ಮಾರಕ ಕಾಯಿಲೆಯಿಂದ ಬಳಲುವ 11 ರ ಬಾಲಕನ ಚಿಕಿತ್ಸೆಗೆ ನೆರವು

0

ಬಾಲಕನ ಕುಟುಂಬಕ್ಕೆ ನೆರವಾಗಲು ಸಹೃದಯಿಗಳಲ್ಲಿ ಮನವಿ

ಕರುಣೆ ಬತ್ತದ ಕರಗಳಿಗೆ, ಸಹ ಜೀವಿಗಳ ನೋವಿಗೆ ಮಿಡಿಯುವ ಹೃದಯಗಳಲ್ಲಿ ಮುದ್ದು ಬಾಲಕನ ಚಿಕಿತ್ಸೆಗೆ ನೆರವಾಗಲು ಸುಳ್ಯದ ಪ್ರಮುಖರು ಮನವಿ ಮಾಡಿದ್ದಾರೆ. ನೆರವು ಕೋರಿ ಷಹಜಹಾನ್ ನಿಲಂಬೂರು ಅವರ ನೇತೃತ್ವದ ಗ್ಲೋಬಲ್ ಚಾರಿಟೇಬಲ್ ಟ್ರಸ್ಟ್ ತಂಡ ಸುಳ್ಯಕ್ಕೆ ಆಗಮಿಸಿ ನೆರವಿನ ಮನವಿಯ ವೀಡಿಯೋ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದಾರೆ. ಮಾರಕ ಕಾಯಿಲೆಯಿಂದ ಬಳಲಿ ಆಸ್ಪತ್ರೆ ಸೇರಿರುವ ತಸ್ವೀತ್ ಎಂಬ ಬಾಲಕನ ಚಿಕಿತ್ಸೆಗೆ ಮನವಿ ಮಾಡಲು ಅವರು ಈ ಬಾರಿ ಸುಳ್ಯಕ್ಕೆ ಆಗಮಿಸಿದ್ದಾರೆ. ಸುಳ್ಯದ ಅಂಬೆಟಡ್ಕದಲ್ಲಿ ವಾಸವಾಗಿರುವ ಗಣೇಶ್-ಜ್ಯೋತಿ ದಂಪತಿಗಳ ಪುತ್ರ 11 ವರ್ಷದ ತಸ್ವೀತ್ ಎಂಬ ಬಾಲಕ ಲಿಂಪೋಮಾ ಎಂಬ ಮಾರಕ ಕಾಯಿಲೆಯಿಂದ ಬಳಲಿ ಆಸ್ಪತ್ರೆ ಸೇರಿದ್ದಾರೆ. 4 ನೇ ತರಗತಿಯಲ್ಲಿ ಕಲಿಯುತ್ತಿರುವ ಪ್ರತಭಾವಂತ ವಿದ್ಯಾರ್ಥಿಯಾದ ತಸ್ವೀತ್ ಮಾರಕ ಕಾಯಿಲೆಯಿಂದ ಬಳಲಿ ಕಳೆದ 6 ತಿಂಗಳಿನಿಂದ ಚಿಕಿತ್ಸೆಯಲ್ಲಿದ್ದಾರೆ. ಮಲಗಿಲ್ಲಿಯೇ ನರಕ ಯಾತನೆ ಅನುಭವಿಸುವ ತಶ್ವಿತ್‌ನ ಮೈಯಲ್ಲಿ,ಮುಖದಲ್ಲಿ ದೊಡ್ಡ, ಊತಗಳು ಉಂಟಾಗಿ ವಿಪರೀತ ನೋವು ಅನುಭವಿಸುವ ಪರಿಸ್ಥಿತಿ ಇದೆ. ಈ ಕಾಯಿಲೆಗೆ ಸಮರ್ಪಕ ಚಿಕಿತ್ಸೆ ನೀಡಲು 25 ಲಕ್ಷಕ್ಕೂ ಮಿಕ್ಕಿ ಹಣ ಬೇಕಾಗಬಹುದು ಎಂದು ಡಾಕ್ಟರ್‌ಗಳು ಅಂದಾಜಿಸಿದ್ದಾರೆ. ಗಣೇಶರ ಬಡ ಕುಟುಂಬಕ್ಕೆ ಇಷ್ಟು ದೊಡ್ಡ ಮೊತ್ತವನ್ನು ಭರಿಸುವುದು ಕನಸಿನ ಮಾತು. ಈ ಹಿನ್ನಲೆಯಲ್ಲಿ ಸುಳ್ಯದ ಪ್ರಮುಖರು ತಿಳಿಸಿದ ಹಿನ್ನಲೆಯಲ್ಲಿ ಷಹಜಹಾನ್ ನಿಲಂಬೂರು ಮತ್ತು ತಂಡ ಆಗಮಿಸಿ ಬಾಲಕನ ರೋಗದ ವಿವರವನ್ನು ತಿಳಿಸಿ, ಪ್ರಮುಖರ‌‌ ಅಭಿಪ್ರಾಯವನ್ನು ದಾಖಲಿಸಿ ಚಿಕಿತ್ಸಾ ನೆರವು ನೀಡಲು ವೀಡಿಯೂ ಮೂಲಕ ವಿನಂತಿಸಿದ್ದಾರೆ. ಸುಳ್ಯದ ಹಲವು ಮಂದಿ ಪ್ರಮುಖರು ನೆರವು ನೀಡಿ, ವೀಡೀಯೋ ಮೂಲಕ ನೆರವಿಗಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಬಾಲಕನ ಚಿಕಿತ್ಸಾ ನೆರವಿಗಾಗಿ ಕುಟುಂಬದ ಖಾತೆ ಸಂಖ್ಯೆಯನ್ನೂ ನೀಡಲಾಗಿದೆ. ವಾಟ್ಸಾಪ್ ಗುಂಪು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವೀಡಿಯೋ ಹಂಚಲಾಗಿದೆ.

ಹಲವಾರು ಮಂದಿ ವೀಡಿಯೋವನ್ನು ಶೇರ್ ಮಾಡಿದ್ದಾರೆ ಮತ್ತು ಆರ್ಥಿಕ ನೆರವು ನೀಡಿದ್ದಾರೆ. ಪ್ರಮುಖರಾದ ಎಂ.ಬಿ.ಸದಾಶಿವ, ಕೆ.ಎಸ್.ಉಮ್ಮರ್, ಕೆ.ಎಂ.ಮುಸ್ತಫ ಮತ್ತಿತರರು ಬಾಲಕನ ಚಿಕಿತ್ಸೆಗೆ ನೆರವು ನೀಡಲು ವೀಡಿಯೋ ಮೂಲಕ ವಿನಂತಿಸಿದ್ದಾರೆ. ಪ್ರಮುಖರಾದ ಎಂ.ವೆಂಕಪ್ಪ ಗೌಡ, ಕೆ.ಗೋಕುಲ್‌ದಾಸ್, ಜೆ.ಕೆ.ರೈ, ಇಬ್ರಾಹಿಂ ಗಾಂಧಿನಗರ, ನಂದರಾಜ ಸಂಕೇಶ, ಶಾಫಿ ಕುತ್ತಮೊಟ್ಟೆ, ರಾಜು ಪಂಡಿತ್, ಭವಾನಿಶಂಕರ‌ ಕಲ್ಮಡ್ಕ, ಅನಿಲ್ ಪರಿವಾರಕಾನ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೆಲವು ತಿಂಗಳ ಹಿಂದೆ ಸುಳ್ಯಕ್ಕೆ ಆಗಮಿಸಿದ್ದ ಗ್ಲೋಬಲ್ ಟ್ರಸ್ಟ್ ತಂಡ ನಗರದ ಬೊರುಗುಡ್ಡೆಯ ಮಗುವಿನ ಚಿಕಿತ್ಸೆಗೆ 40 ಲಕ್ಷಕ್ಕೂ ಅಧಿಕ ಮೊತ್ತ ಬೇಕಾದ ಸಂದರ್ಭದಲ್ಲಿ ಮಗುವಿನ ಚಿಕಿತ್ಸೆಗೆ ನೆರವು ಮಾಡಲು ಮನವಿಯ ವೀಡಿಯೋ ಮಾಡಿದ್ದರು. ಈ ಹಿನ್ನಲೆಯಲ್ಲಿ ಒಂದು ವಾರದಲ್ಲಿ 58 ಲಕ್ಷಕ್ಕೂ ಮಿಕ್ಕಿ‌ ಮೊತ್ತ ಸಂಗ್ರಹ ಆಗಿತ್ತು. ಇದೀಗ ಮತ್ತೊಬ್ಬ ಬಾಲಕನ ಬದುಕನ್ನು ಬೆಳಗಿಸಲು ಗ್ಲೋಬಲ್ ತಂಡ‌ ಮತ್ತು ಸುಳ್ಯದ ಪ್ರಮುಖರು ಜನತೆಯಲ್ಲಿ ಮನವಿ ಮಾಡಿದ್ದಾರೆ