುಖ ಸ್ಥಳಗಳಲ್ಲಿ ಜಾಗೃತಿ ಅರಿವು ನೀಡುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.

ತಮ್ಮ ತಮ್ಮ ಊರುಗಳಲ್ಲಿ ಅಪರಿಚಿತ ವ್ಯಕ್ತಿಗಳು, ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಅವರೊಂದಿಗೆ ಸಲಿಗೆಯನ್ನು ಬೆಳೆಸದೆ ಕೂಡಲೇ ಪೊಲೀಸರ ಗಮನಕ್ಕೆ ತರುವಂತೆ, ಮತ್ತು ಬೇರೆ ಬೇರೆ ಕಾರ್ಯಕ್ರಮಗಳ ನಿಮಿತ್ತ ಮನೆಗಳನ್ನು ಬಂದು ಮಾಡಿ ಬೇರೆ ಕಡೆ ಹೋಗುವ ಸಂದರ್ಭದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕ ಕ್ರಮಗಳಬಗ್ಗೆ ಮಾಹಿತಿಯನ್ನು ನೀಡಿ ಮಹಿಳೆಯರು ಮಕ್ಕಳು ಮಾತ್ರ ಮನೆಯಲ್ಲಿರುವಾಗ ಪಾಲಿಸಬೇಕಾದ ನಿಯಮಗಳು, ವಾಹನ ಕಳವು ನಿಷೇಧ ಮುನ್ನೆಚ್ಚರಿಕೆಗಳು, ಸುಲಿಗೆ ನಿರೋಧಕ ಮುನ್ನೆಚ್ಚರಿಕೆಗಳು,ಪ್ರಾಮಾಣಿಕವಾಗಿ ಪಾಲಿಸಬೇಕಾದ ನಿಯಮಗಳು, ಸೈಬರ್ ಅಪರಾಧ ಮುನ್ನೆಚ್ಚರಿಕೆಗಳು ಮುಂತಾದ ವಿಷಯಗಳ ಕುರಿತು ಜಾಗೃತಿ ಅರಿವು ನೀಡಲಾಯಿತು.
ಅಲ್ಲದೆ ತಮ್ಮ ತಮ್ಮ ಗ್ರಾಮಗಳಲ್ಲಿ ಅಥವಾ ಮನೆಯ ಪರಿಸರದಲ್ಲಿ ಅಪರಿಚಿತ ವಾಹನಗಳು ಓಡಾಡುವುದನ್ನು ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಿದರು.
ಅಪರಾಧ ತಡೆಗಳಿಗಾಗಿ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಿಕೊಂಡರು.
ಜಾತಾದಲ್ಲಿ ಸುಳ್ಯದ ಆಟೋ ಚಾಲಕರು, ಟೂರಿಸ್ಟ್ ವ್ಯಾನ್ ಮತ್ತು ಕಾರು ಚಾಲಕರು ಸಾರ್ವಜನಿಕರು ಭಾಗವಹಿಸಿದ್ದರು.
ಸುಳ್ಯ ಠಾಣಾ ಪ್ರೊಬೆಷನರಿ ಎಸ್ ಐ, ಅಪರಾಧ ವಿಭಾಗದ ಎಸ್ ಐ ರತ್ನಕುಮಾರ್, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.