ಹಿಂದೂ ಧರ್ಮೀಯರ ಬಗ್ಗೆ ಕಾಳಜಿ, ಅನುಕಂಪ, ಗೌರವ ಇದ್ದರೆ ಜಾತ್ರೆ ಸಂತೆಯಲ್ಲಿ ಬಡ ಹಿಂದೂ ವ್ಯಾಪಾರಿಗಳಿಗೆ ಶುಲ್ಕ ವಿಧಿಸದೆ ಅವಕಾಶ ಕಲ್ಪಿಸಿ: ಭರತ್‌ ಮುಂಡೋಡಿ

0

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದ
ಸಂತೆಯಲ್ಲಿ ಬೀದಿ ಬದಿ ವ್ಯಾಪಾರ ಮಾಡುವ ಹಿಂದೂಗಳು ಬಡ ವ್ಯಾಪಾರಿಗಳಾಗಿದ್ದು ಅವರಿಗೆ ಯಾವುದೇ ಶುಲ್ಕ ವಿಧಿಸದೆ ಉಚಿತ ವ್ಯಾಪಾರಕ್ಕೆ ಅವಕಾಶ ಮಾಡಿ ಕೊಡಬೇಕು ಎಂದು ಕೆಪಿಸಿಸಿ ವಕ್ತಾರ ಭರತ್ ಮುಂಡೋಡಿ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬೇಡಿಕೆಯ ಮನವಿಯನ್ನು ದೇವಸ್ಥಾನಕ್ಕೆ ನೀಡಲಾಗುವುದು.

‘ವ್ಯಾಪಾರ ಮಾಡಲು ಸಂತೆಯಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಎಂದು ಮೊದಲು ಸಭೆಯಲ್ಲಿ ನಿರ್ಧರಿಸಿ ನಂತರ ಹಿಂದುಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ, ಇತರ ಧರ್ಮದವರಿಗೆ ಸಂತೆಯಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ ಎಂಬ ನಿರ್ಧಾರವನ್ನು ದೇವಸ್ಥಾನದ ಆಡಳಿತ ಮಂಡಳಿ ಕೈಗೊಂಡಿರುವುದು ದುರದೃಷ್ಟಕರ. ಇದು ಹಿಂದೂಗಳಿಗೆ ಸಹಾಯ ಮಾಡುವ ಉದ್ದೇಶವೇ ಆಗಿದ್ದರೆ ಸಂತೆ ವ್ಯಾಪಾರಕ್ಕೆ ಬರುವ ಬಡ ಹಿಂದೂ ವ್ಯಾಪಾರಸ್ಥರಿಗೆ ಯಾವುದೇ ಶುಲ್ಕ ವಿಧಿಸದೆ ಅವಕಾಶ ಕಲ್ಪಿಸಬೇಕು. ಮಾತ್ರವಲ್ಲದೆ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸಲು ಶುಲ್ಕ ವಿಧಿಸುವುದು ಸರಿಯಲ್ಲ. ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನಗಳ ಸಂತೆ ವ್ಯಾಪಾರಕ್ಕೆ ಶುಲ್ಕ ಯಾವುದೇ ಶುಲ್ಕ ವಿಧಿಸದೆ ಉಚಿತವಾಗಿ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ನಮ್ಮ ಮನವಿ ಎಂದು ಅವರು ಹೇಳಿದರು.

ಸಂತೆಯಲ್ಲಿ ತಲ ತಲಾಂತರಗಳಿಂದ ಎಲ್ಲರೂ ಒಟ್ಟಾಗಿ ವ್ಯಾಪಾರ ವಹಿವಾಟು ನಡೆಸುವುದು ಸಂಪ್ರದಾಯ ಹಾಗೂ ಹಿಂದೂ ಧರ್ಮದ ಹೃದಯ ವೈಶಾಲ್ಯತೆಗೆ ಇದು ಸಾಕ್ಷಿ. ಹಿಂದೂ ಧರ್ಮದ ದೇವಸ್ಥಾನಗಳ ವಾರ್ಷಿಕ ಉತ್ಸವವನ್ನು “ಜಾತ್ರೋತ್ಸವ” ಎಂದು ಕರೆಯಲಾಗಿದೆ “ಜಾತ್ರೋತ್ಸವ” ಎಂದರೆ ಊರಿನ ಸರ್ವ ಧರ್ಮಿಯರು ಸಂತೋಷಭರಿತರಾಗಿ ಸಹೋದರತ್ವದಿಂದ ದೇವರನ್ನು ಆರಾಧಿಸುವುದೇ ಜಾತ್ರೋತ್ಸವ, ಇದುವರೇಗೆ ಎಲ್ಲೂ “ಹಿಂದೂ ಧಾರ್ಮಿಕೋತ್ಸವ ಎಂದು ಕರೆಯಲಿಲ್ಲ”. ಇದು ಹಿಂದಿನಿಂದ ಬಂದ ಪರಂಪರೆ, ಅದಕ್ಕೆ ಹಿಂದೂ ಧರ್ಮದಲ್ಲಿ ‘ವಸುದೈವ ಕುಟುಂಬಕಂ’ ಎಂಬುದಕ್ಕೆ ಮಹತ್ವ ನೀಡಲಾಗಿದೆ ಎಂದು ಭರತ್ ಮುಂಡೋಡಿ ಹೇಳಿದರು.


ಅನ್ಯ ಧರ್ಮೀಯರ ಮತ ಬೇಡ ಎಂದು ಬಿಜೆಪಿ ಘೋಷಿಸಲಿ:


ವ್ಯಾಪಾರ ವ್ಯವಹಾರ ನಡೆಸಲು ಅನ್ಯ ಧರ್ಮೀಯರಿಗೆ ಅವಕಾಶ ನೀಡಬಾರದು ಎಂಬುದು ಸಚಿವರ ಮತ್ತು ಬಿಜೆಪಿ ಅಧ್ಯಕ್ಷರ ನಿಲುವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಭರತ್ ಮುಂಡೋಡಿ ಆಗ್ರಹಿಸಿದರು. ಒಂದು ವೇಳೆ ಅವರದ್ದು ಹಾಗೂ ಅವರ ಪಕ್ಷ ಭಾರತೀಯ ಜನತಾ ಪಕ್ಷದ್ದು ಇದುವೇ ನಿಲುವು ಎಂತಾದರೆ ಅನ್ಯ ಧರ್ಮದವರ ಮತ ಬೇಡ, ಮುಂದಿನ ಚುನಾವಣೆಯಲ್ಲಿ ಅನ್ಯಧರ್ಮೀಯರ ಮತ ಯಾಚಿಸುವುದಿಲ್ಲ ಮತ್ತು ಅವರ ಜೊತೆ ಮುಂದಿನ ದಿನಗಳಲ್ಲಿ ಯಾವುದೇ ವ್ಯಾಪಾರ ವ್ಯವಹಾರ ನಡೆಸುವುದಿಲ್ಲ ಎಂದು ಘೋಷಿಸಲಿ.


ಅಲ್ಲದೆ ಬಿಜೆಪಿಯ ಅಲ್ಪಸಂಖ್ಯಾತ ಘಟಕವನ್ನು ಕೇಂದ್ರ, ರಾಜ್ಯ ಹಾಗೂ ಮಂಡಲ ಸಮಿತಿಗಳನ್ನು ವಿಸರ್ಜಿಸಬೇಕು ಎಂದು ಭರತ್ ಮುಂಡೋಡಿ ಆಗ್ರಹಿಸಿದರು.


ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ, ಕಾಂಗ್ರೆಸ್ ವಕ್ತಾರ ನಂದರಾಜ ಸಂಕೇಶ ಉಪಸ್ಥಿತರಿದ್ದರು.