ಅನಧಿಕೃತ ಮರಳುಗಾರಿಕೆ ನಡೆಸುತ್ತಿರುವ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ

0

ಶಾಸಕರು ಅಧಿಕಾರಿಗಳು ಭೇಟಿ ನೀಡುವ ತನಕ ಪ್ರತಿಭಟನೆ ಮುಂದುವರಿಸುತ್ತೇವೆ-
ಅನಿಲ್ ಕುಮಾರ್

ಸುಳ್ಯ ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯ ವಿರುದ್ಧ ಸುಳ್ಯ ತಾಲೂಕು ಪಂಚಾಯತ್ ಎದುರು ನಡೆಯುತ್ತಿರುವ ಪ್ರತಿಭಟನೆಯು ಮೂರನೇ ದಿನಕ್ಕೆ ಕಾಲಿರಿಸಿದೆ.
ಅನಿಲ್ ಕುಮಾರ್ ಪರಿವಾರಕಾನ ರವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸ್ಥಳೀಯ ತಾಲೂಕು ವರ್ತಕರ ಸಂಘ, ಸ್ಥಳೀಯ ಸಂಘ ಸಂಸ್ಥೆಗಳಾದ ವೀರ ಕೇಸರಿ ವಿಷ್ಣು ಸರ್ಕಲ್ ,ಬೆನಕ ಕಲಾ ಕ್ರೀಡಾ ಸಂಘ ಬೆಂಬಲವನ್ನು ಸೂಚಿಸಿದ್ದಾರೆ.
ಪ್ರತಿಭಟನೆಯಲ್ಲಿ ಜಯರಾಮ ಭಾರದ್ವಾಜ್, ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ , ಅಜಿತ್ ಪೇರಾಲು, ಜಯಂತ ಅಡ್ಕಾರ್, ಸುನಿಲ್ ಕುಮಾರ್ ಪರಿವಾರಕಾನ, ಲವ ಕುಮಾರ್, ರಿಫಾಯಿ ಪೈಚಾರು, ಬೆನಕ ಸಂಘದ ಅಧ್ಯಕ್ಷ ಆತ್ಮರಾಮ,ಗುರುಸ್ವಾಮಿ ಬೀರಮಂಗಲ, ಕುಮಾರ್ ಮಾವಂಜಿ, ಸಂಜು ಕಲ್ಲುಗುಂಡಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ
” 2020 ರಲ್ಲಿ ಅನುಮೋದನೆಗೊಂಡಿರುವ ಮರಳು ನೀತಿ ಜಾರಿ ಮಾಡಿದಲ್ಲಿ ಅಕ್ರಮ ಮರಳುಗಾರಿಕೆ ನಿಲ್ಲಬಹುದು. ಇದರಿಂದ ಸಾಮಾನ್ಯ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಮರಳು ಸಿಗುವುದು. ಸುಳ್ಯದ ಪಯಸ್ವಿನಿ ನದಿಯ ಮರಳು ಉತ್ತಮ ಗುಣಮಟ್ಟದ ಮರಳು ಆಗದಿರುವುದರಿಂದ ಸಾಧಾರಣ ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಲು ಸಾಧ್ಯವಿದೆ. ಗಣಿ ಇಲಾಖೆ ಸೂಚಿಸಿದಂತೆ 10,000 ಮೆ.ಟನ್ ಮರಳುಗಾರಿಕೆ ಮಾಡಲು ಅವಕಾಶವಿದೆ. ಪಂಚಾಯತ್ ಮಟ್ಟದಲ್ಲಿ ಮರಳುಗಾರಿಕೆಗೆ ಅನುಮತಿ ನೀಡಿದಲ್ಲಿ ಅಕ್ರಮ ಮರಳುಗಾರಿಕೆ ಕಡಿವಾಣ ಬೀಳಬಹುದು. ಭ್ರಷ್ಟಾಚಾರವನ್ನು ತಡೆಗಟ್ಟಲು ಸಾಧ್ಯವಿದೆ. ಆದ್ದರಿಂದ ಈ ಬಗ್ಗೆ ಸ್ಥಳೀಯ ಶಾಸಕರು ಸಚಿವರಾಗಿರುವ ಎಸ್.ಅಂಗಾರ ರವರು ಮುತುವರ್ಜಿ ವಹಿಸಿ ಗಣಿ ಇಲಾಖೆಯ ನಿರ್ದೇಶನದಂತೆ ಮರಳು ನೀತಿಯ ಆದೇಶದ ಪ್ರಕಾರ ಅವಕಾಶ ಕಲ್ಪಿಸಿಕೊಡುವಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಪ್ರತಿಭಟನೆ ನೇತೃತ್ವ ವಹಿಸಿದ ಅನಿಲ್ ಕುಮಾರ್ ಮಾತನಾಡಿ ಸ್ಥಳೀಯ ಶಾಸಕರು ಸಚಿವ ಎಸ್ .ಅಂಗಾರ ರವರು ಗಣಿ ಇಲಾಖೆಯ ಅಧಿಕಾರಿಗಳ ಮತ್ತು ಜಿಲ್ಲಾಧಿಕಾರಿಯವರನ್ನು ಕರೆಸಿ ನಮ್ಮ ಬಳಿ ಬಂದು ನಮ್ಮ ಅಹವಾಲು ಸ್ವೀಕರಿಸಿ ಮರಳು ನೀತಿಯ ಕುರಿತು ಮಾತುಕತೆ ನಡೆಸುವ ತನಕ ಪ್ರತಿಭಟನೆ ಕೈ ಬಿಡುವುದಿಲ್ಲ. ಮೂರನೇ ದಿನಕ್ಕೆ ಕಾಲಿರಿಸಿದ ಪ್ರತಿಭಟನೆ ಮತ್ತೆ ಅನಿರ್ದಿಷ್ಟಾವಧಿ ಕಾಲಕ್ಕೆ ಮುಂದೂಡುತ್ತೇವೆ. ಈಗಾಗಲೇ ಹಲವಾರು ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿದ್ದಾರೆ ಎಂದು ಮಾಧ್ಯಮಕ್ಕೆ ತಿಳಿಸಿದರು.