ಸಂಪಾಜೆ ಜೇಡ್ಲ ಪಶು ಸಂಗೋಪನಾ ಕೇಂದ್ರದಲ್ಲಿ ವಿನೂತನ ಆಚರಣೆ*, *ಮಕರ ಸಂಕ್ರಾಂತಿ ಉತ್ಸವ ಮತ್ತು ಗೋವುಗಳಿಗೆ ಕಿಚ್ಚು ಹಾಯಿಸುವಿಕೆ ಕಾರ್ಯಕ್ರಮ*

0

ಸಂಪಾಜೆಯ ಜೇಡ್ಲದಲ್ಲಿರುವ ಶ್ರೀ ರಾಮಚಂದ್ರಾಪುರ ಮಠದ ಗೋಪಾಲಕೃಷ್ಣ ದೇವಕಿ ಪಶು ಸಂಗೋಪನಾ ಕೇಂದ್ರದಲ್ಲಿ ಜ.15 ರಂದು ಮಕರ ಸಂಕ್ರಾಂತಿ ಪ್ರಯುಕ್ತ ಗೋವುಗಳ ಆರೋಗ್ಯ ಸುಧಾರಣೆ ಹಾಗೂ ಗ್ರಾಮದ ಕ್ಷೇಮಾಭಿವೃದ್ಧಿಗೆ ಪ್ರಾರ್ಥಿಸಿ *ಗೋಪೂಜೆ ಮತ್ತು ಗೋವುಗಳ ಕಿಚ್ಚು ಹಾಯಿಸುವ* ವಿನೂತನ ಕಾರ್ಯಕ್ರಮವು ಜೇಡ್ಲ ಗೋಶಾಲಾ ಆವರಣದಲ್ಲಿ ಕೊಡಗು, ಸುಳ್ಯ, ಗುತ್ತಿಗಾರು ಹಾಗೂ ಈಶ್ವರಮಂಗಲ ವಲಯಗಳ ಸಹಭಾಗಿತ್ವದಲ್ಲಿ ನಡೆಯಿತು.

ಬಯಲುಸೀಮೆಯಲ್ಲಿ ಚಿರಪರಿಚಿತವಾಗಿದ್ದ ಸುಗ್ಗಿಹಬ್ಬದ ಈ ಕಾರ್ಯಕ್ರಮವನ್ನು ಈ ಭಾಗದಲ್ಲಿ ಪ್ರಥಮ ಬಾರಿಗೆ ಆಚರಿಸಲಾಯಿತು.. ಗುರುವಂದನೆ, ಗೋವಂದನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸರಳವಾಗಿ ಅಲಂಕರಿಸಿದ್ದ ಗೋವುಗಳನ್ನು ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಕರೆತರಲಾಯಿತು. ಸುಳ್ಯದ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ನಿತಿನ್ ಪ್ರಭು ಕಾರ್ಯಕ್ರಮ ಉದ್ಘಾಟಿಸಿ ಗೋವುಗಳನ್ನು ಕಿಚ್ಚು ಹಾಯಿಸುವುದರ ಪ್ರಾಮುಖ್ಯತೆ ಹಾಗೂ ಇದರ ಹಿಂದೆ ಇರುವ ವೈಜ್ಞಾನಿಕ ಕಾರಣವನ್ನು ವಿವರಿಸಿ ಮಾತನಾಡಿದರು. ಗೋಶಾಲೆಯ ಪ್ರಧಾನ ಕಾರ್ಯದರ್ಶಿಗಳಾದ ವಿಜಯಕೃಷ್ಣ ಕಬ್ಬಿನಹಿತ್ಲು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಲ್ಲುಗುಂಡಿಯ ವೈದ್ಯರಾದ ಡಾ.ಜಯರಾಮ್ ಭಟ್ ಅವರು ಗೋಬಂಧು ಯೋಜನೆಯನ್ನು ಬಿಡುಗಡೆಗೊಳಿಸಿದರು‌. ಈ ಗೋಬಂಧು ಯೋಜನೆಯ ಪ್ರಥಮ ಸದಸ್ಯತ್ವವನ್ನು ಡಾ.ರಾಧಾಕೃಷ್ಣ ಕೆದುಂಬಾಡಿ ಅವರು ಪಡೆದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಶಾಲೆಯ ಕಾರ್ಯಾಧ್ಯಕ್ಷರಾದ ಡಾ.ರಾಜಾರಾಮ್ ಅಖಿಲಾತಿ ವಹಿಸಿದ್ದರು. ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಿರ್ಮಲಾ ಭರತ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ನಿರಂತರ ಗೋಸೇವೆಯಲ್ಲಿ ತೊಡಗಿಸಿಕೊಂಡಿರುವ ನಾಲ್ವರು ಗೋಪ್ರೇಮಿಗಳಾದ ಸತ್ಯ ಶಂಕರ ಉಬರಡ್ಕ, ಡಾ. ರಾಧಾಕೃಷ್ಣ ಕೆದುಂ ಬಾಡಿ, ಕೃಷ್ಣ ಮೂರ್ತಿ ಸರಳಿಕುಂಜ ಹಾಗೂ ನಾರಾಯಣ ಮೂರ್ತಿ ಕೆ ಆರ್ ರವರನ್ನು,ಗೌರವಿಸಿ ಶಾಲು ಹೊದಿಸಿ, ಕಿರು ಕಾಣಿಕೆಯನ್ನು ಕೊಟ್ಟು ಸನ್ಮಾನಿಸಲಾಯಿತು.

ಸನ್ಮಾನಿತರ ಪೈಕಿ ಕೃಷ್ಣಮೂರ್ತಿ ಸರಳಿಕುಂಜ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಗೋ ಪ್ರೇಮಿ ಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಪ್ರಸ್ತಾಪ ಮಾಡಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಕಾರ್ಯಕ್ರಮದ ಮುಖ್ಯ ಭಾಗವಾಗಿ ಗೋವುಗಳನ್ನು ಕಿಚ್ಚು ಹಾಯಿಸಿ ನಂತರ ಗೋಪೂಜೆ ನೆರವೇರಿಸಿ ಗೋವುಗಳಿಗೆ ಬೆಲ್ಲವನ್ನು ತಿನ್ನಿಸಲಾಯಿತು. ಗವ್ಯಾಧಾರಿತ ಗೊಬ್ಬರವನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು. ಕೆಲವು ಗೋ ಪ್ರೇಮಿಗಳು ಗೊಬ್ಬರವನ್ನು ಖರೀದಿಸುವ ಮೂಲಕ ಗೋಶಾಲೆಯ ಬಗ್ಗೆ ಆತ್ಮೀಯತೆ ಮೆರೆದರು. ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಈಶ್ವರ ಕುಮಾರ್ ಭಟ್ ಸ್ವಾಗತಿಸಿದರು. ಶ್ರೀಮತಿ ಸಂದ್ಯಾಕುಮಾರ್ ಉಬರಡ್ಕ ವಂದಿಸಿದರು. ರಾಮ್ ಮುರಳೀಕೃಷ್ಣ ಕಾರ್ಯಕ್ರಮ ನಿರೂಪಿಸಿದರು.ಕೊಡಗು, ಸುಳ್ಯ, ಗುತ್ತಿಗಾರು, ಈಶ್ವರಮಂಗಲ ವಲಯದ ಅಧ್ಯಕರುಗಳು, ಗುರಿಕ್ಕಾರರು, ಪದಾಧಿಕಾರಿಗಳು, ಗೋಪ್ರೇಮಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.