ಅಯ್ಯನಕಟ್ಟೆ ಜಾತ್ರೋತ್ಸವ : ಧಾರ್ಮಿಕ ಸಭಾ ಕಾರ್ಯಕ್ರಮ

0

‘ಮುಸಲ್ಮಾನರನ್ನು ವಿರೋಧಿಸುವುದು ಹಿಂದುತ್ವ ಅಲ್ಲ, ನಮ್ಮ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವುದೇ ಹಿಂದುತ್ವ’ : ದೇವಿಪ್ರಸಾದ್ ಶೆಟ್ಟಿ


ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಮೂರುಕಲ್ಲಡ್ಕ ಮತ್ತು ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವ ಜ. 29ರ ವರೆಗೆ ಜರಗಲಿದ್ದು, ಜ. 28ರಂದು ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ಆಡಳಿತ ಧರ್ಮದರ್ಶಿ ಹೆಗ್ಗಡೆ ಪರಮೇಶ್ವರಯ್ಯ ಕಾಂಚೋಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ ಮಂಗಳೂರು ವಿಭಾಗ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಸಾಣೂರುಗುತ್ತು ದೇವಪ್ರಸಾದ್ ಶೆಟ್ಟಿ ಮಾತನಾಡಿ ‘ನಾನು ನನ್ನದೆಂಬ ಅಹಂಕಾರ ಬಿಟ್ಟು ಧಾರ್ಮಿಕತೆಯನ್ನು ಆಚರಿಸಿಕೊಂಡು ಬರಬೇಕು. ಪ್ರಪಂಚದಲ್ಲಿ ಯಾವುದೇ ದೇಶದಲ್ಲಿ ಅಧ್ಯಯನ ಮಾಡಿದರೂ ಭಾರತದಲ್ಲಿರುವಷ್ಟು ದಾರ್ಶನಿಕರು ಬೇರೆ ದೇಶಗಳಲ್ಲಿಲ್ಲ. ಭಾರತ ದೇವರ‌ಕೋಣೆ ಎಂಬ ಹೆಸರಿಗೆ ಭಾಜನವಾಗಿದೆ. ಆದರೆ ಜೀವನದ ಜಂಜಾಟದಲ್ಲಿ ನಾವು ಧಾರ್ಮಿಕತೆಯನ್ನು ಮರೆಯುತ್ತೇವೆ. ದೇಶಕ್ಕಾಗಿ ತ್ಯಾಗ ಮಾಡಿದ, ಬಲಿದಾನ ಮಾಡಿದ ಮಹನೀಯರನ್ನು ನಾವು ಸ್ಮರಿಸಿಕೊಳ್ಳಬೇಕು. ಆ ಮೂಲಕ ಇತಿಹಾಸವನ್ನು ಅಧ್ಯಯನ ಮಾಡುವ ಅಗತ್ಯ ಇದೆ. ಆಗ ಮಾತ್ರ ನಮ್ಮ ಧಾರ್ಮಿಕತೆ ಉಳಿಯುತ್ತದೆ. ದೈವಗಳ ಆರಾಧನೆಯನ್ನು ನಮ್ಮ ಹಿರಿಯರು ಮಾಡಿಕೊಂಡು ಬಂದಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗುವ ಕೆಲಸ ನಮ್ಮಿಂದಾಗಬೇಕು. ಮುಸಲ್ಮಾನರನ್ನು ವಿರೋಧಿಸುವುದು ಹಿಂದುತ್ವ ಅಲ್ಲ. ನಮ್ಮ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವುದೇ ಹಿಂದುತ್ವ’ ಎಂದರು. ವಿಶೇಷ ಆಹ್ವಾನಿತರಾಗಿ ಬೆಳ್ತಂಗಡಿ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಜೈನ್, ಬೆಳ್ಳಾರೆ ಜ್ಞಾನ ಗಂಗಾ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಎಂ.ಪಿ ಉಮೇಶ್, ಪುರಂದರ ಗೌಡ ಸಪ್ತಗಿರಿ ಕಳಂಜ ಭಾಗವಹಿಸಿದ್ದರು. ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಗೌಡ ಬೇರಿಕೆ, ಜಾತ್ರೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಅನಂತಕೃಷ್ಣ ತಂಟೆಪ್ಪಾಡಿ, ಜೊತೆ ಕಾರ್ಯದರ್ಶಿ ಟಿ. ವಾಸುದೇವ ಆಚಾರ್ಯ, ಸಹಕೋಶಾಧಿಕಾರಿ ಬಿ. ಕುಶಾಲಪ್ಪ ಗೌಡ ಮಣಿಮಜಲು, ಜಾತ್ರೋತ್ಸವ ಸಮಿತಿಯ ಕೋಶಾಧಿಕಾರಿ ಸತೀಶ್ ಕಳಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಶ್ರೀನಾಥ್ ರೈ ದೋಳ್ತೋಡಿ ಸ್ವಾಗತಿಸಿ ಜಾತ್ರೋತ್ಸವ ಸಮಿತಿಯ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಕಿಲಂಗೋಡಿ ವಂದಿಸಿದರು. ಸಮಿತಿಯ ಗೌರವಾಧ್ಯಕ್ಷ ರಾಮಪ್ರಸಾದ ಕಾಂಚೋಡು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಿರಿಧರ್ ಕಳಂಜ ಪ್ರಾರ್ಥಿಸಿದರು. ಜಗದೀಶ್ ಮುಂಡುಗಾರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರ ಕೊಡುವಿಕೆಯಲ್ಲಿ ಯಕ್ಷಗಾನ ಬಯಲಾಟ ಭಸ್ಮಾಸುರ ಮೋಹಿನಿ ನಡೆಯಲಿದೆ. ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಜ. 29ರಂದು ಬೆಳಿಗ್ಗೆ 7.30 ಕ್ಕೆ ತಂಟೆಪಾಡಿ ಶಿರಾಡಿ ದೈವದ ಭಂಡಾರ ಹೊರಡುವುದು, ಬೆಳಿಗ್ಗೆ 8.00ಕ್ಕೆ ಕಳಂಜ ಗುತ್ತಿನಿಂದ ಧೂಮಾವತಿ ದೈವದ ಬಂಡಾರ ಹೊರಡುವುದು ಮತ್ತು ಮೂರುಕಲ್ಲಡ್ಕದಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಟು ಕಲ್ಲಮಾಡದಲ್ಲಿ ದೈವಗಳ ನರ್ತನ ಸೇವೆ, ಬೂಳ್ಯ ವಿತರಣೆ ನಡೆಯಲಿದೆ. ಅಪರಾಹ್ನ 2.30ರಿಂದ ಕಲ್ಲಮಾಡದಲ್ಲಿ ಶಿರಾಡಿ ದೈವದ ದೊಂಪದ ಬಲಿ ನಡೆದು ಮಾರಿ ಹೊರಡಲಿದೆ.