ಸುಳ್ಯ ಶ್ರೀ ಚೆನ್ನಕೇಶವ ದೇವರ ವೈಭವದ ರಥೋತ್ಸವ, *ರಥೋತ್ಸವ ಕಣ್ತುಂಬಿಕೊಂಡ ಸಾವಿರಾರು ಭಕ್ತರು

0

ಸುಳ್ಯ ಶ್ರೀ ಚೆನ್ನಕೇಶವ ದೇವರ ವೈಭವದ ರಥೋತ್ಸವವು ಜ.11 ರಂದು ರಾತ್ರಿ ನಡೆಯಿತು. ಸಾವಿರಾರು ಮಂದಿ ಭಕ್ತರ ಕಂಠದಿಂದ ಹೊರ ಹೊಮ್ಮಿದ ಚೆನ್ನಕೇಶವನಿಗೆ ಗೋವಿಂದ, ಗೋವಿಂದ ಜಯ ಘೋಷದ ಮಧ್ಯೆ, ಮೊಳಗಿದ ಮಂತ್ರ ಘೋಷದಲಿ ಭಕ್ತಿ ಸಡಗರದಿಂದ ರಥೋತ್ಸವ ನಡೆಯಿತು.

ದೇವಸ್ಥಾನಕ್ಕೆ ಕಲ್ಕುಡ ಭಂಡಾರ ಆಗಮಿಸಿದ ಬಳಿಕ ಕಲ್ಕುಡ ದೈವ ಮತ್ತು ಕಾನತ್ತಿಲ ದೈವದ ಕೋಲಗಳು ನಡೆದವು. ದೇವಸ್ಥಾನದಲ್ಲಿವಿಶೇಷ ಪೂಜೆ ಮತ್ತು ಉತ್ಸವ ಬಲಿ ನಡೆದು ಚೆನ್ನಕೇಶವ ದೇವರನ್ನು ರಥದಲ್ಲಿ ಕುಳ್ಳಿರಿಸಲಾಯಿತು.ರಥದಲ್ಲಿ ವಿಶೇಷ ಪೂಜೆಯ ಬಳಿಕ ರಥವು ರಥಬೀದಿಯಲ್ಲಿ ಭಕ್ತ ಸಾಗರದ ಮಧ್ಯೆ ಸಾಗಿ ಬಂದಿತು. ಕಲ್ಕುಡ ದೈವ ಮತ್ತು ಕಾನತ್ತಿಲ ದೈವದ ಕೋಲಗಳು ರಥೋತ್ಸವದ ಜೊತೆಯಲ್ಲಿ ಆಗಮಿಸಿತು.ಸಾವಿರಾರು ಭಕ್ತರ ಮುಗಿಲು ಮುಟ್ಟಿದ ಉದ್ಘಾರದ, ಮಂತ್ರ ಘೋಷಗಳ ಮಧ್ಯೆ ರಥಬೀದಿಯಲ್ಲಿ ಸಾಗಿ ಬಂದ ರಥವು ಮುಖ್ಯ ರಸ್ತೆಯ ಬಳಿಯ ಕಟ್ಟೆಗೆ ಆಗಮಿಸಿತು.

ಚೆನ್ನಕೇಶವ ದೇವರನ್ನು ರಥದಿಂದ ಇಳಿಸಿ ಶೃಂಗರಿಸಿದ್ದ ಕಟ್ಟೆಯಲ್ಲಿ ಕುಳ್ಳಿರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.ಪೂಜೆ ನಡೆದು ಪ್ರಸಾದ ವಿತರಿಸಿದ ಬಳಿಕ ದೇವರು ರಥದಲ್ಲಿ ದೇವಾಲಯಕ್ಕೆ ಹಿಂತಿರುಗಿತು. ರಥ ಬೀದಿಯುದ್ದಕ್ಕೂ ನೆರೆದ ಸಾವಿರಾರು ಮಂದಿ ಭಕ್ತರು ಚೆನ್ನಕೇಶವ ಸ್ವಾಮಿಯ ವೈಭವದ ರಥೋತ್ಸವವನ್ನು ಕಣ್ತುಂಬಿಕೊಂಡರು.