ಸಂಪಾಜೆ ಗ್ರಾಮ ಪಂಚಾಯತ್ ನ ಮೂವರು ಸದಸ್ಯರ ರಾಜೀನಾಮೆ ಅಂಗೀಕಾರಕ್ಕೆ ರಾಜ್ಯ ಹೈಕೋರ್ಟ್ ನಿಂದ ತಡೆಯಾಜ್ಞೆ

0

ಸಂಪಾಜೆ ಗ್ರಾಮ ಪಂಚಾಯತ್ ನ ಮೂವರು ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳಾದ ಶೌವಾದ್ ಗೂನಡ್ಕ, ಲಿಸ್ಸಿ ಮೊನಾಲಿಸಾ ಹಾಗೂ ವಿಮಲಾ ಪ್ರಸಾದ್ ಅವರ ರಾಜೀನಾಮೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ರವರು ಅಂಗೀಕರಿಸಿರುವುದಕ್ಕೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದಾಗಿ ವರದಿಯಾಗಿದೆ.
ತಾವು ನೀಡಿದ ರಾಜೀನಾಮೆಯನ್ನು ನಿಗದಿತ ದಿನಕ್ಕಿಂತ ಮೊದಲೇ ಹಿಂಪಡೆದಿದ್ದರೂ, ಅಧ್ಯಕ್ಷ ಜಿ.ಕೆ.ಹಮೀದ್ ರವರು ರಾಜೀನಾಮೆ ಅಂಗೀಕರಿಸಿ ದ್ವೇಷ ಸಾಧನೆ ಮಾಡಿದ್ದರು ಎಂದು ಆರೋಪಿಸಿ ಮೂವರು ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಮೂವರು ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರುಗಳ ಪರ ಹಿರಿಯ ವಕೀಲರು ಹಾಗೂ ಕೆ.ಪಿ.ಸಿ.ಸಿ.ಕಾನೂನು ವಿಭಾಗದ ಮುಖ್ಯಸ್ಥರಾದ ಎ.ಎಸ್.ಪೊನ್ನಣ್ಣ ಅವರು ವಾದ ಮಂಡಿಸಿದರು.

ಅಂಗೀಕಾರಕ್ಕೆ ತಡೆಯಾಜ್ಞೆಯನ್ನು ನೀಡಿದ ಹೈಕೋರ್ಟು, ಈ ಮೂವರು ಸದಸ್ಯರುಗಳು ಗ್ರಾಮ ಪಂಚಾಯತ್ ನ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗುವುದಕ್ಕೆ ಯಾವುದೇ ನಿರ್ಬಂಧವನ್ನು ಹೇರಬಾರದೆಂದು ಎ.ಎಸ್.ಪೊನ್ನಣ್ಣ ಅವರು ಮಾಡಿದ ಮನವಿಯನ್ನು
ಹೈಕೋರ್ಟ್ ಪುರಸ್ಕರಿಸಿರುವುದಾಗಿ ತಿಳಿದುಬಂದಿದೆ. ನಾಳೆ ನಡೆಯುವ ಗ್ರಾ.ಪಂ. ಮಾಸಿಕ ಸಭೆಗೆ ಈ ಮೂವರು ಹಾಜರಾಗಲಿರುವರೆಂದು ಹೇಳಲಾಗಿದೆ.